ಹುಬ್ಬಳ್ಳಿ
ಉದ್ಯಮಿ ವಿ. ಜಿ. ಸಿದ್ಧಾರ್ಥ ಅವರ ಸಾವಿನ ಕುರಿತು ಅನುಮಾನವಿದ್ದು, ಈ ನಿಗೂಢ ಸಾವಿನ ಬಗ್ಗೆ ಪ್ರಾಮಾಣಿಕ ತನಿಖೆ ನಡೆಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಒತ್ತಾಯಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿ.ಜಿ.ಸಿದ್ಧಾರ್ಥ ಅವರು ಸಾವಿನ ಮೊದಲು ಬರೆದ ಪತ್ರದಲ್ಲಿ ಸತ್ಯ ಮರೆಮಾಚಲಾಗಿದೆ. ಪತ್ರವನ್ನು ಉದ್ದೇಶಪೂರ್ವಕವಾಗಿ ಬರೆದಂತೆ ಕಾಣುತ್ತಿದೆ. ಅವರ ಸಹಿಯ ಬಗ್ಗೆಯೂ ಅನುಮಾನವಿದೆ . ಆದ್ದರಿಂದ ಅವರ ಸಾವಿನ ಕುರಿತು ಸರ್ಕಾರ ಉನ್ನತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಡಾರ್ಕ್ ಫೈಬರ್ ಮತ್ತು ಕೊ-ಲೊಕೇಶನ್ ಎಂಬ ಹಗರಣಗಳಲ್ಲಿ ವಿ.ಜಿ.ಸಿದ್ದಾರ್ಥ ಅವರು ಭಾಗಿಯಾಗಿದ್ದರು. ಸಿಂಗಪೂರ ಹಾಗೂ ಹಾಂಕಾಂಗ್ ನಲ್ಲಿರುವ ಅಲ್ಫಾಗ್ರಾಫ್ ಕಂಪೆನಿಗಳಲ್ಲಿ ದೊಡ್ಡ ಹಗರಣಗಳು ನಡೆದಿವೆ. ಈ ಹಗರಣದಲ್ಲಿ ಸಿದ್ಧಾರ್ಥ್ ಭಾಗಿಯಾಗಿರುವ ಬಗ್ಗೆ ತನಿಖಾ ಸಂಸ್ಥೆ ಅನುಮಾನ ವ್ಯಕ್ತಪಡಿಸಿದೆ. ಅವರಿಗೆ ಒಬ್ಬ ರಾಜಕಾರಣಿ ಸಹ ಕಿರುಕುಳ ನೀಡಿದ್ದಾರೆ ಎಂಬ ಆರೋಪವಿದೆ. ಅವರ ಹೆಸರನ್ನು ನಾನು ಈಗ ಬಹಿರಂಗ ಪಡಿಸಲಾರೆ. ಈ ಹಗರಣಗಳ ಕುರಿತು ತನಿಖಾ ಸಂಸ್ಥೆಗಳು ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು. ಹಗರಣಗಳನ್ನು ಬಹಿರಂಗಪಡಿಸಿ ಅವರ ಸಾವಿನ ಸತ್ಯಾಸತ್ಯತೆಯನ್ನು ಹೊರತರಬೇಕು ಎಂದು ಹಿರೇಮಠ್ ಒತ್ತಾಯಿಸಿದರು.
ಸಿದ್ಧಾರ್ಥ್ ಅವರನ್ನು ಕಳೆದುಕೊಂಡ ಕುಟುಂಬ ಸದಸ್ಯರು, ಸ್ನೇಹಿತರಿಗೆ ದುಖಃ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ಇದೇ ವೇಳೆ ಸಂತಾಪ ಸೂಚಿಸಿದರು.