ಐದು ವರ್ಷವಾದರೂ ತನಿಖೆ ಮುಗಿದಿಲ್ಲ, ಹಣ ತಿಂದವರ ವಿರುದ್ಧ ಕ್ರಮವಿಲ್ಲ
ತುಮಕೂರು
ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂತೆ ಆಗಿದೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಕ್ಷರ ದಾಸೋಹ ಸಮಿತಿಯ ಹಣ ದುರ್ಬಳಕೆ ಪ್ರಕರಣ. ಶಾಲಾ ಮಕ್ಕಳ ಬಿಸಿಯೂಟಕ್ಕೆ ಸರ್ಕಾರ ನೀಡುವ ಹಣದಲ್ಲಿ ಇಲಾಖೆ ಅಧಿಕಾರಿಗಳು ಸುಮಾರು 35 ಲಕ್ಷ ರೂ ಗುಳುಂ ಮಾಡಿದ್ದಾರೆ. ಆದರೆ, ಅದರ ಆರೋಪ ಮಾತ್ರ ಕಚೇರಿಯ ಡೇಟಾ ಎಂಟ್ರಿ ಆಪರೇಟರ್ ತಲೆಗೆ ಸುತ್ತಿಕೊಂಡಿದೆ.
ಐದು ವರ್ಷಗಳಿಂದ ಈ ಅವ್ಯವಹಾರ ಪ್ರಕರಣದ ತನಿಖೆ ನಿಂತಲ್ಲೇ ಕಿರಕಿ ಹೊಡೆಯುತ್ತಿದೆ, ತಪ್ಪಿತಸ್ಥರ ಪತ್ತೆ ಆಗಿಲ್ಲ, ಯಾರ ಮೇಲೂ ಕ್ರಮ ಜರುಗಿಸಿಲ್ಲ. ಕಾರಣ, ತನಿಖೆ ಹೊಣೆ ಹೊತ್ತವರೆಲ್ಲಾ ಸಂಬಂಧಿಸಿದ ಅಧಿಕಾರಿಗಳೇ ಆಗಿರುವುದರಿಂದ ಹಣ ತಿಂದವರನ್ನು ಬಚಾವ್ ಮಾಡುವ ಪ್ರಯತ್ನ ನಡೆದಿದೆ ಎಂಬ ಆರೋಪಗಳಿವೆ. ಜೊತೆಗೆ ತನಿಖೆ ನೆಪದಲ್ಲಿ ಡೇಟಾ ಎಂಟ್ರಿ ಆಪರೇಟರ್‍ಗೆ ಅಧಿಕಾರಿಗಳಿಂದ ಟಾರ್ಚರ್ ಮುಂದುವರೆದಿದೆ. ಆಕೆಯೇ ಲಕ್ಷಾಂತರ ರೂ ಅವ್ಯವಹಾರ ಮಾಡಿದ್ದಾರೆ ಎಂಬು ಆರೋಪವನ್ನು ಆಕೆಯ ತಲೆಗೆ ಕಟ್ಟುವ ಪ್ರಯತ್ನವೂ ನಡೆದಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವ ಅಕ್ಷರ ದಾಸೋಹದ ಸುಮಾರು 35 ಲಕ್ಷ ರೂ ಗುಳುಂ ಆದ ಪ್ರಕರಣವಿದು. ಅನಧಿಕೃತವಾಗಿ ಚಿಕ್ಕನಾಯಕನಹಳ್ಳಿ ಕೆನರಾ ಬ್ಯಾಂಕಿನಲ್ಲಿ ಅನಧಿಕೃತ ವ್ಯಕ್ತಿಗಳ ಅಕೌಂಟ್‍ನಲ್ಲಿ ಸರ್ಕಾರದ ಹಣವನ್ನು ಆ ಅಕೌಂಟುಗಳಿಗೆ ಜಮಾ ಮಾಡಿ ಅಕ್ರಮವಾಗಿ ವಹಿವಾಟು ನಡೆಸಿರುವ ಪ್ರಕರಣ. ಅಧಿಕಾರಿಗಳ ಆ ಹಣವನ್ನು ಆಗಾಗ ಡ್ರಾ ಮಾಡಿಕೊಂಡು ಸ್ವಂತಕ್ಕೆ ಬಳಸಿಕೊಂಡ ಪ್ರಕರಣ.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಚೇರಿಯ ಅಕ್ಷರ ದಾಸೋಹ ಸಮಿತಿಯ ಕಂಪ್ಯೂಟರ್ ಆಪರೇಟರ್ ಶೃತಿ, ಈಕೆಯ ತಾಯಿ ಲಕ್ಷ್ಮಮ್ಮ ಹಾಗೂ ಇನ್ನಿತರರ ಹೆಸರಿನ ಬ್ಯಾಂಕ್ ಅಕೌಂಟ್ ಮೂಲಕ ಅಕ್ಷರ ದಾಸೋಹದ ಸುಮಾರು 35 ಲಕ್ಷ ರೂ.ಗಳನ್ನು ವಹಿವಾಟು ನಡೆಸಿ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಐದು ವರ್ಷಗಳಿಂದ ಇದರ ಚರ್ಚೆ, ತನಿಖೆ ನಡೆಯುತ್ತಲೇ ಇದೆ.
ಇಷ್ಟೂ ಹಣವನ್ನು ಕಂಪ್ಯೂಟರ್ ಆಪರೇಟರ್ ಶೃತಿ ಹಾಗೂ ಆಕೆ ತಾಯಿ ತಮ್ಮ ಹೆಸರಿನ ಬ್ಯಾಂಕ್ ಅಕೌಂಟ್‍ನಲ್ಲಿದ್ದ ಸರ್ಕಾರದ ಹಣ ಡ್ರಾ ಮಾಡಿಕೊಂಡು ಹಣ ಗುಳುಂ ಮಾಡಿದ್ದಾರೆ ಎಂದು ಅಧಿಕಾರಿಗಳು ಆರೋಪ ಮಾಡುತ್ತಾ ಸಂಬಂಧಿಸಿದ ಅಧಿಕಾರಿಗಳನ್ನು ಆರೋಪದಿಂದ ಬಚಾವ್ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ.
ಹಾಗಾಗಿ ಹಣ ಡ್ರಾ ಮಾಡಿಕೊಂಡಿರುವ ಶೃತಿ ಹಾಗೂ ಆಕೆ ತಾಯಿಂದ ಹಣ ವಸೂಲಿ ಮಾಡಬೇಕು ಎಂದು ತೀರ್ಮಾನಕ್ಕೆ ಬಂದಿರುವ ಅಧಿಕಾರಿಗಳು ಹಣಕ್ಕಾಗಿ ಶೃತಿ ಹಾಗೂ ಆಕೆ ಕುಟುಂಬದವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಗುತ್ತಿಗೆ ನೌಕರಳಾದ ನಾನು ಮೇಲಾಧಿಕಾರಿಗಳು ಹೇಳಿದಂತೆ ಕೇಳಬೇಕಾಗುತ್ತದೆ, ಅವರು ಹೇಳಿದಂತ ತನ್ ಹಾಗೂ ತಾಯಿಯ ಅಕೌಂಟಿನಲ್ಲಿ ಅವರು ಕೊಟ್ಟ ಹಣ ಜಮಾ ಮಾಡಿ, ಅವರು ಕೇಳಿದಾಗೆಲ್ಲಾ ಬಿಡಿಸಿಕೊಟ್ಟಿದ್ದೆವು, ಅದು ಅಕ್ಷರ ದಾಸೋಹದ ಅಕ್ರಮ ಹಣ ಎಂದು ನಂತರ ತಿಳಿಯಿತು.
ತಾವು ಆ ಸಂಬಂಧದ ಹಣ ಉಪಯೋಗಿಸಿಕೊಂಡಿಲ್ಲ, ಅಧಿಕಾರಿಗಳು ಕೇಳಿದಾಗ ಡ್ರಾ ಮಾಡಿ ಕೊಟ್ಟಿದ್ದೇವೆ ಎಂದು ಶೃತಿ ಹೇಳುತ್ತಿದ್ದಾರೆ.ಈ ಪ್ರಕರಣದಲ್ಲಿ ಆಗಿನ ಅಕ್ಷರ ದಾಸೋಹ ಸಮಿತಿಯ ಶಿಕ್ಷಣಾಧಿಕಾರಿ(ಈಗ ನಿವೃತ್ತ) ಸಿದ್ಧಗಂಗಯ್ಯ, ಆಗಿನ ಸಹಾಯಕ ನಿರ್ದೇಶಕ (ಈಗ ಹೆಬ್ಬೂರು ಪ್ರೌಢ ಶಾಲೆ ಮುಖ್ಯ ಶಿಕ್ಷಕ) ತಿಮ್ಮರಾಜು, ಈಗಿನ ಸಹಾಯಕ ನಿರ್ದೇಶಕ ನಾಗಭೂಷಣ್, ಚಿಕ್ಕನಾಯಕನಹಳ್ಳಿ ಕೆನರಾ ಬ್ಯಾಂಕ್ ಅಟೆಂಡರ್ ಶಿವಕುಮಾರ್, ರಾಮನಹಳ್ಳಿ ಶಾಲೆ ಅಟೆಂಡರ್(ನಿವೃತ್ತ) ಕೃಷ್ಣಯ್ಯ, ಬೇವಿನಹಳ್ಳಿ ದೇವಸ್ಥಾನ ಶಾಲೆ ಶಿಕ್ಷಕ ರಮೇಶ್ ಮತ್ತಿತರರು ಭಾಗಿಯಾಗಿದ್ದಾರೆ ಎಂದು ಶೃತಿ ಹೇಳುತ್ತಾರೆ. ಕೃಷ್ಣಯ್ಯ ನಿವೃತ್ತನಾಗಿದ್ದರೂ ಅಕ್ಷರ ದಾಸೋಹ ಸಮಿತಿಯಲ್ಲಿ ತನ್ನ ಹೆಂಡತಿ ಹೆಸರಿನಲ್ಲಿ ಅನಧಿಕೃತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ. ಈ ಹಣ ದುರುಪಯೋಗ ಪ್ರಕರಣದಲ್ಲಿ ಇಷ್ಟು ಜನ ಭಾಗಿಯಾಗಿದ್ದಾರೆ ಎಂದು ಶೃತಿ ತನಿಖಾಧಿಕಾರಿಗಳಿಗೆ ಪತ್ರ ಬರೆದು ನೀಡಿದ್ದಾರೆ.
ಹಣ ದುರುಪಯೋಗ ಆರೋಪ, ಅವಮಾನದಿಂದ ಶೃತಿ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಕೆ ಎರಡು ಮೂರು ಬಾರಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು ಎಂದು ಹೊಯ್ಸಳ ಕಟ್ಟೆ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಮಹಾಲಿಂಗಯ್ಯ ಮೊನ್ನೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿ, ಈ ಲೋಪಕ್ಕೆ ಅಧಿಕಾರಿಗಳೇ ಕಾರಣ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಈ ನಡುವೆ ಅಧಿಕಾರಿಗಳು ಹಣಕ್ಕಾಗಿ ಶೃತಿ ಮನೆಯವರಿಗೆ ಹಿಂಸೆ ಮಾಡುತ್ತಿದ್ದು ಮರ್ಯಾದೆಗೆ ಅಂಜಿ ತಾವು ಸೈಟು, ಒಡವೆ, ಎತ್ತುಗಳು ಮಾರಿ, ಸಂಬಂಧಿಕರಿಂದ ಸಾಲ ಮಾಡಿ 16 ಲಕ್ಷ ರೂ ಬ್ಯಾಂಕಿಗೆ ಜಮಾ ಮಾಡಿದ್ದಾಗಿ ಶೃತಿಯ ತಂದೆ ಪುಟ್ಟಯ್ಯ ಹೇಳಿದರು. ನೀವು ಅಕ್ಷರ ದಾಸೋಹದ ಹಣ ಬಳಸಿಕೊಂಡಿಲ್ಲ ಎಂದ ಮೇಲೆ ಯಾಕೆ 16 ಲಕ್ಷ ರೂಗಳನ್ನು ಬ್ಯಾಂಕಿಗೆ ಜಮಾ ಮಾಡಿದಿರಿ ಎಂಬ ಪ್ರಶ್ನೆಗೆ, ಅಧಿಕಾರಿಗಳು ಮಾನಸಿಕ ಹಿಂಸೆ ನೀಡಿದರು, ಜೈಲಿಗೆ ಹಾಕಿಸುವುದಾಗಿ ಹೆದರಿಸಿದರು, ಪದೇಪದೆ ಮನೆಗೆ ಬಂದು ನೆರೆಹೊರೆಯವರ ಎದುರು ಅವಮಾನವಾಗುವಂತೆ ನಡೆದುಕೊಂಡರು ಇದಕ್ಕೆ ಹೆದರಿ ಹಣ ಜಮಾ ಮಾಡಿದ್ದಾಗಿ ಶೃತಿ ಹೇಳಿದರು.
ಅಧಿಕಾರಿಗಳ ಒತ್ತಡಕ್ಕೆ ಸಿಕ್ಕಿ ಹಣ ಕಟ್ಟುವಂತಾಯಿತು. ನನ್ನ ಮಗಳಿಗೆ ಅನ್ಯಾಯವಾಗಿದೆ, ಮಗಳ ಮೇಲೆ ಹಣ ದುರುಪಯೋಗದ ಆರೋಪ ಮಾಡಿ ಅಧಿಕಾರಿಗಳು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ನಾವು ಕಟ್ಟಿರುವ 16 ಲಕ್ಷ ರೂಗಳನ್ನು ನಮಗೆ ವಾಪಾಸ್ ಕೊಡಿಸಬೇಕು ಎಂದು ಪುಟ್ಟಯ್ಯ ಅಳಲುತೊಡಿಕೊಂಡಿದ್ದಾರೆ.
ಅಕ್ಷರ ದಾಸೋಹದಂತಹ ಸರ್ಕಾರದ ಸಮಿತಿಯಲ್ಲಿ ಇಲಾಖೆ ಅಧಿಕಾರಿಗಳು, ಡಿಡಿಪಿಐ, ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು, ಹಣಕಾಸು ವಿಭಾಗದ ಅಧಿಕಾರಿಗಳ ಉಸ್ತುವಾರಿಯಲ್ಲಿರುವಾಗ ಸರ್ಕಾರದ ಹಣವನ್ನು ಗುತ್ತಿಗೆ ನೌಕರಳಾದ ಒಬ್ಬ ಕಂಪ್ಯೂಟರ್ ಆಪರೇಟರ್ ತನ್ನ ಬ್ಯಾಂಕ್ ಅಕೌಂಟಿಗೆ ಜಮಾ ಮಾಡಿಕೊಳ್ಳಲು ಸಾಧ್ಯವೆ? ಹಾಗೂ ಇಲಾಖೆಗೆ ಯಾವುದೇ ಸಂಬಂಧವಿಲ್ಲದ ಆಕೆ ತಾಯಿ ಲಕ್ಷಮ್ಮನ ಹೆಸರಿನ ಬ್ಯಾಂಕ್ ಅಕೌಂಟಿಗೆ ಸೇರಲು ಸಾಧ್ಯವೆ? ಅಧಿಕಾರಿಗಳ ಕುಮ್ಮಕ್ಕು ಇಲ್ಲದೆ ಇದು ಸಾಧ್ಯವಿಲ್ಲ ಎಂಬುದು ಸಾಮಾನ್ಯರಿಗೂ ತಿಳಿಯುತ್ತದೆ. ಆದರೆ ಪ್ರಕರಣದ ತನಿಖಾಧಿಕಾರಿಗಳಿಗೆ ತಿಳಿಯುವುದಿಲ್ಲವೆ? ಇದು ಅಧಿಕಾರಿಗಳನ್ನು ರಕ್ಷಿಸುವ ಉದ್ದೇಶವೇ ಆಗಿದೆ ಎಂದು ಜಿಪಂ ಸದಸ್ಯ ಮಹಾಲಿಂಗಯ್ಯ ಹೇಳುತ್ತಾರೆ.
ಅಧಿಕಾರಿಗಳು ಒಂದು ತಂಡವಾಗಿ ಈ ಅಕ್ರಮ ಮಾಡಿದ್ದಾರೆ. ತಪ್ಪತಸ್ಥ ಅಧಿಕಾರಿಗಳಿಂದ ಅಕ್ರಮ ಮಾಡಿರುವ ಹಣವನ್ನು ಬಡ್ಡಿ ಸಮೇತ ವಸೂಲು ಮಾಡಬೇಕು, ಎಲ್ಲಾ ಸೇರಿ ಸುಮಾರು 40 ಲಕ್ಷ ರೂ ಸರ್ಕಾರದ ಹಣ ದುರುಪಯೋಗವಾಗಿದೆ. ಆರೋಪಿತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಈ ಬಗ್ಗೆ ಈ ತಿಂಗಳ 21ರಂದು ನಡೆಯುವ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ತಾವು ಮತ್ತೆ ಒತ್ತಾಯಿಸುವುದಾಗಿ ಮಹಾಲಿಂಗಯ್ಯ ಹೇಳಿದರು.
ಕಳೆದ ಮಂಗಳವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಈ ಪ್ರಕರಣತೀವ್ರ ಚರ್ಚೆಗೀಡಾಯಿತು. ಐದು ವರ್ಷದ ಹಿಂದೆ ನಡೆದ ಈ ಪ್ರಕರಣವನ್ನು ಈವರೆಗೂ ತನಿಖೆ ಮಾಡಿ ತಪ್ಪಿತಸ್ಥರನ್ನು ಪತ್ತೆ ಮಾಡಲಾಗಿಲ್ಲ ಎಂದ ಮೇಲೆ ಆಡಳಿತದ ದೌರ್ಬಲ್ಯವನ್ನು ಅಧಿಕಾರಿ ವರ್ಗ ದುರುಪಯೋಗಪಡಿಸಿಕೊಳ್ಳುತ್ತದೆ ಎಂದರ್ಥ ಎಂದು ಸದಸ್ಯರು ಜಿಲ್ಲಾ ಪಂಚಾಯ್ತಿ ಆಡಳಿತ ಕಾರ್ಯನಿರ್ಲಕ್ಷತೆ ವಿರುದ್ಧ ಹರಿಹಾಯ್ದರು. ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದು ಸದಸ್ಯರು ಒತ್ತಾಯಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
