ಪಾವಗಡ
ವಿಶೇಷ ವರದಿ:ಎಚ್.ರಾಮಾಂಜಿನಪ್ಪ
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲದ ಕಾರಣ ರೋಗಿಗಳಿಗೆ ನರಕಯಾತನೆಯಾಗಿದೆ. ಡಾಕ್ಟರ್‍ಗಳು ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಜನಪ್ರತಿನಿಧಿಗಳು ಇದ್ದೂ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾವಗಡ ತಾಲ್ಲೂಕಿನಲ್ಲಿ ಹೆಚ್ಚಿನದಾಗಿ ರೈತಾಪಿ ಜನ ಹಾಗೂ ಕೂಲಿ ಕಾರ್ಮಿಕರು ಇದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿ ಕೊಳ್ಳಲು ಹಣವಿಲ್ಲದೆ, ಅವರಿಗೆ ಸರ್ಕಾರಿ ಆಸ್ಪತ್ರೆಯೆ ಗತಿಯಾಗಿದೆ. ಇತ್ತೀಚೆಗೆ ತಾಲ್ಲೂಕಿನಲ್ಲಿ ಡೆಂಗ್ಯು, ಮಲೇರಿಯಾ, ಚಿಕನ್‍ಗುನ್ಯ ರೋಗಗಳು ಹರಡುತ್ತಿವೆ. ಆಸ್ಪತ್ರೆಯಲ್ಲಿ ರೋಗಿಗಳು ತುಂಬಿದ್ದಾರೆ. ಒಬ್ಬರೆ ಡಾಕ್ಟರ್ ಇದ್ದು, ಕಾದು ಕುಳಿತ ರೋಗಿಗಳು ತಾಲ್ಲೂಕು ಆಡಳಿತಕ್ಕೆ ಛೀಮಾರಿ ಹಾಕುತ್ತಿದ್ದಾರೆ.
ತಾಲ್ಲೂಕಿನಲ್ಲಿ ಮಳೆ ಬೆಳೆ ಇಲ್ಲದೆ ಇಲ್ಲಿನ ರೈತರು ಹಾಗೂ ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಾಲ್ಲೂಕಿನಲ್ಲಿ ಆಡಳಿತ ಕುಂಟಿತವಾಗಿ, ಅಧಿಕಾರಿಗಳನ್ನು ಹೇಳುವವರು, ಕೇಳುವವರಿಲ್ಲದೆ ಸಾರ್ವಜನಿಕರಿಗೆ ಯಾವುದೇ ಇಲಾಖೆಯಲ್ಲಿ ಕೆಲಸಗಳು ಸುಗಮವಾಗಿ ಆಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ತಿಂಗಳ ಹಿಂದೆ ಉತ್ತಮ ವೈದ್ಯರಿದ್ದರು. ಮಕ್ಕಳ ವೈದ್ಯ ಡಾ. ರಂಗೇಗೌಡ ಮೂರು ತಿಂಗಳ ಹಿಂದೆ ವರ್ಗಾವಣೆ ಗೊಂಡಿದ್ದಾರೆ. ಡಾ.ಮಾರುತೀಶ್ ಮಂಗಳವಾರ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇಂತಹ ಒಳ್ಳೆ ಡಾಕ್ಟರ್ ವರ್ಗವಾದರೆ ಇಲ್ಲಿಗೆ ಬರುವವರು ಯಾರು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಇತ್ತೀಚೆಗೆ ಸಾರ್ವಜನಿಕ ಆಸ್ಪತ್ರೆಗೆ ಮಾಜಿ ಕಾರ್ಮಿಕ ಸಚಿವ ವೆಂಕಟರವಣಪ್ಪ 15 ಕೋಟಿ ರೂ.ಮಂಜೂರು ಮಾಡಿಸಿದ್ದಾರೆ. ಆದರೆ ವೈದ್ಯರೆ ಇಲ್ಲದಿದ್ದರೆ ಏನು ಪ್ರಯೋಜನ? ವೈದ್ಯರನ್ನು ನೇಮಕ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂಬುದು ರೋಗಿಗಳ ಬೇಡಿಕೆ ಆಗಿದೆ.
ಮಧುಗಿರಿ ತಾಲ್ಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಜಿಲ್ಲಾ ಮಟ್ಟದಲ್ಲಿ ಇದ್ದಂತೆ ಇದೆ. ಆಯಾ ರೋಗಕ್ಕೆ ಸಂಬಂಧಿಸಿದ ವೈದ್ಯರ ಕೊಠಡಿಗೆ ನಾಮ ಫಲಕ ಹಾಕಿದೆ. ಅಲ್ಲದೆ ಆಸ್ಪತ್ರೆಯ ಸ್ವಚ್ಛತೆ ಉತ್ತಮವಾಗಿದೆ. ಅಂತೆಯೆ ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲೂ ವ್ಯವಸ್ಥಿತವಾಗಿ ಡಾಕ್ಟರ್‍ಗಳ ಕೊಠಡಿಗಳಿಗೆ ನಾಮ ಫಲಕ ಹಾಕಿಸಿದರೆ ರೋಗಿಗಳ ಪರದಾಟ ತಪ್ಪತ್ತದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸುಮಾರು 25 ವರ್ಷಗಳಿಂದ ಮಳೆಯಿಲ್ಲ, ಬೆಳೆಯಿಲ್ಲ ಎಂಬುದು ರಾಜ್ಯಕ್ಕೆ ಗೊತ್ತಿರುವ ವಿಚಾರ. ಇಂತಹ ತಾಲ್ಲೂಕಿನ ಬಗ್ಗೆ ಜನಪ್ರತಿ ನಿಧಿಗಳು ಶ್ರದ್ದೆಯಿಂದ ಅನುಕೂಲ ಕಲ್ಪಿಸಿ ಜನತೆಯ ಋಣ ತೀರಿಸಲಿ ಎಂಬುದು ಪ್ರಜ್ಞಾವಂತರ ಮಾತಾಗಿದೆ.ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಪರದಾಡುವ ಪರಿಸ್ಥಿತಿ ಇದೆ. ಹೀಗಿದ್ದೂ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾಕ್ಟರ್ ಮಹಾಂತೇಶ್‍ರವರನ್ನು ವರ್ಗಾವಣೆ ಮಾಡಿರುವುದು ಎಷ್ಟರ ಮಟ್ಟಿಗೆ ನ್ಯಾಯಯುತವಾಗಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರಸ್ತುತ 7 ಜನ ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ರಾತ್ರಿ ಇಬ್ಬರು ವೈದ್ಯರು ಕಾರ್ಯ ನಿರ್ವಹಿಸಿದರೆ, ಹಗಲಿನಲ್ಲಿ ಮೂವರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಸಹ ಕೆಲವರು ಗೈರಾದಾಗ ಅಂದು ರೋಗಿಗಳ ಪರದಾಟ ಹೇಳತೀರದು. ಒಬ್ಬರು ಇಬ್ಬರು ಡಾಕ್ಟರ್‍ಗಳಿಂದ ಕೆಲಸ ನಿರ್ವಹಿಸಲು ಕಷ್ಟಕರವಾಗಿದೆ. ಒಂದು ದಿನಕ್ಕೆ ಸುಮಾರು ಸಾವಿರಕ್ಕೂ ಹೆಚ್ಚಿನದಾಗಿ ರೋಗಿಗಳು ಬರುತ್ತಿದ್ದು, ಇದರ ಜೊತೆಗೆ ಹೆರಿಗೆ, ಶಸ್ತ್ರ ಚಿಕಿತ್ಸೆ, ಮೂಳೆ, ಕಣ್ಣು, ಗಂಟಲು, ಅಪಘಾತ, ಕಚೇರಿಯ ಕೆಲಸ ಸೇರಿದಂತೆ ಕೆಲಸ ನಿರ್ವಸಲಾಗುತ್ತಿದೆ. ಇವೆಲ್ಲವನ್ನು ಅರಿತು ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತಂದು ಗಡಿ ನಾಡ ಭಾಗಕ್ಕೆ ವೈದ್ಯರನ್ನು ನೇಮಿಸಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ