ಚಿತ್ರದುರ್ಗ:
ಬಹುಸಂಸ್ಕೃತಿಯ ಭಾರತದಲ್ಲಿ ಅನೇಕರು ಇನ್ನು ಬದುಕನ್ನು ಕಟ್ಟಿಕೊಳ್ಳಲು ಆಗುತ್ತಿಲ್ಲ. ಅದರಂತೆ ಪಿಂಜಾರ ಜನಾಂಗವು ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಸಾಗಬೇಕಿದೆ ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಹೇಳಿದರು.
ಅನೇಕ ಧರ್ಮ ಜಾತಿಗಳಿಂದ ಕೂಡಿರುವ ಭಾರತದಲ್ಲಿ ಅಷ್ಟೆ ಉಪಜಾತಿಗಳಿವೆ. ಗೌತಮಬುದ್ದ, ಮಹಮದ್ ಪೈಗಂಬರ್, ಏಸು, ಬಸವಣ್ಣ, ಮಹಾವೀರ, ಗುರುನಾನಕ್ ಇವರುಗಳೆಲ್ಲಾ ವಿಶ್ವಮಾನವರಾಗಿದ್ದರು. ಎಲ್ಲಾ ಜಾತಿ ಧರ್ಮಗಳನ್ನು ಪ್ರೀತಿಸುತ್ತಿದ್ದರು. ಈಗ ವಿಶ್ವಮಾನವರಾಗುವುದು ದೊಡ್ಡ ಸವಾಲು. ಎಲ್ಲಾ ಜಾತಿ-ಧರ್ಮದವರು ಸ್ವಚ್ಚಂದವಾಗಿ, ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬೇಕಿದೆ. ಅದಕ್ಕಾಗಿ ವಿಶ್ವಮಾನವರನ್ನು ಹುಡುಕುವ ಪ್ರಯತ್ನ ಮಾಡಬೇಕಿದೆ ಎಂದು ಪಿಂಜಾರ ಜನಾಂಗಕ್ಕೆ ತಿಳಿಸಿದರು.
ಜಾತಿ ಮಾನವರು, ಧಾರ್ಮಿಕ ಮಾನವರು, ರಾಷ್ಟ್ರೀಯ ಮಾನವರು, ವಿಶ್ವಮಾನವರು ಹೀಗೆ ನಾಲ್ಕು ಬಗೆಯ ಮಾನವರಿದ್ದಾರೆ. ಜಗಳೂರಿನ ಇಮಾಂಸಾಬ್, ಹೆಚ್.ಇಬ್ರಾಹಿಂ ಇವರುಗಳೆಲ್ಲಾ ಪಿಂಜಾರ ಜನಾಂಗದವರೆಂದು ನೀವುಗಳು ಖುಷಿಯಿಂದ ಹೇಳಿಕೊಳ್ಳಬೇಕು. ಜಾತಿ ಜೊತೆ ಹೋದರೆ ಸಂಬಂಧಗಳು ಉಳಿಯುವುದಿಲ್ಲ.
ಮಾನವತ್ವದ ಜೊತೆ ಸಾಗಿದರೆ ಸಂಬಂಧಗಳು ಗಟ್ಟಿಯಾಗಿ ಉಳಿದುಕೊಳ್ಳುತ್ತದೆ. ಶತ್ರುಗಳನ್ನು ಪ್ರೀತಿಸಿ ಎನ್ನುವ ಸಂದೇಶವನ್ನು ದಾರ್ಶನಿಕರು ನೀಡಿರುವುದರಿಂದ ಜಾತಿ ಧರ್ಮವನ್ನು ಮೀರಿ ಎಲ್ಲರನ್ನು ಪ್ರೀತಿಸುವ ಔದಾರ್ಯ ತೋರಬೇಕಿದೆ. ಪಿಂಜಾರರು ಎಲ್ಲಾ ರಂಗಗಳಲ್ಲಿಯೂ ಮುಂದೆ ಬರಬೇಕು. ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪನೆಯಾಗಬೇಕೆಂಬುದು ನಿಮ್ಮ ಬೇಡಿಕೆ. ಅದಕ್ಕಾಗಿ ನಾನು ನಿಮ್ಮ ಜೊತೆ ಕೈಜೋಡಿಸುತ್ತೇನೆ ಎಂದರು.
ರೆವರಂಡ್ ಫಾದರ್ ಎಂ.ಎಸ್.ರಾಜು ಮಾತನಾಡಿ ಕುಡಿಯುವ ನೀರಿಗಾಗಿ ಬದುಕಿಗಾಗಿ ದೇಶದಲ್ಲಿ ಹೋರಾಟ ನಡೆಯುತ್ತಿದೆ. ಬದುಕಿಗಾಗಿ ಯಾರು ಹೋರಾಟ ಮಾಡುವುದಿಲ್ಲವೋ ಅವರು ಇದ್ದು ಏನು ಪ್ರಯೋಜನವಿಲ್ಲ. ಯಾವುದೇ ಒಂದು ಸಮಾಜ ಕಟ್ಟುವ ಕೆಲಸಕ್ಕೆ ಕೈಹಾಕಿದಾಗ ಅನೇಕ ಅಡ್ಡಿ ಆತಂಕಗಳು ಎದುರಾಗುವುದು ಸಹಜ. ಕಟ್ಟುವ ಕೆಲಸಕ್ಕೆ ಅಡಚಣೆ ಮಾಡುವವರ ಹೆಸರು ಪರಲೋಕದಲ್ಲಿಯೂ ಇರುವುದಿಲ್ಲ.
ಭಾಗ, ಪಾಲು ಎಲ್ಲಿಯೂ ಸಿಗುವುದಿಲ್ಲ. ಸಣ್ಣ ಪಿಂಜಾರ ಜನಾಂಗದವರಾಗಿರುವ ನೀವುಗಳು ಸ್ತ್ರೀ ಪುರುಷ ಎನ್ನುವ ತಾರತಮ್ಯವಿಲ್ಲದೆ ಜನಾಂಗ ಕಟ್ಟುವ ಕೆಲಸ ಮಾಡಿ ನಿಮ್ಮನ್ನು ನೀವು ಸಮರ್ಪಣೆ ಮಾಡಿಕೊಂಡು ತ್ಯಾಗದ ಗುಣ ಬೆಳೆಸಿಕೊಳ್ಳಬೇಕು. ಇಮಾಂಸಾಬ್ರವರಲ್ಲಿದ್ದ ಆಲೋಚನೆ, ಉದ್ದೇಶದಂತೆ ನಡೆದಾಗ ಜಯ ಸಿಕ್ಕೆ ಸಿಗುತ್ತದೆ ಎಂದು ನುಡಿದರು.
ಸಾಹಿತಿ ಷರಿಫಾಬಿ ಪ್ರಾಸ್ತಾವಿಕವಾಗಿ ಮಾತನಾಡುತ್ತ 1993 ರಲ್ಲಿ ಪಿಂಜಾರ ಜನಾಂಗ ಸಂಘಟನೆಗಾಗಿ ಸಂಘವನ್ನು ಸ್ಥಾಪಿಸ ಲಾಯಿತು. ಪಿಂಜಾರ ಜನಾಂಗ ಉರ್ದು ಭಾಷೆ ಮಾತನಾಡುವುದು ತುಂಬಾ ಕಡಿಮೆ. ಕನ್ನಡ ಭಾಷೆಗೆ ಒಗ್ಗಿಕೊಂಡಿದೆ. ಪ್ರವರ್ಗ-1 ರಲ್ಲಿರುವ ಪಿಂಜಾರ ಜನಾಂಗ ಇನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬೆಳೆದಿಲ್ಲ. ದೊಡ್ಡ ವ್ಯಕ್ತಿತ್ವವುಳ್ಳವರಾಗಿದ್ದ ಜಗಳೂರು ಇಮಾಂಸಾಬ್ರಂತವರ ವಿಚಾರಗಳನ್ನು ನೀವುಗಳೆಲ್ಲಾ ತಿಳಿದುಕೊಳ್ಳಬೇಕು.
ಸಕಾರಾತ್ಮಕ ಚಿಂತನೆಯಿರಲಿ, ನಕಾರಾತ್ಮಕ ಚಿಂತನೆಯಿದ್ದರೆ ಅಭಿವೃದ್ದಿಯಾಗುವುದು ಕಷ್ಟವಾಗುತ್ತದೆ. ಪಿಂಜಾರ ಸಂಘಟನೆಯ ರಥವನ್ನು ಮುಂದುವರೆಸಿಕೊಂಡು ಹೋಗಲು ನೂತನ ರಾಜ್ಯಾಧ್ಯಕ್ಷರ ಜೊತೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಪ್ರಾಧ್ಯಾಪಕ ನವಿಲೆಹಾಳ್ ದಾದಾಪೀರ್ ನೂತನ ರಾಜ್ಯಾಧ್ಯಕ್ಷರನ್ನು ಸಂಕ್ಷಿಪ್ತವಾಗಿ ಪರಿಚಯಿಸಿ 1952 ಜ.9 ರಂದು ಹಿರಿಯೂರು ತಾಲೂಕಿನ ಗಿಡ್ಡೋಬನಹಳ್ಳಿಯಲ್ಲಿ ಜನಿಸಿ ಚಿತ್ರದುರ್ಗದಲ್ಲಿಯೇ ಪದವಿ ಪಡೆದು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರು ವುದರಿಂದ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ರಾಜ್ಯಾಧ್ಯಕ್ಷರ ಜವಾಬ್ದಾರಿಯನ್ನು ಜಲೀಲ್ಸಾಬ್ರವರ ಹೆಗಲಿಗೆ ಹಾಕಲಾಗಿದೆ.
ರಾಜ್ಯದಲ್ಲಿ 25 ರಿಂದ 30 ಲಕ್ಷದಷ್ಟು ಪಿಂಜಾರ ಜನಾಂಗದವರಿದ್ದೇವೆ. ಕಡಿಮೆ ಸಂಖ್ಯೆಯಲ್ಲಿರುವ ಎಷ್ಟೋ ಜಾತಿಗಳು ಬಲಿಷ್ಟವಾಗಿ ಬೆಳೆದಿವೆ. ಹಾಗಾಗಿ ನಮ್ಮ ಜನಾಂಗದ ಉನ್ನತಿಗಾಗಿ ಪ್ರತ್ಯೇಕ ಪಿಂಜಾರ ಅಭಿವೃದ್ದಿ ನಿಗಮ ಸ್ಥಾಪನೆಯಾಗಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಜನಾಂಗದ ಹಿತಕ್ಕಾಗಿ ಆಪತ್ಧನವನ್ನು ಕ್ರೂಢೀಕರಿಸಬೇಕು. ಸಂಘಟನೆ ದೃಷ್ಟಿಯಿಂದ ಪ್ರತಿಷ್ಟೆ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರೂ ಒಂದಾಗಿ ಎಂದು ಕರೆ ನೀಡಿದರು.ನಿಕಟಪೂರ್ವ ರಾಜ್ಯಾಧ್ಯಕ್ಷ ಪ್ರೊ.ಎಂ.ಎಂ.ನದಾಫ್ ನೂತನ ರಾಜ್ಯಾಧ್ಯಕ್ಷ ಹೆಚ್.ಜಲೀಲ್ಸಾಬ್ರವರಿಗೆ ಅಧಿಕಾರ ಹಸ್ತಾಂತರಿಸಿದರು.
ಮೌಲಾನ ಹಾಜಿ ಇಬ್ರಾಹಿಂ ಸಖಾಫಿ, ದಾವಣಗೆರೆ ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ಕೆ.ಇಮಾಮ್ಸಾಬ್, ಹಜರ್ ಅಲಿ ದೊಡ್ಮನಿ, ಜೆ.ಕೆ.ಹುಸೇನ್ಮಿಯಾ, ಹೆಚ್.ಐ.ಚಿನ್ನ, ಹೆಚ್.ಇ.ದಾದಾಖಲಂದರ್, ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ಗರೀಬ್ಆಲಿ ವೇದಿಕೆಯ ಲ್ಲಿದ್ದರು.ಹಿರಿಯೂರು ತಾಲೂಕು ಅಧ್ಯಕ್ಷ ಎಸ್.ರಶೀದ್, ಹಾಜಿ ದಾದಾಪೀರ್, ಜಗಳೂರು ಇಮಾಂಸಾಬ್ರವರ ಮೊಮ್ಮಗಳು ಚಮನ್ ಫರ್ಜಾನ, ಟಿ.ಶಫೀವುಲ್ಲಾ ಸೇರಿದಂತೆ ಪಿಂಜಾರ ಜನಾಂಗದ ಅನೇಕ ಮುಖಂಡರು ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರು.