ದಾವಣಗೆರೆ:
ರಾಜ್ಯದ ನೆರೆ ಸಂತ್ರಸ್ತರಿಗೆ ಸಮರೋಪಾದಿಯಲ್ಲಿ ಪರಿಹಾರ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಭಾರತ ಕಮ್ಯೂನಿಷ್ಟ್ ಪಕ್ಷದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಕಾಮ್ರೇಡ್ ಪಂಪಾಪತಿ ಭವನದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಸಿಪಿಐ ಕಾರ್ಯಕರ್ತರು, ಎಸಿ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ, ರಾಜ್ಯದಲ್ಲಿ ಸುರಿದ ಮಳೆಯಿಂದಾಗಿ 30 ಸಾವಿರ ಕುಟುಂಬಗಳ ಕೃಷಿ ಭೂಮಿ ನೀರು ಪಾಲಾಗಿದೆ. ಒಟ್ಟಾರೆ 20 ಲಕ್ಷ ಎಕರೆಗೂ ಅದಿಕ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ. 1 ಲಕ್ಷ ಎಕರೆಯಷ್ಟು ಕೃಷಿ ಯೋಗ್ಯ ಭೂಮಿಯಲ್ಲಿ ಭೂ ಕೊರೆತದಿಂದಾಗಿ ಕೃಷಿಗೆ ಯೋಗ್ಯವಿಲ್ಲದಂತಾಗಿದೆ. ಸಾವಿರಾರು ಗ್ರಾಮಗಳು ಮುಳುಗಡೆಯಾಗಿದ್ದು, ಲಕ್ಷಾಂತರ ಜನರು ಬೀದಿ ಪಾಲಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಅಪಾರ ಪ್ರಮಾಣದ ಪಶು ಸಂಪತ್ತು ನಾಶವಾಗಿದ್ದು, ನೂರಾರು ಜೀವಹಾನಿ ಪ್ರಕರಣ ವರದಿಯಾಗಿವೆ. ನಗರ, ಪಟ್ಟಣ, ಗ್ರಾಮೀಣ ಜನರು, ರೈತಾಪಿ ಜನರ ಕೃಷಿ ಉಪಕರಣ, ಗೃಹ ವಸ್ತುಗಳು, ಅಗತ್ಯ ಉಪಕರಣ, ಸಲಕರಣೆಗಳು, ವಿದ್ಯಾರ್ಥಿಗಳ ಪಠ್ಯ ಪುಸ್ತಕ, ಅಂಕಪಟ್ಟಿ, ಮನೆ, ಕಚೇರಿ, ಅಂಗಡಿ, ವಿದ್ಯಾಭ್ಯಾಸ, ಆಸ್ತಿಪಾಸ್ತಿ ದಾಖಲೆ, ಕಾಗದಪತ್ರಗಳು, ನೋಟುಗಳು, ಮೇವು, ಚಕ್ಕಡಿ, ಟ್ರ್ಯಾಕ್ಟರ್ ಇತರೆ ವಾಹನಗಳು ಹಾಳಾಗಿವೆ. ಭಾರೀ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ, ಶಾಲಾ, ಕಾಲೇಜು, ಕಚೇರಿ, ಆಸ್ಪತ್ರೆ ಕಟ್ಟಡಗಳು, ಸೇತುವೆಗಳು, ರಸ್ತೆಗಳು ಪ್ರವಾಹಕ್ಕೆ ಸಿಲುಕಿ ನಾಶವಾಗಿವೆ.
ಇಡೀ ರಾಜ್ಯದಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, ಜಲಾವೃತ ನಗರ, ಪಟ್ಟಣ, ಗ್ರಾಮೀಣ ಜನರಿಗೆ ಹಾಸಿಗೆ, ಹೊದಿಕೆ, ಊಟ, ತಿಂಡಿ, ಔಷಧೋಪಚಾರಗಳಿಲ್ಲದೇ ಜನರೂ ತತ್ತರಿಸಿದ್ದಾರೆ. ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 15 ದಿನಗಳಿಂದಲೂ ಅತಿವೃಷ್ಟಿಯಿಂದ ರಾಜ್ಯವು ತತ್ತರಿಸಿ ಹೋಗಿದೆ. 18 ಜಿಲ್ಲೆಗಳ ಜನರು ನೆರೆ ಹಾವಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಈ ಭೀಕರ ನೆರೆ ಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ನೆರೆ ಸಂತ್ರಸ್ತರ ನೆರವಿಗೆ ಧಾವಿಸಬೇಕು. ಅತಿವೃಷ್ಟಿಯಿಂದಾಗಿ ರಾಜ್ಯಾದ್ಯಂತ 2 ಲಕ್ಷಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಆದ್ದರಿಂದ ಪ್ರವಾಹಕ್ಕೆ ತುತ್ತಾಗಿ ಮನೆಗಳನ್ನು ಕಳೆದುಕೊಂಡಿರುವ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ತಕ್ಷಣವೇ ಮನೆ ಕಟ್ಟಿಕೊಡಿಸಿ ಸೂರು ಕಲ್ಪಿಸಬೇಕೆಂದು ಆಗ್ರಹಿಸಿದರು.
ಪ್ರವಾಹ ಮತ್ತು ಮಳೆಯಿಂದ ಭಾರೀ ಹಾನಿ, ಜನರ ಬದುಕಿನ ಸಂಕಷ್ಟ, ಸಹಸ್ರಾರು ಕೋಟಿ ಮೌಲ್ಯದ ಆಸ್ತಿ ಪಾಸ್ತಿ, ಬೆಳೆಹಾನಿಯಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತಿನ ಮಟ್ಟದ ಅನುದಾನ, ಸಹಾಯ ಸೌಲಭ್ಯ, ಸೌಕರ್ಯ ಕಲ್ಪಿಸಲು ಕೇಂದ್ರದ ಮೇಲೆ ರಾಜ್ಯ ಒತ್ತಡ ತರಲಿ. ಸಿಎಂ ಯಡಿಯೂರಪ್ಪ ಸಹ ಸಾಧ್ಯವಾದಷ್ಟು ಹೆಚ್ಚಿನ ಪರಿಹಾರ ಕಾರ್ಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಖಜಾಂಚಿ ಆನಂದರಾಜ, ಸಹ ಕಾರ್ಯದರ್ಶಿಗಳಾದ ಆವರಗೆರೆ ಎಚ್.ಜಿ.ಉಮೇಶ, ಆವರಗೆರೆ ಚಂದ್ರು, ಕಾರ್ಯದರ್ಶಿ ಆವರಗೆರೆ ವಾಸು, ಮೊಹಮ್ಮದ್ ಬಾಷಾ, ಬಸವರಾಜ ನಿಟುವಳ್ಳಿ, ಎನ್.ಟಿ.ಬಸವರಾಜ, ಗದಿಗೇಶ ಪಾಳೇದ, ಸರೋಜ, ಏಳುಕೋಟಿ, ಎಸ್.ಮೌನಾಚಾರ, ವಿ.ಲಕ್ಷ್ಮಣ, ಎನ್.ಲಿಂಗರಾಜ, ಎಚ್.ಪಿ.ಉಮಾಪತಿ, ಎ.ತಿಪ್ಪೇಶ ಆವರಗೆರೆ, ಕೆ.ಜಿ.ಶಿವಕುಮಾರ, ಬಿ.ದುಗ್ಗೇಶ, ಎನ್.ಟಿ.ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
