ಸಮಗ್ರ ಭಾರತ ನಿರ್ಮಾಣವೇ ಗಾಂಧಿ ಆಶಯ

ಚಿತ್ರದುರ್ಗ :

    ಬಸವಯುಗ ಸಮ ಸಮಾಜಕ್ಕೆ ಪ್ರಯತ್ನಿಸಿದರೆ ಗಾಂಧಿಯುಗ ಸ್ವಾತಂತ್ರ್ಯಕ್ಕೆ ಪ್ರಯತ್ನಿಸಿದ ಯುಗ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.ಬಸವಕೇಂದ್ರ ಶ್ರೀಮುರುಘಾಮಠ, ಪ್ರಿಯದರ್ಶಿನಿ ಬಾಲಕಿಯರ ಪ್ರೌಢಶಾಲೆ, ಶ್ರೀ ಬೃಹನ್ಮಠ ಪ್ರೌಢಶಾಲೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಶರಣಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು

    ಹಿಂದೆ ರಾಜ ಮಹಾರಾಜರ ಆಳ್ವಿಕೆಯಿತ್ತು ಅಭಿವೃದ್ದಿ ಕಾರ್ಯವಿತ್ತು. ಅದು ಪ್ರಭುಸತ್ತೆ, ರಾಜಸತ್ತೆ. ಆದರೆ ಸಾಮಾಜಿಕ ಸುಧಾರಣೆಗೆ ಮತ್ತು ಸಾಮಾಜಿಕ ಪರಿವರ್ತನೆಗೆ ಅಷ್ಟಾಗಿ ಮಹತ್ವ ನೀಡಿರಲಿಲ್ಲ. 12ನೇ ಶತಮಾನದಲ್ಲಿ ಅರ್ಥ ಸಚಿವರಾಗಿದ್ದ ಬಸವಣ್ಣನವರು ಸಾಮಾಜಿಕ ಬದಲಾವಣೆಯ ಸುಧಾರಣೆಯನ್ನು ತಂದರು. ಇದೊಂದು ಮಹಾ ವೈಚಾರಿಕ ಕ್ರಾಂತಿ ಸಾಮಾಜಿಕ ಸಂಘರ್ಷ ಕ್ರಾಂತಿ ಎಂದು ಬಣ್ಣಿಸಿದರು

     ಬಸವಾದಿ ಶರಣರೆಲ್ಲರು ಸಾಮಾಜಿಕ ಸುಧಾರಣೆಗೆ ಪರಿವರ್ತನೆಗೆ ಸಮಾನತೆಗೆ ಮತ್ತು ಜಾತ್ಯಾತೀತ ಸಮಾಜ ರಚನೆಗೆ ಒತ್ತು ನೀಡಿದರು. ರಾಜಸತ್ತೆ ಮಾಡದ ಕಾರ್ಯವನ್ನು ಶರಣರು ಸಂತರು ಮಾಡಿದ್ದಾರೆ ಎಂಬುದನ್ನು ತೋರಿಸಿಕೊಟ್ಟರು. ಆಗ ಭಾರತ ಪರಕೀಯ ಆಳ್ವಿಕೆಗೆ ಒಳಪಟ್ಟಿರಲಿಲ್ಲ. ಆದರೆ ಪಂಚಭೇದಗಳಾದ ವರ್ಣಭೇದ, ವರ್ಗಭೇದ, ಜಾತಿಭೇದ, ಲಿಂಗಭೇದ, ವಯೋಭೇದ ಇವುಗಳ ವಿರುದ್ಧ ವಚನಕಾರರು ಹೋರಾಡಿ ಜಯಿಸಿದ್ದರು ಎಂದರು.

     ಭಾರತಕ್ಕೆ ಬ್ರಿಟೀಷರು ಬಂದ ನಂತರ ಸಾಮ್ರಾಜ್ಯ ವಿಸ್ತರಣೆಗೆ ಒತ್ತು ನೀಡಿದರು. ಗಾಂಧೀಜಿಯವರು ಬರುವವರೆಗೂ ಭಾರತ ಪರಕೀಯ ತಂತ್ರಕ್ಕೆ ಒಳಗಾಗಿತ್ತು. ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮದಿಂದ ಅನೇಕ ಸೇನಾನಿಗಳ ಬಲಿದಾನದ ಮುಖಾಂತರ ಭಾರತ 73 ವರ್ಷಗಳ ಹಿಂದೆ ಸ್ವಾತಂತ್ರ್ಯ ಪಡೆಯಿತು. ಬಸವಯುಗದಲ್ಲಿ ವೈಚಾರಿಕ ಕ್ರಾಂತಿಯಾದರೆ ಗಾಂಧಿಯುಗ ಸ್ವಾತಂತ್ರ್ಯ ಹೋರಾಟಕ್ಕೆ ಮುಡುಪಾಗಿಟ್ಟಿದೆ ಎಂದರು

    ಮಾನವೀಯತೆಯ ತಳಹದಿಯ ಮೇಲೆ ಅಹಿಂಸಾತ್ಮಕವಾದ ಗಾಂಧೀಜಿಯವರ ಹೋರಾಟದ ಫಲವಾಗಿ ಭಾರತ ಸ್ವಾತಂತ್ರ್ಯ ಪಡೆಯಿತು. ನಂತರ ಗಾಂಧೀಜಿ ಸರ್ವರ ಉದಯಕ್ಕೆ ಅರ್ಥಾತ್ ಸರ್ವೋದಯಕ್ಕೆ ಒತ್ತು ನೀಡಿದರು. ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮ ಮತ್ತು ಬುದ್ಧನ ಜ್ಞಾನೋದಯ, ಶರಣರ ವಚನೋದಯ ಇವೆಲ್ಲವೂ ಸರ್ವೋದಯಕ್ಕೆ ಆದ್ಯತೆಯನ್ನು ನೀಡಿವೆ. ಈ ಸಮಗ್ರ ಭಾರತ ಕಟ್ಟಲು ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಯುವಜನತೆ ಕಲಿಕೆ ಗಳಿಕೆಯೊಂದಿಗೆ ಸ್ವಾವಲಂಬಿ ಜೀವನ ನಡೆಸಬೇಕು. ಪರಾವಲಂಬಿಗಳಾಗಬಾರದು ಎಂದರು.

     ವಿಷಯಾವಲೋಕನ ಮಾಡಿದ ಚಳ್ಳಕೆರೆಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ವಿ. ಶ್ರೀರಾಮರೆಡ್ಡಿ, ಸ್ವಾತಂತ್ರ್ಯ-ಸರ್ವೋದಯ ಗಾಂಧೀಜಿಯವರ ಆದರ್ಶಗಳು. ಸ್ವಾತಂತ್ರ್ಯ ಅಂದರೆ ಬಂಧಮುಕ್ತ. ಸ್ವಾತಂತ್ರ್ಯವನ್ನು ಪರೋಕ್ಷವಾಗಿ ಬ್ರಿಟೀಷರೇ ನಮಗೆ ಹೇಳಿಕೊಟ್ಟರು. ನಾನು ಯಾರಿಗೂ ಅಧೀನನಲ್ಲ ಎಂದು ಹೇಗೆ ಭಾವಿಸುತ್ತಾನೋ ಹಾಗೆಯೇ ಯಾರೂ ನನಗೆ ಅಧೀನರಲ್ಲ ಎಂಬುದನ್ನು ತಿಳಿದಿರಬೇಕು. ಪ್ರತಿಯೊಬ್ಬರು ಸುಖವಾಗಿರಬೇಕು. ಪ್ರತಿಯೊಬ್ಬರ ಏಳಿಗೆಯು ಪ್ರತಿಯೊಬ್ಬನ ಆದರ್ಶವಾಗಬೇಕು. ಇದು ಭಾರತದ ವಿಶಿಷ್ಟ ಸಾಮಾಜಿಕ ದರ್ಶನವಾಗಿದೆ. ಈ ಸರ್ವೋದಯ ಆದರ್ಶದ ಸಮಾಜದ ಗಂಟು ಎಂದರು.

    ಸನ್ಮಾನ ಸ್ವೀಕರಿಸಿದ ಕಾನಾಮಡಗು ಗ್ರಾಮದ ನಿವೃತ್ತ ಅಂಧಶಿಕ್ಷಕ ಎ.ಸಿದ್ದಪ್ಪ ಮಾತನಾಡಿ, ನೀವು ಅಕ್ಷರಗಳನ್ನು ಕಣ್ಣಲ್ಲಿ ನೋಡುತ್ತೀರಿ. ನಾವು ಅದೇ ಅಕ್ಷರಗಳನ್ನು ಬೆರಳುಗಳ ತುದಿಯಲ್ಲಿ ನೋಡುತ್ತೇವೆ. ನಾನು ಹಲವು ಗೆಳೆಯರಿಂದ ಪುಸ್ತಕ ಓದಿಸಿಕೊಂಡು ಕೆಲವು ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.

    ಕಲಬುರ್ಗಿಯ ಭಕ್ತಕುಂಬಾರ ಜಾದೂ ಪ್ರದರ್ಶನ ನಡೆಸಿಕೊಟ್ಟರು. ಶ್ರೀ ಬಸವನಾಗಿದೇವ ಸ್ವಾಮಿಗಳು, ಹಾವೇರಿ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಶ್ರೀಮಠದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link