ದಾವಣಗೆರೆ :
ಜಿಲ್ಲಾದ್ಯಂತ ಶನಿವಾರ 2.7 ಮಿ.ಮೀ ಮಳೆಯಾಗಿದ್ದು, 8,77,600 ರೂ. ಮೌಲ್ಯದ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ. ದಾವಣಗೆರೆ ತಾಲ್ಲೂಕಿನಲ್ಲಿ 3.3 ಮಿ.ಮೀ, ಹರಿಹರದಲ್ಲಿ 4.9 ಮಿ.ಮೀ, ಹೊನ್ನಾಳಿಯಲ್ಲಿ 3.5 ಮಿ.ಮೀ, ಚನ್ನಗಿರಿಯಲ್ಲಿ 1.8 ಮಿ.ಮೀ ಹಾಗೂ ಜಗಳೂರಿನಲ್ಲಿ 1.5 ಮಿ.ಮೀ ಮಳೆಯಾಗಿದ್ದು ಜಿಲ್ಲಾದ್ಯಂತ 2.7 ಮಿ.ಮೀ. ಮಳೆಯಾಗಿದೆ.
ದಾವಣಗೆರೆ ತಾಲೂಕಿನಲ್ಲಿ 15 ಕಚ್ಚಾ ಮನೆಗಳು ಭಾಗಶಃ ಹಾನಿಯಾಗಿದ್ದು, 1.20 ಲಕ್ಷ ರೂ. ನಷ್ಟ ಸಂಭವಿಸಿದ್ದರೆ, ಹರಿಹರ ತಾಲೂಕಿನಲ್ಲಿ 15 ಪಕ್ಕಾ ಮನೆಗಳು ಭಾಗಶಃ ಹಾನಿಯಾಗಿದ್ದು, 3.20 ಲಕ್ಷ ರೂ. ನಷ್ಟ ಸಂಭವಿಸಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ 2 ಕಚ್ಚಾ ಮನೆಗಳು ಭಾಗಶಃ ಹಾನಿಯಾಗಿದ್ದು 10,400 ರೂ, ನ್ಯಾಮತಿ ತಾಲ್ಲೂಕಿನಲ್ಲಿ 21 ಪಕ್ಕಾ ಮನೆಗಳು ಮತ್ತು 3 ಕಚ್ಚಾ ಮನೆಗಳು ಹಾನಿಯಾಗಿ 3.45 ಲಕ್ಷ ರೂ ನಷ್ಟ ಸಂಭವಿಸಿದೆ. ಅಲ್ಲದೇ, 2 ದನದ ಕೊಟ್ಟಿಗೆ ಹಾನಿಯಾಗಿ, ಅಂದಾಜು 4200 ರೂ.ನಷ್ಟವಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 15 ಪಕ್ಕಾ ಮನೆಗಳು ಹಾನಿಯಾಗಿದ್ದು ಅಂದಾಜು ರೂ. 78,000 ನಷ್ಟ ಸಂಭವಿಸಿರುವುದು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 8,77,600 ನಷ್ಟ ಸಂಭವಿಸಿದೆ.
ಒಟ್ಟು ಆರು ಗಂಜಿ ಕೇಂದ್ರ:
ಹರಿಹರ ನಗರದ ನದಿ ಪಾತ್ರದ ಗಂಗಾನಗರ ಮತ್ತು ಕೈಲಾಸ ನಗರ ಪ್ರದೇಶಗಲಲ್ಲಿ ಹಾಗೂ ಹಲಸಬಾಳು, ಸಾರಥಿ, ಚಿಕ್ಕಬಿದರಿ ಇಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ. ಹರಿಹರ ತಾಲ್ಲೂಕಿನ ಒಟ್ಟು 2 ಗಂಜಿ ಕೇಂದ್ರ ತೆರೆಯಲಾಗಿದೆ. ಸಾರಥಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಗೃಹ ರಕ್ಷಕ ಸಿಬ್ಬಂದಿ ಹಾಗೂ ಕರ್ನಾಟಕ ಪೌರ ರಕ್ಷಣಾ ದಳದ ಸಿಬ್ಬಂದಿಗಳಿಂದ ಬೋಟ್ ಮೂಲಕ ಜನರನ್ನು ರಕ್ಷಿಸಲಾಗಿರುತ್ತದೆ.
ಹರಿಹರ ಪಟ್ಟಣದಲ್ಲಿ ಒಟ್ಟು ಒಟ್ಟು 8 ಕುಟುಂಬಗಳ 60 ನೆರೆ ಸಂತ್ರಸ್ತರಿಗೆ ಪಟ್ಟಣದ ಎಪಿಎಂಸಿ ಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಹಲಸಬಾಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಟ್ಟು 6 ಕುಟುಂಬಗಳ 18 ಸಂತ್ರಸ್ತರಿಗೆ ಗಂಜಿ ಕೇಂದ್ರ ತೆರೆಯಲಾಗಿದೆ.
ಹೊನ್ನಾಳಿ ಪಟ್ಟಣದ ನದಿ ಪಾತ್ರದ ಬಾಲರಾಜ್ ಘಾಟ್ ಹಾಗೂ ಬಂಬು ಬಜಾರ್ ಪ್ರದೇಶದಲ್ಲಿ ಹಾಗೂ ಸಾಸ್ವೆಹಳ್ಳಿ ನೆರೆಪರಿಸ್ಥಿತಿ ಉಂಟಾಗಿದ್ದು, ಒಟ್ಟು 3 ಗಂಜಿ ಕೇಂದ್ರ ತೆರೆಯಲಾಗಿರುತ್ತದೆ. ಹೊನ್ನಾಳಿ ಪಟ್ಟಣದ 20 ಕುಟುಂಬಗಳ ಒಟ್ಟು 93 ಸಂತ್ರಸ್ತರಿಗೆ ಶಾದಿ ಭವನದಲ್ಲಿ, ಪಟ್ಟಣದ ಪೇಟೆ ಶಾಲೆಯಲ್ಲಿ 3 ಕುಟುಂಬಗಳ 15 ಸಂತ್ರಸ್ತರಿಗೆ ಹಾಗೂ ಸಾಸ್ವೆಹಳ್ಳಿಯಲ್ಲಿ 7 ಕುಟುಂಬಗಳ 30 ಸಂತ್ರಸ್ತರಿಗೆ ಗಂಜಿ ಕೇಂದ್ರ ತೆರೆಯಲಾಗಿದೆ.
ನ್ಯಾಮತಿ ತಾಲ್ಲೂಕಿನ ಚೀಲೂರು ಗ್ರಾಮದಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು, ಒಟ್ಟು 8 ಕುಟುಂಬಗಳ 60 ಜನ ಸಂತ್ರಸ್ತರಿಗೆ ಚೀಲೂರು ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 6 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಊಟ, ತಿಂಡಿ ಹಾಗೂ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








