ಪ್ರವಾಹ ಸಂತ್ರಸ್ತರಿಗೆ ಮಿಡಿದ ಚೆಳ್ಳಕೆರೆ ಜನತೆ..!

ಚಳ್ಳಕೆರೆ

    ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ತಮ್ಮ ಎಲ್ಲಾ ಕಷ್ಟಗಳ ನಡುವೆಯೂ ಸಹ ಉದಾರವಾಗಿ ದಾನ ನೀಡಿದ ಚಳ್ಳಕೆರೆ ತಾಲ್ಲೂಕಿನ ಸಮಸ್ತ ಜನರಿಗೆ ಅಭಿನಂದನೆಯನ್ನು ಸಲ್ಲಿಸುವುದಾಗಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

   ಶನಿವಾರ ಶಾಸಕರ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಾರಂಭದ ಹಂತದಲ್ಲಿ ನಗರದ ಎಲ್ಲಾ ರಸ್ತೆಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಸಾರ್ವಜನಿಕವಾಗಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಪಕ್ಷ ಬೇದ ಮರೆತು ಎಲ್ಲರೂ ನೆರೆ ಪೀಡಿತ ಪ್ರದೇಶ ಜನರಿಗೆ ತಮ್ಮಲ್ಲಿರುವ ಹಣ ಹಾಗೂ ವಸ್ತುಗಳನ್ನು ದಾನಮಾಡುವ ಮೂಲಕ ಧನ್ಯತೆಯನ್ನು ಮರೆದಿದ್ದಾರೆ. ಅಂದಾಜು 45 ಲಕ್ಷ ನಗದು ಹಣ, 30 ಲಕ್ಷ ಮೌಲ್ಯದ ಆಹಾರ ಹಾಗೂ ಇತರೆ ವಸ್ತುಗಳು ಒಟ್ಟು 75 ಲಕ್ಷ ಮೌಲ್ಯದ ವಸ್ತು ಹಾಗೂ ನಗದು ಹಣವನ್ನು ಉತ್ತರ ಕರ್ನಾಟಕದ ನೆರೆ ಪ್ರದೇಶಗಳಿಗೆ ತೆಗೆದುಕೊಂಡು ಹೋಗಲಾಗುವುದು.

    ಈಗಾಗಲೇ ಒಟ್ಟು 7 ಲಾರಿಗಳಲ್ಲಿ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿದ್ದು, ಬಾಗಿಲಕೋಟೆ ಮತ್ತು ಬೆಳಗಾಂ ಜಿಲ್ಲೆಗಳಿಗೆ ಪ್ರಾರಂಭದ ಹಂತದಲ್ಲಿ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರ ಸಮಕ್ಷಮದಲ್ಲೇ ಮನೆ ಮನೆಗೂ ಭೇಟಿ ನೀಡಿ ಅವಶ್ಯಕ ವಸ್ತುಗಳನ್ನು ನೀಡಲಾಗುವುದು.

   ನೆರೆ ಸಂತ್ರಸ್ತರಿಗೆ ನೆರವಾಗಲು ನಗರದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗ, ಗುತ್ತಿಗೆದಾರರು, ವೈದ್ಯರು, ಶಾಲಾ ಮಕ್ಕಳು ಹಾಗೂ ಇನ್ನಿತರೆ ಸಂಘ ಸಂಸ್ಥೆಗಳು ಇದಾರವಾಗಿ ದಾನ ಮಾಡಿದ್ಧಾರೆ. ಇವರೆಲ್ಲರನ್ನೂ ಅಭಿನಂದಿಸುವುದಾಗಿ ಅವರು ತಿಳಿಸಿದರು.

   ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಒಂದಾದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲ್ಲೂಕುಗಳು ನಿರಂತರ ಬರಗಾಲದ ಹಿನ್ನೆಲೆಯಲ್ಲಿ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಆದರೆ, ಅಲ್ಲಿನ ಜನತೆಗೆ ನೆರವಾಗಲು ಸಮಾಜದ ಪ್ರತಿಯೊಬ್ಬರೂ ತಮ್ಮದೇಯಾದ ಕಾಣಿಕೆಯನ್ನು ನೀಡಿದ್ದಾರೆ. ಉತ್ತರ ಕರ್ನಾಟಕ ಜನತೆಯ ಭವಿಷ್ಯದ ಬದುಕಿನಲ್ಲಿ ಉತ್ತಮ ಸ್ಥಿತಿ ಮರುಕಳಿಸಲಿ ಎಂಬ ಅಭಿಲಾಷೆಯಿಂದ ಎಲ್ಲರೂ ಸಹಕಾರ ನೀಡಿದ್ಧಾರೆಂದರು.

     ಈಗಾಗಲೇ ನಮ್ಮ ಸಿಬ್ಬಂದಿ ವರ್ಗ ಸಾರ್ವಜನಿಕರಿಂದ ದಾನದ ರೂಪದಲ್ಲಿ ಬಂದ ವಿವಿಧ ವಸ್ತುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿದ್ದು, ಒಟ್ಟು 3311 ಅಕ್ಕಿ ಚೀಲ, 3 ಸಾವಿರ ಬೆಡ್‍ಶೀಟ್, 2 ಸಾವಿರ ನೀರಿನ ಬಾಟಲ್, 568 ಬಿಸ್ಕತ್ ಪಾಕೇಟ್, ಒಂದು ಸಾವಿರ ಸೀರೆ, ಲುಂಗಿ, ಟವಲ್, ಪ್ಲಾಸ್ಟಿಕ್ ಚಾಪೆ, ಪೇಪರ್ ಪ್ಲೇಟ್, 2470 ಸ್ವೀಲ್ ಲೋಟ, 1185 ಸ್ಟೀಲ್ ತಟ್ಟೆ, 500 ಪ್ಯಾಂಟ್, 260 ಸ್ಟೀಲ್ ಪಾತ್ರೆ, 875 ಚಿಕ್ಕ ಮಕ್ಕಳ ಬಟ್ಟೆ ಮುಂತಾದವುಗಳನ್ನು ಪ್ಯಾಕ್ ಮಾಡಿ ಲಾರಿಗಳಿಗೆ ತುಂಬಲಾಗಿದೆ. ನಗದು ಹಣವನ್ನು ಸಹ ತೆಗೆದುಕೊಂಡು ಹೋಗಿ ಅಲ್ಲಿನ ಜನರ ಅವಶ್ಯಕತೆಗೆ ತಕ್ಕಂತೆ ವೆಚ್ಚ ಮಾಡಲಾಗುವುದು.

     ಈಗಾಗಲೇ ಬಾಗಿಲಕೋಟೆ ಮತ್ತು ಬೆಳಗಾಂ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾತುಕಥೆ ನಡೆಸಿದ್ದು, ಇಲ್ಲಿಂದ ಸುಮಾರು 100 ಸದಸ್ಯರ ತಂಡ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಎಂದರು. ಇದೇ ಸಂದರ್ಭದಲ್ಲಿ ನಗರದ ಎಲ್ಲಾ ನಾಗರೀಕರು ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಸಂಘಟನೆ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಪರಶುರಾಮಪುರ ಮತ್ತು ನಾಯಕನಹಟ್ಟಿ ಹೋಬಳಿಯ ಗ್ರಾಮಸ್ಥರು ಎಲ್ಲರೂ ಶಕ್ತಿ ಮೀರಿ ನೆರೆ ಸಂತ್ರಸ್ತರಿಗೆ ನೆರವಾಗಲು ಸಹಕಾರ ನೀಡಿದ್ದು, ಎಲ್ಲರನ್ನು ಅಭಿನಂದಿಸುದಲ್ಲದೆ, ಕೃತಜ್ಞತೆಯನ್ನು ಸಲ್ಲಿಸುವುದಾಗಿ ತಿಳಿಸಿದರು.

    ಇದೇ ಸಂದರ್ಭದಲ್ಲಿ ಏಳು ಪತ್ಯೇಕ ಲಾರಿಗಳಲ್ಲಿ ಅನೇಕ ಸದಸ್ಯರೂ ಸಹ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಅಲ್ಲಿನ ಅಧಿಕಾರಿಗಳ ಸಹಕಾರದೊಂದಿಗೆ ಮನೆ ಮನೆಗೂ ತೆರಳಿ ನೊಂದ ಜನರನ್ನು ವಿಚಾರಿಸಿ ಅವರಿಗೆ ನಮ್ಮಲ್ಲಿರುವ ವಸ್ತುಗಳನ್ನು ಅನುಕೂಲಕ್ಕೆ ತಕ್ಕಂತೆ ನೀಡಲಾಗುವುದು. ಈಗಾಗಲೇ ಸಾರ್ವಜನಿಕರು ನೀಡಿದ ಹಣದಲ್ಲಿ ಕೆಲವೊಂದು ವಸ್ತುಗಳನ್ನು ಖರೀದಿಸಿದ್ದು, ಹಣ ಉಳಿದಲ್ಲಿ ಸಂಬಂದಪಟ್ಟ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಕಳುಹಿಸಿಕೊಡಲಾಗುವುದು ಎಂದರು.

     ನೆರೆಪೀಡಿತ ಜನರಿಗೆ ನೆರವಾಗುವ ನಿಟ್ಟಿನಲ್ಲಿ ನನ್ನೊಂದಿಗೆ ಕಳೆದ ಒಂದು ವಾರದಿಂದ ಹಗಲು ರಾತ್ರಿ ಎನ್ನದೆ ಸಹಕಾರ ನೀಡಿದ ಎಲ್ಲಾ ಪಕ್ಷಗಳ ಮುಖಂಡರಿಗೆ, ಕಾರ್ಯಕರ್ತರಿಗೆ, ಅಧಿಕಾರಿ ವರ್ಗದ ಸಹಕಾರವನ್ನು ಮರೆಯುವಂತಿಲ್ಲ. ನೆರೆ ಸಂತ್ರಸ್ತರಿಗೆ ನೆರವಾಗುವ ಪುಣ್ಯಕಾರ್ಯಕ್ಕೆ ಸಹಕಾರ ನೀಡುವ ಮೂಲಕ ಎಲ್ಲರೂ ಪುಣ್ಯ ಸಂಪಾದಿಸಿರುವಿರಿ ಎಂದು ಭಾವಿಸಲಾಗುವುದು ಎಂದರು.

      ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಮುಖಂಡ ಟಿ.ಪ್ರಭುದೇವ್, ಸಮಾಜ ಸೇವಕ ಎಚ್.ಎಸ್.ಸೈಯದ್, ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಆಂಜನೇಯ, ವೀರೇಶ್, ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ, ಎಂ.ಜೆ.ರಾಘವೇಂದ್ರ, ಕೆ.ವೀರಭದ್ರಪ್ಪ, ಬಿ.ಟಿ.ರಮೇಶ್‍ಗೌಡ, ವೈ.ಪ್ರಕಾಶ್, ಮುಖಂಡರಾದ ಕೃಷ್ಣ, ಶೇಖರಪ್ಪ, ಡಾ.ಮಂಜುನಾಥ, ಆರ್.ಪ್ರಸನ್ನಕುಮಾರ್, ಬಡಗಿಪಾಪಣ್ಣ, ಶಿವಕುಮಾರಸ್ವಾಮಿ, ಅತಿಕುರ್ ರೆಹಮಾನ್, ಸೈಪುಲ್ಲಾ ಮುಂತಾದವರು ಉಪಸ್ಥಿತರಿದ್ದರು.

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap