ಮೇಕೆದಾಟು ಯೋಜನೆ ಪರಿಶೀಲನೆ : ರಾಜಕೀಯ ದುರುದ್ದೇಶಪೂರಿತ-ಡಿಕೆಶಿ

ಬೆಂಗಳೂರು

   ಮೇಕೆದಾಟು ಯೋಜನೆ ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚನೆ ನೀಡಿರುವುದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದ್ದು, ಇದರ ವಿರುದ್ಧ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ

  ಮೇಕೆದಾಟು ಯೋಜನೆಗೆ ಈಗಾಗಲೇ ಸುಪ್ರೀಂ ಕೋರ್ಟ್ ವಿಸ್ತೃತ ಯೋಜನೆ ವರದಿ (ಡಿಪಿಆರ್) ಸಲ್ಲಿಸುವಂತೆ ಸೂಚನೆ ನೀಡಿದರ ಮೇರೆಗೆ ಈಗಾಗಲೇ ಡಿಪಿಆರ್ ಸಲ್ಲಿಸಲಾಗಿದೆ. ಯೋಜನೆ ಅನುಷ್ಠಾನ ಅಂತಿಮ ಹಂತದಲ್ಲಿದೆ. ಈ ಸಂದರ್ಭದಲ್ಲಿ ಯೋಜನೆಯನ್ನು ಮರುಪರಿಶೀಲನೆ ಮಾಡುವಂತೆ ಕೇಂದ್ರ ಸೂಚಿಸಿರುವುದರ ಹಿಂದೆ ರಾಜಕೀಯ ಹುನ್ನಾರವಿದೆ ಎಂದು ಆಪಾದಿಸಿದ್ದಾರೆ.

   ಮೇಕೆದಾಟು ಸಮತೋಲನ ಅಣೆಕಟ್ಟೆ ಯೋಜನೆ ಇಂದು ನಿನ್ನೆ ರೂಪಿತವಾದ ಯೋಜನೆಯಲ್ಲ. 40 ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿತ್ತು. ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಿಗೂ ಅನುಕೂಲವಾಗುವ ಈ ಯೋಜನೆಗೆ ಈಗಾಗಲೇ ಸ್ಥಳವನ್ನೂ ಗುರುತಿಸಲಾಗಿದೆ. ವಿನಾಕಾರಣ ಸಮುದ್ರದ ಪಾಲಾಗಲಿರುವ ನೀರನ್ನು ಯೋಜಿತ ಆಣೆಕಟ್ಟೆಯಲ್ಲಿ ಸಂಗ್ರಹಿಸಿಟ್ಟುಕೊಂಡು ವಿದ್ಯುತ್ ಉತ್ಪಾದನೆ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಘನ ಉದ್ದೇಶ ಯೋಜನೆಯದ್ದಾಗಿದೆ ಎಂದರು.

    ಕಾವೇರಿ ನ್ಯಾಯಾಧೀಕರಣ ತೀರ್ಪಿನಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರಿನ ಪರಿಮಿತಿಯಲ್ಲೇ ಯೋಜನೆ ರೂಪಿಸಲಾಗಿದೆ. ಹೀಗಿರುವಾಗ ಏಕಾಏಕಿ ಯೋಜನೆ ಮರುಪರಿಶೀಲನೆಗೆ ಸೂಚನೆ ನೀಡಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ರದ್ದುಪಡಿಸಲಾಗಲಿ, ಸ್ಥಳಾಂತರ ಮಾಡಲಾಗಲಿ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

    ಎಲ್ಲಾ ಸಂಸದರು ಹಾಗೂ ಶಾಸಕರು ಪಕ್ಷಬೇಧ ಮರೆತು ಹೋರಾಟಕ್ಕೆ ಅಣಿಯಾಗಬೇಕಿದೆ. ಕೇಂದ್ರ ಸರ್ಕಾರವ್ನು ಪ್ರತಿನಿಧಿಸುತ್ತಿರುವ ರಾಜ್ಯದ ಮಂತ್ರಿಗಳು ಈ ಬಗ್ಗೆ ಗಮನ ಹರಿಸಬೇಕು. ಈ ಮೊದಲು ನಿರ್ಣಯವಾಗಿರುವಂತೆ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಮೇಲೆ ಅವರು ಒತ್ತಡ ತರಬೇಕು ಎಂದು ಡಿ.ಕೆ.ಶಿವಕುಮಾರ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link