ಚಿಕ್ಕನಾಯಕನಹಳ್ಳಿ
ಕಾರ್ಮಿಕರ ಕುಟುಂಬದ ಸದಸ್ಯರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ಎಂ.ಆಲದಕಟ್ಟಿ ಹೇಳಿದರು.
ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ನಡೆದ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಅಪಘಾತ ಜೀವರಕ್ಷಕ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್ಗಳು ಅಪಘಾತಗಳಿಗೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿದೆ.
ಇವರು ಅಪಘಾತಕ್ಕೀಡಾದಾಗ, ಮರಣಕ್ಕೆ ತುತ್ತಾಗುವ, ಶಾಶ್ವತ ದುರ್ಬಲತೆ ಹೊಂದಿದ ಸಂದರ್ಭದಲ್ಲಿ ಅವರ ದುಡಿಮೆಯನ್ನೇ ಅವಲಂಬಿಸಿರುವ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ ಎಂಬ ದೃಷ್ಟಿಯಿಂದ ಕಾರ್ಮಿಕರ ಕುಟುಂಬಕ್ಕೆ ಭದ್ರತೆ ಒದಗಿಸಲು ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಜಾರಿಯಲ್ಲಿದೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಸುರೇಶ್ ಮಾತನಾಡಿ, ರಸ್ತೆಯಲ್ಲಿ ಅಪಘಾತವಾದಾಗ ರಕ್ಷಣೆ ಮಾಡಿದಾಗ ಪೆÇಲೀಸ್ ಇಲಾಖೆ ಅವರನ್ನು ಸಾಕ್ಷಿ ಎಂದು ಪರಿಗಣಿಸುವುದಿಲ್ಲ. ಈ ಬಗ್ಗೆ ಸುಪ್ರಿಂಕೋರ್ಟ್ ಕೂಡ ಆದೇಶ ನೀಡಿದೆ. ಹಾಗಾಗಿ ಯಾರೇ ವ್ಯಕ್ತಿ ಅಪಘಾತವಾದರೂ ಮೊದಲು ಅವರ ರಕ್ಷಣೆ ಮಾಡಿ ಜೀವ ಉಳಿಸಿ ಎಂದು ಹೇಳಿದರು.
ಸಬ್ಇನ್ಸ್ಪೆಕ್ಟರ್ ನವೀನ್ಕುಮಾರ್ ಮಾತನಾಡಿ, ಅಪಘಾತದ ಸಂದರ್ಭದಲ್ಲಿ ಮನುಷ್ಯರು ಮನುಷ್ಯತ್ವವನ್ನು ಪರಿಗಣಿಸಬೇಕು. ಇಂತಹ ಜಾತಿ, ಧರ್ಮ ಎಂದು ನೋಡದೆ ಜೀವ ರಕ್ಷಣೆ ಮಾಡಿ, ಪ್ರಥಮ ಚಿಕಿತ್ಸೆ ನೀಡಿ ಎಂದು ಸಲಹೆ ನೀಡಿದರು.ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಮಾತನಾಡಿ, ಇಂದು ಅಪಘಾತವಾದರೆ ಮೊದಲು ಮೊಬೈಲ್ ಫೋನ್ಗಳನ್ನು ಬಳಸಿ ಅಪಘಾತದ ಚಿತ್ರೀಕರಣ ಮಾಡುತ್ತಿದ್ದಾರೆ. ಇಂತಹ ಪ್ರಕ್ರಿಯೆ ಒಳ್ಳೆಯದಲ್ಲ.
ಅಪಘಾತವಾದ ಸಂದರ್ಭದಲ್ಲಿ ಮೊದಲು ಅವರನ್ನು ರಕ್ಷಣೆ ಮಾಡಿ ಜೀವ ಉಳಿಸುವುದು ಮನುಷ್ಯರಾದ ನಮ್ಮವರ ಕರ್ತವ್ಯ, ಯಾರಿಗೋ ಕರೆ ಮಾಡಿ ಇಂತಹ ಜಾಗದಲ್ಲಿ ಅಪಘಾತವಾಗಿದೆ ಬಂದು ರಕ್ಷಿಸಿಕೊಳ್ಳಿ ಎನ್ನುವುದು ಮೂರ್ಖತನ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ತೇಜಸ್ವಿನಿ, ಕಾರ್ಮಿಕ ನಿರೀಕ್ಷಕರಾದ ಟಿ.ಭಾರತಿ, ಮಾರುತಿ ಟ್ಯಾಕ್ಸಿ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಸಿ.ಟಿ.ಗುರುಮೂರ್ತಿ, ಆಟೋ ಚಾಲಕರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ್, ಸಂಪನ್ಮೂಲ ವ್ಯಕ್ತಿ ಡಾ.ಹಿರೇಮಠ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








