ತುಮಕೂರು
ಆಧಾರ್ ನೋಂದಣಿ, ತಿದ್ದುಪಡಿ ಸೇವೆಯ ಅಧ್ವಾನ ಸದ್ಯಕ್ಕೆ ಬಗೆಹರಿಯುವಂತಿಲ್ಲ. ಆಧಾರ್ ನೋಂದಣಿ, ಇಲ್ಲವೆ ತಿದ್ದುಪಡಿ ಮಾಡಿಸಲು ಆಧಾರ್ ಕೇಂದ್ರಗಳಲ್ಲಿ ಈ ಹೊತ್ತು ಟೋಕನ್ ಪಡೆದುಕೊಂಡರೆ ಸರದಿ ಬರುವುದು ಎರಡು ತಿಂಗಳ ನಂತರವೇ. ಅಲ್ಲಿಯವರೆಗೂ ಕಾಯಬೇಕು. ಇಲ್ಲವೆ ಎಲ್ಲಿ ಬೇಗ ಸಾಧ್ಯವಾಗಬಹುದು ಎಂದು ಆಧಾರ್ ಕೇಂದ್ರಗಳಿಗೆ ಅಲೆಯುವುದು ಇದೇ ಆಗಿದೆ ಜನರಿಗೆ. ಇಡೀ ರಾಜ್ಯದಲ್ಲಿ ಈ ಸಮಸ್ಯೆ ಇದೆ, ನಾವೇನೂ ಮಾಡಲಾಗೊಲ್ಲ ಎನ್ನುವಂತೆ ಅಧಿಕಾರಿವರ್ಗ ಕೈಚೆಲ್ಲಿ ಕುಳಿತಂತಿದೆ.
ಹಿಂದೆ ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ ಆಧಾರ್ ಕೇಂದ್ರಗಳಿದ್ದವು. ಆಗ ಇಷ್ಟೊಂದು ಸಮಸ್ಯೆ ಇರಲಿಲ್ಲ. ಈಗ ನಾಡ ಕಚೆರಿಗಳಲ್ಲಿ ಒಂದೊಂದು ಕೇಂದ್ರ ತೆರೆಯಲಾಗಿದೆ. ಜಿಲ್ಲೆಯ 50 ನಾಡ ಕಚೆರಿಗಳ ಆಧಾರ್ ಕೇಂದ್ರಗಳ ಪೈಕಿ ತಾಂತ್ರಿಕ ತೊಂದರೆಯಿಂದ ಐದು ಕೇಂದ್ರಗಳಲ್ಲಿ ಆಧಾರ್ ಸೇವೆ ಸ್ಥಗಿತಗೊಂಡಿದೆ. ಉಳಿದ ಕೇಂದ್ರಗಳಲ್ಲಿ ನಿಯಮಿತವಾಗೇನೂ ಕೆಲಸಗಳಾಗುತ್ತಿಲ್ಲ. ಅಲ್ಲೂ ತಾಂತ್ರಿಕ ಸಮಸ್ಯೆಗಳು, ಅನುಭವ ಇಲ್ಲದ ಸಿಬ್ಬಂದಿಯಿಂದಾಗಿ ಸೇವೆ ವಿಳಂಬ ಆಗುತ್ತಿದೆ.
ವಿವಿಧ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಬೇಕಾಗಿದೆ. ಹಾಲಿ ಹೊಂದಿರುವ ಆಧಾರ್‍ನ ಮೊಬೈಲ್ ನಂಬರ್ ಜೋಡಣೆಯಾಗುತ್ತಿಲ್ಲ ಎಂಬ ದೂರುಗಳ ಕಾರಣ ಆಧಾರ್ ಕಾರ್ಡ್ ಮಾಹಿತಿ ತಿದ್ದುಪಡಿ ಮಾಡಿಸಬೇಕಾಗಿದೆ. ವಿದ್ಯಾರ್ಥಿಗಳ ಶಾಲಾ ಕಾಲೇಜುಗಳ ಪ್ರವೇಶ, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು, ಬ್ಯಾಂಕ್ ಖಾತೆ ತೆರೆಯಲು,ಸೌಕರ್ಯ, ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ಬೇಕು. ನೋಂದಣಿ ಹಾಗೂ ತಿದ್ದುಪಡಿಗಾಗಿ ಆಧಾರ್ ಕೇಂದ್ರಕ್ಕೆ ಬಂದವರಿಗೆ ಮುಂದಿನ ಎರಡು ತಿಂಗಳ ನಂತರದ ದಿನಾಂಕ ನಿಗದಿ ಮಾಡಿ ಅಂದು ಬರಲು ಟೋಕನ್ ನೀಡಲಾಗುತ್ತದೆ. ತುರ್ತು ಇರುವವರು ಯಾವುದಾದರೂ ಕೇಂದ್ರದಲ್ಲಿ ಬೇಗ ಮಾಡಿಸಿಕೊಳ್ಳಲು ಸಾಧ್ಯವೆ ಎಂದು ಆಧಾರ್ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಆದರೆ ಎಲ್ಲಿ ಹೋದರೂ ಟೋಕನ್ ನೀಡಿ ಕಳುಹಿಸಲಾಗುತ್ತದೆ. ಹೀಗಾಗಿ ಆಧಾರ್ ಸೇವೆಯನ್ನು ಸಾರ್ವಜನಿಕರು ಸಕಾಲದಲ್ಲಿ ಪಡೆಯಲು ಸಾಧ್ಯವಾಗುತ್ತಿಲ್ಲ.
ಜಿಲ್ಲೆಯ 50 ನಾಡ ಕಚೇರಿಗಳಲ್ಲದೆ ತುಮಕೂರಿನಲ್ಲಿ ತಾಲ್ಲೂಕು ಕಚೇರಿ, ತುಮಕೂರು ಒನ್ ಕೇಂದ್ರಗಳಲ್ಲಿ, ಅಂಚೆ ಕಚೇರಿ, ಕೆಲ ಬ್ಯಾಂಕ್ ಶಾಖೆಗಳಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಸೇವೆಯ ವ್ಯವಸ್ಥೆ ಇದೆ. ಆದರೆ ಎಲ್ಲ ಕಡೆಯೂ ಟೋಕನ್ ಪಡೆದು ಕಾಯಲೇಬೇಕಾಗಿದೆ. ಆಧಾರ್ ಕೇಂದ್ರಗಳ ಬಳಿ ಜನಸಂದಣಿ ನಿಯಂತ್ರಿಸಲು ಬೆಳಗ್ಗೆ 10 ರಿಂದ 11 ಗಂಟೆವರೆಗೆ ಟೋಕನ್ ನೀಡಲಾಗುತ್ತದೆ. ತಡವಾಗಿ ಬಂದವರಿಗೆ ಟೋಕನ್ ಸಿಗುವುದಿಲ್ಲ.
ಅವರು ಮತ್ತೆ ನಾಳೆ ಬೆಳಗ್ಗೆ ಬಂದು ಟೋಕನ್ ಪಡೆಯಬೇಕಾಗುತ್ತದೆ. ಬ್ಯಾಂಕ್ ಶಾಖೆಗಳಲ್ಲಿ ಆಧಾರ್ ಸೇವೆಯ ವ್ಯವಸ್ಥೆ ಇದ್ದರೂ ಇಲ್ಲಿ ಬ್ಯಾಂಕಿನ ಖಾತೆದಾರರಿಗೆ ಮಾತ್ರ ಸೇವೆ ಒದಗಿಸುತ್ತಿದ್ದಾರೆ ಎಂಬ ದೂರುಗಳಿವೆ.
ಜಿಲ್ಲೆಯಲ್ಲಿ ಸುಮಾರು ಐದು ಸಾವಿರ ಜನ ಆಧಾರ್ ಸೇವೆ ನಿರೀಕ್ಷಿಸಿ ಟೋಕನ್ ಪಡೆದು ತಮಗೆ ನಿಗದಿಪಡಿಸಿದ ದಿನಕ್ಕಾಗಿ ಕಾಯುವಂತಾಗಿದೆ. ಒಂದು ಕೇಂದ್ರದಲ್ಲಿ ಒಂದು ದಿನಕ್ಕೆ 60 ಜನರಿಗೆ ಟೋಕನ್ ನೀಡಲಾಗುತ್ತದೆ. ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿ ಸೇವೆ ಒದಗಿಸಲು ಸೂಚನೆ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಹೇಳಿದರು.
ವಿದ್ಯಾರ್ಥಿಗಳ ಶಾಲಾ ಪ್ರವೇಶಕ್ಕೆ ಆಧಾರ್ ಕಡ್ಡಾಯ ಮಾಡಬೇಡಿ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ಡಿಡಿಪಿಐಗೆ ಸೂಚನೆ ನೀಡಿದ್ದಾರೆ. ಆದರೆ, ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳಿಗೆ ಆಧಾರ್ ಆಗತ್ಯವಿದೆ. ಅಂತಹ ವಿದ್ಯಾರ್ಥಿಗಳ ಆಧಾರ್ ನೋಂದಣಿ, ತಿದ್ದುಪಡಿಗೆ ಆದ್ಯತೆ ನೀಡುವಂತೆ ಹೇಳಿದ್ದಾರೆ.
ವಿದ್ಯಾರ್ಥಿ ವೇತನ ಪಡೆಯುವ ಮಕ್ಕಳ ಆಧಾರ್ ನೋಂದಣಿಗೆ ಅನುಕೂಲ ಆಗಲಿ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಶುಭಾ ಕಲ್ಯಾಣ್ ಅವರ ಸೂಚನೆ ಮೇರೆಗೆ ತುಮಕೂರು ಡಿಡಿಪಿಐಗೆ ಎರಡು ಸಿಇಜಿ ಕಿಟ್ ನೀಡಲಾಗಿದೆ ಎಂದು ಚನ್ನಬಸಪ್ಪ ಹೇಳಿದರು.ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಿ ತುಮಕೂರು ಹಾಗೂ ಗುಬ್ಬಿ ಬಿಇಓ ಕಚೆರಿಯಲ್ಲಿ ಒಂದೊಂದು ಕಿಟ್ ಬಳಸಿ ವಿದ್ಯಾರ್ಥಿಗಳಿಗೆ ಆಧಾರ್ ಸೇವೆಗೆ ಒದಗಿಸಲಾಗುತ್ತಿದೆ ಎಂದು ತುಮಕೂರು ಡಿಡಿಪಿಐ ಆರ್.ಕಾಮಾಕ್ಷಿ ಹೇಳಿದ್ದಾರೆ.
ಆದರೆ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಆಧಾರ್ ಕಿಟ್ ನೀಡಿಲ್ಲ. ಈ ಶೈಕ್ಷಣಿಕ ಜಿಲ್ಲೆಯಲ್ಲಿ ಇನ್ನೂ 3 ಸಾವಿರ ವಿದ್ಯಾರ್ಥಿಗಳ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಆಗುವುದು ಬಾಕಿ ಇದೆ. ನಮಗೂ ಒಂದು ಆಧಾರ್ ಕಿಟ್ ಕೊಡಿ ಎಂದು ಡಿಡಿಪಿಐ ಕೋರಿದ್ದಾರೆ.