ಬೆಂಗಳೂರು:
ವೇಗವಾಗಿ ಹೋಗುತ್ತಿದ್ದ ಬೈಕ್ ಆಯಾ ತಪ್ಪಿ ಬಿದ್ದು ತಾಯಿ ಮೃತಪಟ್ಟರೆ, ಮಗ ಗಾಯಗೊಂಡಿರುವ ದುರ್ಘಟನೆ ಜಯನಗರ ಸಂಚಾರ ಪೋಲೀಸ್ ಠಾಣಾ ವ್ಯಾಪ್ತಿಯ ಜೆಪಿ ನಗರ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಜೆಪಿ ನಗರದ ಲಲಿತಮ್ಮ (೪೫) ಎಂದು ಮೃತ ಪಟ್ಟವರನ್ನು ಗುರುತಿಸಲಾಗಿದೆ. ಗಾಯಗೊಂಡಿರುವ ಅವರ ಪುತ್ರ ಮಂಜು (೨೮) ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಯನಗರದ ಜೈನ್ಸ್ ಸ್ಕೂಲ್ನಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದ ಲಲಿತಮ್ಮ ಅವರನ್ನು ಪ್ರತಿದಿನ ಅವರ ಪುತ್ರ ಮಂಜು ಬೈಕ್ನಲ್ಲಿ ಸ್ಕೂಲಿಗೆ ಬಿಟ್ಟು ಹೋಗುತ್ತಿದ್ದ. ಅದರಂತೆ ಶುಕ್ರವಾರ ಬೆಳಗ್ಗೆ ೮.೩೦ರ ವೇಳೆ ಸ್ಕೂಲಿಗೆ ಮನೆಯಿಂದ ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮಧ್ಯೆ ಜೆಪಿ ನಗರ ಮುಖ್ಯರಸ್ತೆಯ ೧೪ನೇ ಕ್ರಾಸ್ ಬಳಿ ಆಯಾ ತಪ್ಪಿ ಬೈಕ್ ಬಿದ್ದಿದ್ದು, ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡ ಲಲಿತಮ್ಮ ಅವರನ್ನು ಹತ್ತಿರದ ರಾಜಶೇಖರ್ ಆಸ್ಪತ್ರೆಗೆ ನಂತರ, ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಮಿದುಳು ನಿಷ್ಕ್ರಿಯಗೊಂಡು ಅಸ್ವಸ್ಥರಾಗಿದ್ದ ಲಲಿತಮ್ಮ ಅವರಿಗೆ ಚಿಕಿತ್ಸೆ ಫಲಕಾರಿಯಾಗುವುದಿಲ್ಲ ಎಂದು ವೈದ್ಯರು ಕೈ ಚೆಲ್ಲಿದ್ದರಿಂದ ಸ್ವಂತ ಊರಾದ ಮಳವಳ್ಳಿಗೆ ಶನಿವಾರ ಬೆಳಗ್ಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ಜಯನಗರ ಸಂಚಾರ ಪೋಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ. ಸೌಮ್ಯಲತಾ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ