ಬೆಂಗಳೂರು
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣ, ಭೀಮ ಇನ್ನಿತರ ನದಿಗಳು ತುಂಬಿ ಹರಿಯುತ್ತಿರುವುದರಿಂದ ಬೆಳಗಾವಿ, ಬಾಗಲಕೋಟೆ, ರಾಯಚೂರು ಸೇರಿ ಉತ್ತರ ಕರ್ನಾಟಕದ ಐದಾರು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಜನರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಳಗಾವಿ, ಬಾಗಲಕೋಟೆ ನದೀ ತೀರದ ಪ್ರದೇಶಗಳು ಸಂಪೂರ್ಣವಾಗಿ ಮುಳುಗಡೆ ಭೀತಿ ಎದುರಿಸುತ್ತಿವೆ.
ಅಥಣಿ ತಾಲ್ಲೂಕಿನ ಹುಲಿಗಬಾಳಿ ಗ್ರಾಮದ ಮಾರುತಿ ಜಾದವ್ ಅವರು ಎಮ್ಮೆ ರಕ್ಷಿಸಲು ಹೋಗಿ ಕೃಷ್ಣಾ ನದಿ ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.ರಾಯಚೂರಿನ ಮೂರು ತಾಲ್ಲೂಕುಗಳ 51 ಗ್ರಾಮಗಳ ಸುಮಾರು 12 ಸಾವಿರ ಮಂದಿ ಇತರ ಗ್ರಾಮಗಳೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ.
ಕೊಯ್ನಾ ಜಲಾಶಯದಿಂದ ನೀರು ಹರಿಬಿಟ್ಟ ಪರಿಣಾಮ ಬೆಳಗಾವಿ, ರಾಯಚೂರು, ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು ಜನರ ಬದುಕು ಮೂರಾಬಟ್ಟೆಯಾಗಿದೆ. ಸೇತುವೆಗಳು ತುಂಬಿ ಹರಿಯುತ್ತಿದ್ದು ರೈತ ಬೆಳೆದ ಬೆಳೆ ನಾಶವಾಗಿದೆ. ಕೃಷ್ಣಾ ನದಿ ಪಾತ್ರದ ಜಿಲ್ಲೆಗಳು ಜಲಾವೃತಗೊಂಡಿದ್ದು ಲಕ್ಷಾಂತರ ಜನರು ಸಂತ್ರಸ್ಥರಾಗಿದ್ದಾರೆ.
ನಾರಾಯಣಪುರ ಜಲಾಶಯದಿಂದ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೃಷ್ಣಾನದಿಗೆ ನೀರು ಬಿಡುತ್ತಿರುವುದರಿಂದ ರಾಯಚೂರು ಜಿಲ್ಲೆಯ ಲಿಂಗಸುಗೂರು ಜಿಲ್ಲೆಯ ಹಲವು ಗ್ರಾಮಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ನೀರಿನಲ್ಲಿ ಸಿಲುಕಿದ್ದ ಜನರನ್ನು ರಕ್ಷಣಾ ಪಡೆಗಳು ರಕ್ಷಿಸುವ ಕಾಯಕದಲ್ಲಿ ನಿರತವಾಗಿವೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಬಹುತೇಕ ಗ್ರಾಮಗಳು ಪ್ರವಾಹದಿಂದಾಗಿ ನಡುಗಡ್ಡೆಗಳಾಗಿ ಮಾರ್ಪಟ್ಟಿವೆ.
ಚಿಕ್ಕಪಡಸಲಗಿ ಬ್ಯಾರೇಜ್ಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಆ ಭಾಗದ ಜನರು ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ. ಬ್ಯಾರೇಜ್ ಮೇಲಿನ ಭಾಗದ ಧಾರವಾಡ, ವಿಜಯಪುರ ರಾಜ್ಯ ಹೆದ್ದಾರಿಯ ಸಂಪರ್ಕ ಬಂದ್ ಮಾಡಲಾಗಿದೆ. ಚಿಕ್ಕೋಡಿ ತಾಲ್ಲೂಕಿನ 331 ಕುಟಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ಅದರಲ್ಲಿ ಇಂಗಳಗಿಯ 188, ಯಡೂರವಾಡಿಯ 49, ಕಲ್ಲೋಳ ಗ್ರಾಮದ 42 ಕುಟುಂಬಗಳನ್ನು ಎನ್ಡಿಆರ್ಎಫ್ ಪಡೆಗಳು ರಕ್ಷಿಸಿವೆ. ರಾಯಚೂರಿನ ಲಿಂಗಸುಗೂರು ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಜಲಾವೃತಗೊಂಡರೂ ಸೂರಕ್ಷಿತ ಸ್ಥಳಗಳಿಗೆ ಬರಲು ಅಲ್ಲಿನ ಜನ ನಿರಾಕರಿಸಿರುವುದರಿಂದ ಅವರನ್ನು ಮನವೊಲಿಸುವುದು ಅಧಿಕಾರಿಗಳಿಗೆ ತ್ರಾಸದಾಯಕವಾಗಿದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಯಡೂರಿನ ವೀರಭದ್ರೇಶ್ವರ ದೇವಸ್ಥಾನದ ಗರ್ಭಗುಡಿ ನೀರಿನಲ್ಲಿ ಮುಳುಗಡೆಯಾಗಿದೆ. ದೇವದುರ್ಗ, ಕಲ್ಬುರ್ಗಿ ಸಂಪರ್ಕಿಸುವ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿ ರಸ್ತೆಸಂಚಾರ ಅಸ್ತವ್ಯಸ್ತಗೊಂಡಿದೆ ಮೂರು ನಡುಗಡ್ಡೆಗಳು ವಾಸಿಸುತ್ತಿರುವ 1 ಸಾವಿರಕ್ಕೂ ಹೆಚ್ಚು ಮಂದಿ ಹೊರಗಿನ ಸಂಪರ್ಕವಿಲ್ಲದೆ ಸಂಕಷ್ಟಕ್ಕೆ ಸಿಲುಕಿ ದ್ದಾರೆ. ನಡುಗಡ್ಡೆಯಲ್ಲಿ ಸಿಲುಕಿರುವ ಜನರಿಗೆ ಆಹಾರ, ಇನ್ನಿತರ ಅಗತ್ಯ ವಸ್ತುಗಳ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡ ಲಾಗುತ್ತಿದ್ದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೆÇಲೀ ಸರು ರಕ್ಷಣಾ ಕಾರ್ಯಗಳಲ್ಲಿ ತೊಡಗಿದ್ದಾರೆ.
ಮಲೆನಾಡಿನಲ್ಲೂ ಅಬ್ಬರ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಇನ್ನಿತರ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಲಿಂಗನಮುಖಿ ಅಣೆಕಟ್ಟು ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಮಳೆಯಿಂದ ಜನರು ಹೊರಬರಲು ಹೆಣಗಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಭದ್ರಾ ಜಲಾಶಯ ನೀರಿನ ಮಟ್ಟ 147 ಅಡಿಗೆ ತಲುಪಿದ್ದು, ಹೊಸ ನಗರದಲ್ಲಿ ದಾಖಲೆಯ 138 ಸೆ.ಮೀ. ಮಳೆಯಾಗಿದೆ.
ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಹಲವು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಲೆನಾಡು ಭಾಗದಲ್ಲಿ ಆ. 9ರ ವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 3 ದಿನ ಶಾಲಾ ಕಾಲೇಜುಗಳಿಗೆ ರಜೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕೋಡಿ ವಿಭಾಗದ ಶಾಲಾ ಕಾಲೇಜುಗಳಿಗೆ 3 ದಿನಗಳ ಕಾಲ ರಜೆ ಘೋಷಿಸಿ ಬೆಳಗಾವಿ ಜಿಲ್ಲಾಧಿಕಾರಿ ಎಸ್.ಪಿ. ಬೊಮ್ಮನಹಳ್ಳಿ ಆದೇಶಿಸಿದ್ದಾರೆ.
ಮಡಿಕೇರಿಯಲ್ಲಿ ಭೂಕುಸಿತ ಮಡಿಕೇರಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ವಿರಾಜಪೇಟೆ ಮಾಕುಟ್ಟ ರಸ್ತೆಯ ಒಂದು ಬದಿಯಲ್ಲಿ ಭೂಕುಸಿತ ಉಂಟಾಗಿದ್ದು ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಭೂಕುಸಿತ ಸ್ಥಳಕ್ಕೆ ಜಿಲ್ಲಾಧಿಕಾರಿ ಅನ್ನೀಸ್ ಕನ್ಮಣಿ ಜಾಯ್, ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೂಕುಸಿತವನ್ನು ತೆರವುಗೊಳಿಸುವವರೆಗೆ ರಸ್ತೆ ಸಂಚಾರ ಸ್ಥಗಿತಗೊಳಿಸ ಲಾಗುತ್ತಿದ್ದು, ಸ್ಥಳೀಯರು ಸಹಕರಿಸುವಂತೆ ಮನವಿ ಮಾಡಲಾಗಿದೆ.