ತುಮಕೂರು
ಜಿಲ್ಲೆಯ ಬ್ಯಾಂಕ್ ಶಾಖೆಗಳಲ್ಲಿ ಆಧಾರ್ ಸೇವೆಯಲ್ಲಿ ಯಾವುದೇ ಗೊಂದಲವಿಲ್ಲ ನಿಯಮಿತವಾಗಿ ಸೇವೆ ಒದಗಿಸಲಾಗುತ್ತಿದೆ ಎಂದು ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿ.ಎಸ್. ಜ್ಯೋತಿಗಣೇಶ್ ಹೇಳಿದರು.ಬ್ಯಾಂಕ್ ಶಾಖೆಗಳಲ್ಲಿ ಬ್ಯಾಂಕಿನ ಗ್ರಾಹಕರಿಗೆ ಮಾತ್ರ ಆಧಾರ್ ಸೇವೆಗೆ ಆದ್ಯತೆ ನೀಡಲಾಗುತ್ತದೆ ಎಂಬ ಸಾರ್ವಜನಿಕರ ದೂರು ಕುರಿತು ಪ್ರಜಾಪ್ರಗತಿಯಲ್ಲಿ ಪ್ರಕಟವಾದ ವರದಿಗೆ ಸ್ಪಷ್ಟೀಕರಣ ನೀಡಿದ ಅವರು, ಅಗತ್ಯವಿರುವ ಎಲ್ಲರಿಗೂ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸಂಬಂಧ ಸೇವೆ ಒದಗಿಸಲಾಗುತ್ತಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದರು.
ತುಮಕೂರು ನಗರದಲ್ಲಿ ಏಳು ಸೇರಿ ಜಿಲ್ಲೆಯಲ್ಲಿ ಒಟ್ಟು 17 ಬ್ಯಾಂಕ್ ಶಾಖೆಗಳಲ್ಲಿ ಆಧಾರ್ ಸೇವೆ ನೀಡಲಾಗುತ್ತಿದೆ. ಇಡೀ ರಾಜ್ಯದಲ್ಲಿ ಸೇವೆ ನಡೆಯುತ್ತಿರುವುದರಿಂದ ನೆಟ್‍ವರ್ಕ್ ಸ್ಲೋ ಆಗಿ ಸ್ವಲ್ಪ ತಡ ಆಗಬಹುದು ಹೊರತು, ಸೇವೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ತಾವು ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಖುದ್ದು ಪರಿಶೀಲನೆ ಮಾಡುತ್ತಿರುವುದಾಗಿ ಹೇಳಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ತುಮಕೂರು, ಕುಣಿಗಲ್, ಶಿರಾ, ಚಿಕ್ಕನಾಯಕನಹಳ್ಳಿ, ಬುಕ್ಕಾಪಟ್ಟಣ, ತುರುವೇಕೆರೆ, ಕೊರಟಗೆರೆ, ಗುಬ್ಬಿ ಶಾಖೆಗಳು, ಕೆನರಾ ಬ್ಯಾಂಕಿನ ತುಮಕೂರು (ಎಸ್ ಎಸ್ ಪುರಂ ಶಾಖೆ), ಚಿಕ್ಕನಾಯಕನಹಳ್ಳಿ, ತಿಪಟೂರಿನ ಕರ್ನಾಟಕ ಬ್ಯಾಂಕ್ ಶಾಖೆ, ಅಲ್ಲದೆ ತುಮಕೂರು ನಗರದಲ್ಲಿ ಯೂಕೊ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಇಂಡಿಯನ್ ಓವರ್‍ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರ ಬ್ಯಾಂಕ್ ಶಾಖೆಗಳಲ್ಲಿ ಆಧಾರ್ ಸೇವೆ ನೀಡಲಾಗುತ್ತಿದೆ ಎಂದು ಜ್ಯೋತಿಗಣೇಶ್ ಹೇಳಿದರು.
ಎಲ್ಲಾ ಬ್ಯಾಂಕ್‍ಗಳಲ್ಲೂ ದಿನಕ್ಕೆ 35 ರಿಂದ 40 ಜನರಿಗೆ ಸೇವೆ ಒದಗಿಸಲು ಸಾಧ್ಯವಾಗುತ್ತಿದೆ. ಆದರೆ ಯಾರಿಗೂ ಎರಡು ತಿಂಗಳ ನಂತರದ ದಿನಾಂಕಕ್ಕೆ ಬರಲು ಟೋಕನ್ ನೀಡುವುದಿಲ್ಲ. ಕೆಲ ಶಾಖೆಗಳಲ್ಲಿ ಒಂದು ವಾರದವರೆಗೂ ಟೋಕನ್ ನೀಡಬಹುದು. ಜನ ಸಂದಣಿ ಇಲ್ಲದ ಕಡೆ ಟೋಕನ್ ಇಲ್ಲದವರೂ ಬಂದು ಅದೇ ದಿನ ಸೇವೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕುವ ವಿದ್ಯಾರ್ಥಿಗಳಿಗೆ ಆಧಾರ್ ಅಗತ್ಯವಿದ್ದು, ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಇಂತಹ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತದೆ. ಜೊತೆಗೆ ಇತರೆ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯುವವರೂ ಆಧಾರ್ ನೋಂದಣಿ, ತಿದ್ದುಪಡಿಗೆ ಬರುತ್ತಾರೆ. ಬ್ಯಾಂಕ್‍ಗಳಲ್ಲಿ ಜನಸಂದಣಿ ಹೆಚ್ಚಾಗದಂತೆ ನಿಭಾಯಿಸಿಕೊಂಡು ನಿಯಮಿತವಾಗಿ ಸೇವೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.