ದಾವಣಗೆರೆ:
ಕನಿಷ್ಠ ವೇತನ ಜಾರಿಗೆ ತರಬೇಕು. ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟ ಪೂರೈಕೆಗೆ ಅವಕಾಶ ನೀಡಬಾರದು. ಉದ್ಯೋಗ ಭದ್ರತೆ ಕಲ್ಪಿಸಬೇಕೆಂಬುದು ಸೇರಿದಂತೆ ಒಟ್ಟು 12 ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ಬಿಸಿಯೂಟ ತಯಾರಕಿಯರು ಶನಿವಾರ ನಗರದಲ್ಲಿ ಧರಣಿ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಬಿಸಿಯೂಟ ತಯಾರಕಿಯರು, ಎಸಿ ಕಚೇರಿಯ ವರೆಗೂ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ, ಮಧ್ಯಾಹ್ನ 1.30ರಿಂದ 3 ಗಂಟೆಯ ವರಗೂ ಕಚೇರಿ ಆವರಣದಲ್ಲಿ ಧರಣಿ ನಡೆಸಿ, ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಫೆಡರೇಷನ್‍ನ ರಾಜ್ಯ ಗೌರವಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ, ಕಳೆದ 17 ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ತಯಾರಕಿಯರು ಉಭಯ ಸರ್ಕಾರಗಳು ನೀಡುವ ಅಲ್ಪ ಪ್ರಮಾಣದ ಗೌರವ ಸಂಭಾವನೆಯನ್ನು ಹೊರತು ಪಡಿಸಿ, ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆಂದು ಆರೋಪಿಸಿದರು.
ಬಿಸಿಯೂಟ ತಯಾರಿಸಿ ಲಕ್ಷಾಂತರ ಮಕ್ಕಳಿಗೆ ಬಿಸಿಯೂಟ ಉಣ ಬಡಿಸುತ್ತಿರುವ ಮಹಿಳೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಲ್ಪ ಪ್ರಮಾಣದ ಗೌರವ ಸಂಭಾವನೆಯನ್ನು ನೀಡುತ್ತಿವೆ. ಮುಖ್ಯ ಅಡುಗೆಯವರಿಗೆ 2700 ರೂ. ಹಾಗೂ ಸಹಾಯಕ ಅಡುಗೆಯವರಿಗೆ 2600 ರೂ. ಗೌರವ ಸಂಭಾವನೆ ನೀಡುತ್ತಿದ್ದು, ಈ ಅಲ್ಪ ಮೊತ್ತದಲ್ಲಿ ದುಬಾರಿ ದುನಿಯಾದಲ್ಲಿ ಜೀವನ ನಡೆಸುವುದೇ ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರ ಬಿಸಿಯೂಟ ತಯಾರಕಿಯರಿಗೆ ಕನಿಷ್ಠ ವೇತನವನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಶಾಲೆಗಳಿಗೆ ಬಿಸಿಯೂಟ ಪೂರೈಸಲು ಇಸ್ಕಾನ್ ಸೇರಿದಂತೆ ಇತರೆ ಖಾಸಗಿ ಸಂಸ್ಥೆಗಳಿಗೆ ನೀಡಲು ವ್ಯವಸ್ಥಿತ ಹುನ್ನಾರ ನಡೆಸಿರುವುದು ಅತ್ಯಂತ ಖಂಡನೀಯವಾಗಿದ್ದು, ಒಂದು ವೇಳೆ ಬಿಸಿಯೂಟ ಪೂರೈಸಲು ಖಾಸಗಿ ಸಂಸ್ಥೆಗಳಿಗೆ ಸರ್ಕಾರ ಅವಕಾಶ ಮಾಡಿಕೊಟ್ಟರೆ, ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ರಾಜ್ಯದ 1.18 ಲಕ್ಷ ಜನ ಬಿಸಿಯೂಟ ತಯಾರಕಿಯರು ಹಾಗೂ ಅವರನ್ನೇ ನಂಬಿರುವ ಅವರ ಕುಟುಂಬದ ಸದಸ್ಯರು ಬೀದಿಪಾಲಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಜನರಿಗೆ ಕೆಲಸ ಕೊಡುವುದು ಜವಾಬ್ದಾರಿಯುತ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ, ಇದನ್ನು ಬಿಟ್ಟು ದುಡಿಯುವ ಕೈಗಳಿಂದ ಉದ್ಯೋಗ ಕಿತ್ತುಕೊಳ್ಳುವುದು ಯಾವುದೇ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಆದ್ದರಿಂದ ಸರ್ಕಾರ ತಕ್ಷಣವೇ ಬಿಸಿಯೂಟ ಪೂರೈಕೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ಹುನ್ನಾರವನ್ನು ನಿಲ್ಲಿಸಿ, ಈ ಮಹಿಳೆಯರಿಗೆ ಉದ್ಯೋಗ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಬಿಸಿಯೂಟ ತಯಾರಕಿಯರನ್ನು ಶಾಲಾ ಸಿಬ್ಬಂದಿಯಾಗಿ ಪರಿವರ್ತಿಸಬೇಕು. ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಸಂಬಳ ನೀಡಬೇಕು. ಬಿಸಿಯೂಟ ತಯಾರಕರನ್ನು ಕಾರ್ಮಿಕರೆಂದು ಪರಿಗಣಿಸಿ, ಕಾರ್ಮಿಕ ಕಾಯ್ದೆಯಡಿ ತರಬೇಕು. ಇವರಿಗೆ ಪಿಎಫ್, ಇಎಸ್‍ಐ ಸೌಲಭ್ಯ ಕಲ್ಪಿಸಬೇಕು. ಅಪಘಾತ ಪರಿಹಾರವಾಗಿ ಮತ್ತು ಮರಣ ಪರಿಹಾರವಾಗಿ ಕ್ರಮವಾಗಿ 2 ಲಕ್ಷ ಮತ್ತು 5 ಲಕ್ಷ ರೂ. ನೀಡಬೇಕು.
ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಬಿಸಿಯೂಟ ಪೂರೈಸಲು ಖಾಸಗಿ ಸಂಸ್ಥೆಗಳಿಗೆ ನೀಡಿರುವುದನ್ನು ತಕ್ಷಣವೇ ನಿಲ್ಲಿಸಬೇಕು. ಇವರಿಗೂ ದಸರಾ ರಜೆ ಮತ್ತು ಬೇಸಿಗೆ ರಜಾಗಳ ಸಂಬಳ ನೀಡಬೇಕು. ನಿವೃತ್ತ ಬಿಸಿಯೂಟ ತಯಾರಕಿಯರಿಗೆ ಮಾಸಿಕ 3 ಸಾವಿರ ರೂ. ಪಿಂಚಣಿ ಹಾಗೂ 2 ಲಕ್ಷ ರೂ. ಇಡುಗಂಟು ನೀಡಬೇಕೆಂದು ಒತ್ತಾಯಿಸಿದರು.
ಧರಣಿಯಲ್ಲಿ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ರಾಜ್ಯ ಖಜಾಂಚಿ ರುದ್ರಮ್ಮ ಬೆಳಲಗೆರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಭಾಷಾ, ಮುಖಂಡರಾದ ಜ್ಯೋತಿಲಕ್ಷ್ಮೀ, ಸರೋಜ, ಪ್ರಮೀಳಾ ಹರಿಹರ, ಚನ್ನಮ್ಮ ಜಗಳೂರು, ವನಜಾಕ್ಷಮ್ಮ, ಜಯಮ್ಮ ನ್ಯಾಮತಿ, ಲಲಿತಮ್ಮ ಹೊನ್ನಾಳಿ, ಜಯಮ್ಮ ಮಳಲಕೆರೆ, ಎಐಟಿಯುಸಿಯ ಆನಂದರಾಜ್, ಐರಣಿ ಚಂದ್ರು, ಲೋಕಿಕೆರೆ ಅಂಜಿನಪ್ಪ, ಬಿಸಿಯೂಟ ತಯಾರಕಿಯರಾದ ಎಚ್.ಆರ್.ಮೀನಾಕ್ಷಮ್ಮ, ಮಂಜುಳಾ, ಗೀತ, ಕಮಲ ಬಾಯಿ, ಪ್ರೇಮ ಎಚ್.ಎಲ್, ನಾಗಮ್ಮ ಕೆ.ಎಚ್, ಎಸ್.ಸೀತಮ್ಮ, ದೇವಮ್ಮ, ಚಂದ್ರಮ್ಮ, ಜಯಶೀಲಮ್ಮ, ಲಕ್ಷ್ಮಮ್ಮ, ನಾಜಿಯಾ, ಪಾರ್ವತಮ್ಮ, ಅನಿತಾ, ವಸಂತ, ಎಂ.ಎಚ್.ಹನುಮಂತಮ್ಮ, ಶಬೀನಾ, ನೇತ್ರಾವತಿ, ನಾಗಮ್ಮ ಮತ್ತಿತರರು ಭಾಗವಹಿಸಿದ್ದರು.