ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಪುನಃ ರೈತರಿಗೆ..!
ಪಾವಗಡ
ವಿಶೇಷ ವರದಿ: ರಾಮಾಂಜಿನಪ್ಪ
ಪಟ್ಟಣದ ಮಮ್ತಾಜ್ ಇಂಡಸ್ಟ್ರೀಸ್ ಮಿಲ್‍ನಲ್ಲಿ ಸರ್ಕಾರವು ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸುವ ಶೇಂಗಾವನ್ನು ಶೇಖರಿಸಲಾಗಿದೆ. ಮಾಲೀಕನ ಜೊತೆ ಶಾಮೀಲಾಗಿರುವ ಕೃಷಿ ಅಧಿಕಾರಿಗಳು ವಶಪಡಿಸಿಕೊಂಡ ಶೇಂಗಾವನ್ನು ಪುನಃ ಮಿಲ್‍ನ ಮಾಲೀಕರಿಗೆ ವಾಪಾಸ್ ನೀಡಿರುತ್ತಾರೆ. ಆದ್ದರಿಂದ ಕೃಷಿ ಅಧಿಕಾರಿಗಳು ಮತ್ತು ಕೆ.ಓ.ಎಫ್ ಕಂಪನಿ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳ ಬೇಕೆಂದು ರೈತಾಪಿ ವರ್ಗ ಒತ್ತಾಯಿಸಿದೆ.
ಪಾವಗಡ ತಾಲ್ಲೂಕಿನಲ್ಲಿ ಸತತವಾಗಿ 25 ವರ್ಷಗಳಿಂದ ಮಳೆ ಬೆಳೆಯಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಬಿತ್ತನೆ ಬೀಜಕ್ಕೂ ತಾತ್ವಾರ ಉಂಟಾಗಿದೆ. ಇದನ್ನು ಗಮನಿಸಿದ ಸರ್ಕಾರ 10 ವರ್ಷಗಳಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸುವ ಯೋಜನೆ ಜಾರಿಗೆ ತಂದಿದೆ. ತಾಲ್ಲೂಕಿನ ಅವಶ್ಯಕತೆಗೆ ಅನುಗುಣವಾಗಿ ಶೇಂಗಾ, ತೊಗರಿ ಹಾಗೂ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ಸರ್ಕಾರ ರೈತರಿಗೆ ನೀಡುತ್ತಿದೆ. ಆದರೆ ಕೆಲ ದಲ್ಲಾಳಿಗಳು ಮತ್ತು ಮಿಲ್‍ನ ಮಾಲೀಕರು ರೈತರಿಗೆ ಮೋಸ ಮಾಡಿ, ರೈತರ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ, ಕೆಲ ಎನ್.ಜಿ.ಓ ಗಳ ಜೊತೆ ಶಾಮೀಲಾಗಿ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿರುವುದು ಅಲ್ಲದೆ ರೈತರಿಗೂ ಮೋಸ ಮಾಡುವುದನ್ನು ನಾವು ಕಣ್ಣಾರೆ ನೋಡುವಂತಾಗಿದೆ.
ಸರ್ಕಾರ ರೈತರ ಜೀವನ ಮಟ್ಟ ಸುಧಾರಿಸಲು ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲು ಯೋಜನೆ ಜಾರಿ ಮಾಡಿದರೂ, ರೈತರಿಗೆ ಬಿತ್ತನೆ ಬೀಜ ಸಿಗುತ್ತಿಲ್ಲ. ದಲ್ಲಾಳಿಗಳು ಮತ್ತು ಕೆಲ ಮಿಲ್‍ನ ಮಾಲೀಕರು ಸೇರಿ ರೈತರಿಗೆ ನೀಡುವ ರಿಯಾಯಿತಿ ಶೇಂಗಾ ಕಾಯಿಯನ್ನು ರೈತರ ಸುಳ್ಳು ದಾಖಲಾತಿಗಳನ್ನು ಒದಗಿಸಿ, ತಾವೆ ಪಡೆದು, ಪುನಃ ಅದನ್ನು ರೈತರಿಗೇ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಿ ಲಾಭಗಳಿಸುವ ಮೂಲಕ, ಹಗಲು ದರೋಡೆಗಿಳಿದು ರೈತಾಪಿ ವರ್ಗಕ್ಕೆ ಮೋಸ ಎಸಗುತ್ತಿದ್ದಾರೆ.
ಈ ಹಿಂದೆ ಪ್ರಜಾಪ್ರಗತಿ ದಿನ ಪತ್ರಿಕೆಯಲ್ಲಿ ಸರ್ಕಾರದಿಂದ ವಿತರಿಸುವ ಶೇಂಗಾ ಕಾಯಿ ದಲ್ಲಾಳಿಗಳ ಪಾಲಾಗಿ, ರೈತರಿಗೆ ನೀಡುವ ಶೇಂಗಾ ಕಾಯಿ ಮಿಲ್‍ಗಳಿಗೆ ಸೇರುತ್ತಿದೆ ಎಂಬ ವರದಿ ಪ್ರಕಟಣೆ ಆಗಿತ್ತು. ನಂತರ ಕೃಷಿ ಅಧಿಕಾರಿಗಳು ಜಾಗೃತರಾಗಿ ಸಾರ್ವಜನಿಕರಿಂದ ಮಾಹಿತಿ ಪಡೆದು ಪಟ್ಟಣದ ಮಮ್ತಾಜ್ ಇಂಡಸ್ಟ್ರಿಸ್ ಮಿಲ್‍ನಲ್ಲಿ ಕೆ.ಓ.ಎಫ್ ಮುದ್ರಣಗೊಂಡ 20 ಪಾಕೆಟ್ ಶೇಂಗಾ ಕಾಯಿಯನ್ನು ಸೀಜ್ಹ್ ಮಾಡಿದ್ದರು.
ಮತ್ತೆ ಬುಧವಾರ 20 ಚೀಲ ಶೇಂಗಾ ಕಾಯಿಯನ್ನು ಕೇಸ್ ದಾಖಲಿಸದೆ ಮಿಲ್‍ನ ಮಾಲೀಕರಿಗೆ ಅಧಿಕಾರಿಗಳು ವಾಪಸ್ ಮಾಡಿದ ಘಟನೆ ನಡೆದಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಿಲ್‍ನ ಮಾಲೀಕ, ಈ ಹಿಂದೆ ಇದ್ದ ಕೃಷಿ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ಶೇಂಗಾವನ್ನು ನಮಗೆ ವಾಪಸ್ ಕೊಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಯಾವ ಆಧಾರದಲ್ಲಿ ಇವರಿಗೆ ವಾಪಸ್ ಕೊಡಲು ಸಾಧ್ಯ? ಇವರು ಹೇಳುವ ಪ್ರಕಾರ ಮಿಲ್‍ನಲ್ಲಿ ಸಿಕ್ಕಿದ 20 ಚೀಲ ಶೇಂಗಾ ಕಾಯಿ ಸೀಜ್ಹ್ ಮಾಡದೆ ಇರುವ ಕಾರಣವೇನು? ಈ ವಿಚಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೂ ಉಂಟು. ಕಾಳ ಸಂತೆಯಲ್ಲಿ ಸಿಕ್ಕಿದರೂ ಏನು ಪ್ರಯೋಜನ? ಶೇಂಗಾ ಬಿತ್ತನೆ ಬೀಜ ರೈತರಿಗೆ ಸಿಗದೆ ದಲ್ಲಾಳಿ ಪಾಲಾಗುತ್ತದೆ ಎಂದು ತಿಳಿಸಿದ ರೈತರ ಪಾಡೇನು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕೃಷಿ ಅಧಿಕಾರಿಗಳು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಘಟನೆಯನ್ನು ಮುಚ್ಚಿ ಹಾಕಿಕೊಳ್ಳುತ್ತಿದ್ದಾರೆ. ಈಗ ಇರುವ ಕೃಷಿ ಸಹಾಯಕ ನಿರ್ದೇಶಕಿ `ನಾನು ಬಂದು 3-4 ದಿನವಾಗಿದೆ, ನನ್ನ ಗಮನಕ್ಕೆ ಬಂದಿಲ್ಲ. ಶೇಂಗಾ ವಾಪಾಸ್ ನೀಡುತ್ತಿರುವುದನ್ನು ಕೆ.ಓ.ಎಫ್ ರವರು ಹೇಳಿಲ್ಲ. ಈ ಘಟನೆಗೆ ಹಿಂದಿನ ಅಧಿಕಾರಿಗಳು ಮತ್ತು ಕೆ.ಓ.ಎಫ್ ಬಿತ್ತನೆ ಬೀಜ ವಿತರಕ ಕಂಪನಿಯವರೆ ಜವಾಬ್ದಾರಿ ಎಂದು ಹೇಳಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಕೃಷಿ ಸಹಾಯಕ ನಿರ್ದೇಶಕಿಯೆ ಅಸಹಾಯಕತೆ ತೋರಿದರೆ ಅಧಿಕಾರಿಗಳಿಗೆ ಎಷ್ಟರ ಮಟ್ಟಿಗೆ ಆಡಳಿತದ ಮೇಲೆ ಬಿಗಿ ಹಿಡಿತ ಇದೆ ಎಂಬುದನ್ನು ತಿಳಿಯ ಬಹುದಾಗಿದೆ.
ಘಟನೆಯ ಕುರಿತು ಕೆ.ಓ.ಎಫ್ ವಿತರಕರು ಹೇಳಿದ್ದೇನು?
ಸರ್ಕಾರದಿಂದ ರಿಯಾಯಿತಿ ದರದಲ್ಲಿ ರೈತರಿಗಾಗಿ ಬಂದಿರುವ ಕೆಓಎಫ್ ಲೇಬಲ್ ಇರುವ ಶೇಂಗಾದ 20 ಪಾಕೆಟ್‍ಗಳನ್ನು ಪಟ್ಟಣದ ಮಮ್ತಾಜ್ ಇಂಡಸ್ಟ್ರೀಸ್ ಮಿಲ್‍ನಲ್ಲಿ ಕೃಷಿ ಅಧಿಕಾರಿಗಳು ಸೀಜ್ಹ್ ಮಾಡಿದ್ದಾರೆ. ಆದರೆ ಶೇಂಗಾ ಕಾಯಿ ವಶಪಡಿಸಿಕೊಂಡ ನಂತರ ಅಧಿಕಾರಿಗಳು ಮಾಲನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳಬೇಕಾಗಿತ್ತು. ಆದರೆ ಅದನ್ನು ಬಿಟ್ಟು ನಮ್ಮ ವಶಕ್ಕೆ ಕೊಟ್ಟು ಮತ್ತೆ ವಾಪಾಸ್ ಕೊಡಿ ಎಂದಿದ್ದರು. ಅಂತೆಯೆ ನಾವು ಅವರಿಗೆ ವಾಪಸ್ ಮಾಡಿದ್ದೇವೆ. ಸೀಜ್ಹ್ ಮಾಡೋದು ಬಿಡೋದು ಅವರಿಗೆ ಬಿಟ್ಟ ವಿಚಾರ. ಈ ಕಾಯಿ ನಮ್ಮ ಕೇಂದ್ರದಿಂದ ಹೋಗಿಲ್ಲ. ಸಿಕೆ.ಪುರ ಕೇಂದ್ರದಿಂದ ಮಿಲ್‍ಗೆ ಬಂದಿರೋದು ಎಂದು ವಿತರಕ ಬಾಲಾಜಿ ತಿಳಿಸಿದ್ದಾರೆ.
ಕೃಷಿ ಅಧಿಕಾರಿಗಳು, ಬಿತ್ತನೆ ಬೀಜ ವಿತರಣಾ ಕಂಪನಿ ಕೆ.ಓ.ಎಫ್ ರವರು ಸೇರಿ ದಲ್ಲಾಳಿಗಳಿಗೆ ಮಾರಾಟ ಮಾಡಿ, ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದು, ಸರ್ಕಾರ ದಿಂದ ರಿಯಾಯಿತಿ ದರದಲ್ಲಿ ವಿತರಿಸಿದ ಶೇಂಗಾ ಕಾಯಿ ರೈತರಿಗೆ ಸಿಗದೆ ಶೇಂಗಾ ಕಾಯಿ ಮಿಲ್‍ಗಳಲ್ಲಿ ದೊರೆತರೂ, ಇವರ ಮೇಲೆ ಯಾವುದೇ ಕೇಸ್ ಇಲ್ಲದೆ ವಾಪಸ್ ಮಾಡಿರುವ ಹಲವಾರು ಘಟನೆಗಳು ನಡೆದಿವೆ, ನಡೆಯುತ್ತಲೆ ಇವೆ.
ಜಿಲ್ಲಾಧಿಕಾರಿಗಳು ಮತ್ತು ಜಂಟಿ ಕೃಷಿ ನಿರ್ದೇಶಕರು ಸರ್ಕಾರ ನೀಡಿದ ರಿಯಾಯಿತಿ ದರದಲ್ಲಿ ಶೇಂಗಾ ಕಾಯಿ ದಲ್ಲಾಳಿ ಜೊತೆ ಶಾಮೀಲಾದ ಭ್ರಷ್ಟಾಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.