ಚಿತ್ರದುರ್ಗ :
ಜಿಲ್ಲೆಯಲ್ಲಿನ ರೈತರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆ ಬಗೆಹರಿಸಲು ಹಾಗೂ ಸೂಕ್ತ ಕ್ರಮ ಕೈಗೊಳ್ಳಲು, ತಿಂಗಳಿಗೊಮ್ಮೆ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಸಭೆಯನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ತಿಳಿಸಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ರೈತರೊಂದಿಗೆ ಸಂವಾದ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಪದೇ ಪದೇ ಬರ ಪರಿಸ್ಥಿತಿ ತಲೆದೋರುತ್ತಿದ್ದು, ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗುತ್ತಿದೆ, ಹೀಗಾಗಿ ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಕಡಿಮೆ ಮಳೆಯಲ್ಲಿ ಹೆಚ್ಚು ಇಳುವರಿ ಬರುವಂತಹ ಬೆಳೆಗಳನ್ನು ಬೆಳೆಯಬೇಕು. ಸಾಂಪ್ರದಾಯಕ ಬೆಳೆಗಳಿಗೆ ಪರ್ಯಾಯವಾಗಿ ಸಿರಿಧಾನ್ಯ ಬೆಳೆಗಳಾದ ಸಜ್ಜೆ, ನವಣೆ, ರಾಗಿ ಇತ್ಯಾದಿ ಬೆಳೆಗಳನ್ನು ಬೆಳೆದರೆ, ಆರ್ಥಿಕವಾಗಿ ನಷ್ಟ ಅನುಭವಿಸುವುದು ತಪ್ಪುತ್ತದೆ ಎಂದು ಸಲಹೆ ನೀಡಿದರು
ಕೃಷಿ ಇಲಾಖೆಯಿಂದ ರೈತರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬೇಕು. ವಿವಿಧ ರೀತಿಯ ವಿಮೆಗಳಂತೆಯೇ ಬೆಳೆ ವಿಮೆಯೂ ಜಾರಿಯಲ್ಲಿದ್ದು, ವಿಮಾ ಕಂಪನಿಗಳು ಸುಮಾರು 7 ವರ್ಷದ ಬೆಳೆಗಳ ಸರಾಸರಿ ನಷ್ಟಕ್ಕೆ ಅನುಗುಣವಾಗಿ ಬೆಳೆವಿಮೆ ನೀಡುವುದನ್ನು ಅನುಸರಿಸುತ್ತವೆ. ಆಯಾ ಗ್ರಾಮದ ಪ್ರಮುಖ ಬೆಳೆ ನಷ್ಟವಾಗಿದ್ದರೆ ಮಾತ್ರ ಆ ಗ್ರಾಮದ ಎಲ್ಲಾ ರೈತರಿಗೂ ಬೆಳೆ ವಿಮೆ ದೊರೆಯುತ್ತದೆ ಎಂದರು
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ‘ಜಲಶಕ್ತಿ’ ಹಾಗೂ ರಾಜ್ಯಸರ್ಕಾರ ‘ಜಲಾಮೃತ’ ಯೋಜನೆಗಳನ್ನು ಜಾರಿಗೆ ತಂದು, ಅಂತರ್ಜಲ ಮಟ್ಟ ಹೆಚ್ಚಿಸಲು ತಯಾರಿ ನಡೆಸುತ್ತಿದೆ. ಜಾನುವಾರುಗಳಿಗೆ ಸರಿಯಾದ ಮೇವು ದೊರಕದ ಕಾರಣ ರೈತರು ತಮ್ಮ ಹೊಲಗಳ ಬದು ಹಾಗೂ ಲಭ್ಯವಿರುವ ಕಡೆಗಳಲ್ಲಿ ಮರ ಗಿಡಗಳನ್ನು ಬೆಳೆಸಬೇಕು. ಕೃಷಿಯೇತರ ಚಟುವಟಿಕೆಗಳಾಗಿ ಬಡವರ ಎಟಿಎಂ ಎಂದೇ ಪ್ರಖ್ಯಾತವಾಗಿರುವ ಕುರಿ ಮೇಕೆ ಸಾಕಾಣಿಕೆ ಹಾಗೂ ಹೈನುಗಾರಿಕೆಯತ್ತ ಗಮನಹರಿಸಬೇಕೆಂದು ತಿಳಿಹೇಳಿದರು.
ಉಪವಿಭಾಗಾಧಿಕಾರಿ ವಿಜಯ್‍ಕುಮಾರ್ ಮಾತನಾಡಿ, ರೈತರ ಸಮಸ್ಯೆಗಳನ್ನು ನೇರವಾಗಿ ಆಲಿಸುವುದಲ್ಲದೇ ಕೂಡಲೇ ಪರಿಹಾರ ನೀಡುವ ಸಲುವಾಗಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲೆಯು ಕಳೆದ 10 ವರ್ಷಗಳಲ್ಲಿ 8 ವರ್ಷ ಬರಗಾಲಕ್ಕೆ ತುತ್ತಾಗಿದೆ. ಜಿಲ್ಲೆಯಲ್ಲಾಗುತ್ತಿರುವ ಅಂತರ್ಜಲ ಮಟ್ಟ ಕುಸಿತ, ಬೋರವೆಲ್‍ನಲ್ಲಿ ನೀರು ಕಡಿಮೆಯಾಗಿರುವುದಕ್ಕೆ ಮಾರ್ಗೋಪಾಯವಾಗಿ ಕಡಿಮೆ ವೆಚ್ಚ, ಹೆಚ್ಚು ಆದಾಯ ಪಡೆಯಬಹುದಾದ ಬೆಳೆಗಳತ್ತ ರೈತರು ಗಮನ ನೀಡಬೇಕಿದೆ. ಇದಕ್ಕೆ ಬೇಕಾದ ನೆರವು ನೀಡಲು ಕೃಷಿ ಇಲಾಖೆ ಸಿದ್ಧವಿದೆ. ರೈತರು ಇದಕ್ಕೆ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು ಎಂದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಪಿ. ಭೂತಯ್ಯ ಮಾತನಾಡಿ, ಕಳೆದ ವರ್ಷ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಅರ್ಜಿ ಸಲ್ಲಿಸಿದ್ದು, ಇದುವರೆಗೂ ರೈತರ ಖಾತೆಗೆ ಹಣ ಸಂದಾಯವಾಗಿಲ್ಲ. ಬರಪೀಡಿತ ಪ್ರದೇಶಗಳೆಂದು ಘೋಷಣೆಯಾದರೂ ರೈತರಿಗೆ ರಿಯಾಯಿತಿ ಹಾಗೂ ಬೆಳೆ ಪರಿಹಾರಗಳು ರೈತರ ಕೈ ಸೇರಿಲ್ಲ. ಜಿಲ್ಲಾದ್ಯಂತ ಶೇ. 90 ರಷ್ಟು ಮಳೆಯಿಲ್ಲದೇ ರೈತರು ಪರಿತಪಿಸುತ್ತಿದ್ದಾರೆ. ಬೆಳೆವಿಮೆ ನೊಂದಣಿಗೆ ಜುಲೈ 31 ಕೊನೆ ದಿನವಾಗಿದ್ದು, ರೈತರ ಅನುಕೂಲಕ್ಕಾಗಿ ಅವಧಿ ವಿಸ್ತರಣೆ ಮಾಡಬೇಕು. ಜೊತೆಗೆ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ಕೈಗೊಳ್ಳಬೇಕು. ಜಿಲ್ಲೆಯಲ್ಲಿನ ಕೆರೆಗಳ ಹೂಳೆತ್ತಿಸಿ, ರೈತರ ಹೊಲಗಳಿಗೆ ಉಚಿತವಾಗಿ ಮಣ್ಣು ಹಾಕಿಸುವ ಕಾರ್ಯವಾಗಬೇಕು ಎಂದು ಒತ್ತಾಯಿಸಿದರು
ರೈತ ಮುಖಂಡ ಈಚಗಟ್ಟ ಸಿದ್ದವೀರಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಆನಂದ್, ಲೀಡ್‍ಬ್ಯಾಂಕ್ ವ್ಯವಸ್ಥಾಪಕ ನಿಂಗೇಗೌಡ, ವಿಮಾ ಕಂಪನಿ ದಾವಣಗೆರೆ ವಿಭಾಗೀಯ ಯೋಜನಾಧಿಕಾರಿ ಟಿ. ನಾಗಲಿಂಗಚಾರಿ, ವಸಂತ್ ಕುಮಾರ್ ಹಾಗೂ ಜಿಲ್ಲೆಯ ವಿವಿಧ ರೈತ ಸಂಘಟನೆಯ ಮುಖಂಡರುಗಳು ಮತ್ತು ರೈತರು ಭಾಗವಹಿಸಿದ್ದರು.