ಬೆಂಗಳೂರು
ರಾತ್ರಿ ವೇಳೆ ಒಂಟಿಯಾಗಿ ಓಡಾಡುವವರನ್ನು ಬೆದರಿಸಿ ಹಣ ಮೊಬೈಲ್ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ ಮೂವರು ಸುಲಿಗೆಕೋರರ ಗ್ಯಾಂಗ್‍ಅನ್ನು ಆರ್.ಟಿ. ನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.ಸುಲಿಗೆ ಕೋರರಾದ ಆರ್.ಟಿ. ನಗರದ ಮಹಮದ್ ಸಾಲಹ (20), ಗಂಗಾನಗರದ ಮಹಮದ್ ಶೇಕ್ (20) ಹಾಗೂ ಶೇಕ್ ಸಲ್ಮಾನ್ ಅಲಿಯಾಸ್ ಸಲ್ಮಾನ್ (20)ನನ್ನು ಬಂಧಿಸಿ ಒಂದು ಲಕ್ಷ ರೂ. ಮೌಲ್ಯದ ಎರಡು ಮೊಬೈಲ್‍ಗಳು, ಸ್ಕೂಟರ್ ಅನ್ನು ವಶಪಡಿಸಿಕೊಂಡು, ಆರ್.ಟಿ. ನಗರದ ಎರಡು ಸುಲಿಗೆ ಪ್ರಕರಣಗಳನ್ನು ಪತ್ತೆಹಚ್ಚಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಆರೋಪಿಗಳು ನಿನ್ನೆ ಮುಂಜಾನೆ 2.20ರ ವೇಳೆ ಆರ್.ಟಿ. ನಗರದ ತರಳಬಾಳು ರಸ್ತೆಯಲ್ಲಿ ಊಬರ್ ಈಟ್ಸ್‍ನ ಕಂಪನಿಯ ಡೆಲಿವೆರಿ ಬಾಯ್ ಸಚಿನ್ ಎಂಬಾತ ಹೊಂಡಾ ಡಿಯೋ ಸ್ಕೂಟರ್‍ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ, ಹಲ್ಲೆ ನಡೆಸಿ, ಮೊಬೈಲ್ ಹಾಗೂ ಸ್ಕೂಟರ್ ಕಸಿದು ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿದ ಆರ್.ಟಿ. ನಗರದ ಪೆÇಲೀಸ್ ಇನ್ಸ್‍ಪೆಕ್ಟರ್ ಮಿಥುನ್ ಶಿಲ್ಪಿ, ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಗಳು, ಎಸ್‍ಎಸ್‍ಎಲ್‍ಸಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಯಾವುದೇ ಕೆಲಸಕ್ಕೆ ಹೋಗದೆ, ಮೋಜು ಮಾಡಲು ಗ್ಯಾಂಗ್ ಕಟ್ಟಿಕೊಂಡು ಸುಲಿಗೆ ಕೃತ್ಯದಲ್ಲಿ ತೊಡಗಿದ್ದರು ಎಂದು ಅವರು ತಿಳಿಸಿದ್ದಾರೆ.