ತುಮಕೂರು
ಖಾಸಗಿ ವಾಹನ ಚಾಲಕರಿಗೆ ಅಪಘಾತವಾದಾಗ ಅಗತ್ಯ ತುರ್ತು ಚಿಕಿತ್ಸೆಯನ್ನು ನೀಡುವ ಬಗ್ಗೆ ಅಗತ್ಯ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ಸರ್ಕಾರ ಅಂಬೇಡ್ಕರ್ ಜೀವರಕ್ಷಕ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ನೀಡುತ್ತಿರುವ ತರಬೇತಿಯನ್ನು ಚಾಲಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ಎಂ.ಆಲದಕಟ್ಟೆ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಖಾಸಗಿ ವಾಹನ ಚಾಲಕರಿಗೆ ಸಹಾಯ ಮಾಡುವ ಉದ್ದೇಶದಿಂದ ಸರ್ಕಾರ 2016-17ನೇ ಸಾಲಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತು ಎಂದರು.
ಖಾಸಗಿ ವಾಣಿಜ್ಯ ಚಾಲಕರಿಗೆ ತರಬೇತಿ ನೀಡುವ ಮೂಲಕ ಅಪಘಾತವಾದ ಸಂದರ್ಭದಲ್ಲಿ ತೆಗೆದುಕೊಳ್ಳುವ ತುರ್ತು ಕ್ರಮಗಳ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ರೆಡ್ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಎಲ್ಲ ತಾಲ್ಲೂಕು ಮಟ್ಟದಲ್ಲಿಯೂ ವಾಹನ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಅಪಘಾತದಲ್ಲಿ ಚಾಲಕ ನಿಧನರಾದರೆ 5 ಲಕ್ಷದವರೆಗೆ ಸರ್ಕಾರದಿಂದ ಪರಿಹಾರಧನವನ್ನು ನೀಡಲಾಗುತ್ತಿದ್ದು, ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿರುವ ವಾಹನ ಚಾಲಕರಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಚಾಲಕರು ಈ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು ಎಂದರು.
ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್ ಮಾತನಾಡಿ ಚಾಲಕರು ಕಾರ್ಮಿಕ ಇಲಾಖೆ ನೀಡುತ್ತಿರುವ ಜೀವರಕ್ಷಕ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸೂಚಿಸಿದರು. ಅಪಘಾತವಾದ ಸಂದರ್ಭದಲ್ಲಿ ವಾಹನ ಚಾಲಕರು ಏನು ಮಾಡಬೇಕೆಂಬ ಅರಿವು ಮೂಡಿಸಿಕೊಳ್ಳುವುದರ ಜೊತೆ ಈ ತರಬೇತಿಯ ಪ್ರಯೋಜನ ಪಡೆದು ಇತರರಿಗೆ ಮಾದರಿಯಾಗುವಂತೆ ಸಲಹೆ ನೀಡಿದರು.ಆರ್ಟಿಒ ಅಧಿಕಾರಿ ಪ್ರಕಾಶ್, ಯೂತ್ ರೆಡ್ಕ್ರಾಸ್ ಅಧ್ಯಕ್ಷ ವೇಣುಗೋಪಾಲ್ ವೈದ್ಯಾಧಿಕಾರಿ ಡಾ.ಹಿರೇಮಠ್, ಬಾಲ ಕಾರ್ಮಿಕಾಧಿಕಾರಿ ರವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ