ಚಿತ್ರದುರ್ಗ:
ಅಲೆಮಾರಿ, ಅರೆಅಲೆಮಾರಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ನೀಡುವಂತೆ ಒತ್ತಾಯಿಸಿ ಜಿಲ್ಲಾ ಯಾದವ ಗೊಲ್ಲರ ಸಂಘದಿಂದ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ರಂಗಯ್ಯನಬಾಗಿಲು ಸಮೀವವಿರುವ ಜಿಲ್ಲಾ ಯಾದವ ಗೊಲ್ಲರ ಸಂಘದಿಂದ ಮೆರವಣಿಗೆ ಹೊರಟ ನೂರಾರು ವಿದ್ಯಾರ್ಥಿಗಳು ಗಾಂಧಿ ವೃತ್ತದ ಮೂಲಕ ಆಗಮಿಸಿ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು. ಎಷ್ಟು ಹೊತ್ತಾದರೂ ಜಿಲ್ಲಾಧಿಕಾರಿಗಳು ಬಂದು ಮನವಿ ಆಲಿಸಲಿಲ್ಲವೆಂದು ಕುಪಿತಗೊಂಡ ವಿದ್ಯಾರ್ಥಿಗಳು ಹಾಗೂ ಗೊಲ್ಲ ಜನಾಂಗದ ಮುಖಂಡರುಗಳು ಡಿ.ಸಿ.ಕಚೇರಿ ಗೇಟ್‍ಗೆ ಅಡ್ಡವಿಟ್ಟಿದ್ದ ಬ್ಯಾರಿಕೇಡ್‍ಗಳನ್ನು ತಳ್ಳಿಕೊಂಡು ನುಗ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಯಾದವ ಗೊಲ್ಲರ ಸಂಘದ ಅಧ್ಯಕ್ಷ ಸಿ.ಮಹಾಲಿಂಗಪ್ಪ ಮಾತನಾಡಿ ಕಳೆದ ಮೂವತ್ತು ವರ್ಷಗಳಿಂದಲೂ ಅಲೆಮಾರಿ, ಅರೆಅಲೆಮಾರಿ, ಗೊಲ್ಲರು, ಜೋಗಿಯರು, ಯಳವ, ದಾಸ, ಇತ್ಯಾದಿ 49 ಜಾತಿಯ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ತೆರೆಯುವಂತೆ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಇದುರವರೆವಿಗೂ ಎಲ್ಲಾ ಸರ್ಕಾರಗಳು ಪೊಳ್ಳು ಆಶ್ವಾಸನೆ ನೀಡುತ್ತ ನಮ್ಮನ್ನು ವಂಚಿಸಿಕೊಂಡು ಬರುತ್ತಿವೆ. ಇನ್ನೊಂದು ವಾರದೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
1966 ರಿಂದ 1991 ರತನಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ರೀತಿಯಲ್ಲಿ ಎಲ್ಲಾ ಸೌಲಭ್ಯಗಳನ್ನು ಈ ಸಮುದಾಯಗಳಿಗೆ ನೀಡಲಾಗುತ್ತಿತ್ತು. 1991 ರಿಂದ 25 ವರ್ಷಗಳ ಕಾಲ ಒಬ್ಬ ವಿದ್ಯಾರ್ಥಿಗೆ ತಿಂಗಳೊಂದಕ್ಕೆ 200 ರೂ. ಕೊಡುವುದಾಗಿ ಸರ್ಕಾರ ಆದೇಶ ಹೊರಡಿಸಿ ಅದು ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಸಿಗುತ್ತಿತ್ತು. ಇದರಿಂದ ಒಂದು ಸಾವಿರ ವಿದ್ಯಾರ್ಥಿಗಳು ಹಾಸ್ಟೆಲ್‍ನಿಂದ ವಂಚಿತರಾಗಿ ಗ್ರಾಮದಲ್ಲಿಯೇ ಉಳಿದುಕೊಳ್ಳುವಂತಾಗಿದೆ.
2015 ಕ್ರ.ಸಂ.1135 ಸರ್ಕಾರಿ ಆದೇಶದಂತೆ ಅರ್ಜಿ ಸಲ್ಲಿಸಿದ ನೂರಕ್ಕೆ ನೂರರಷ್ಟು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುವುದೆಂದು ಆದೇಶಿಸಿ ಇದುವರೆವಿಗೂ ಅನುಷ್ಟಾನಕ್ಕೆ ತಂದಿಲ್ಲ. ಇದನ್ನು ಪ್ರಶ್ನಿಸಿ ಜಿಲ್ಲಾ ಯಾದವ ಗೊಲ್ಲರ ಸಂಘದಿಂದ ಹೈಕೋರ್ಟ್ ಮೊರೆ ಹೋಗಿದ್ದಕ್ಕೆ ಎರಡು ಹಾಸ್ಟೆಲ್‍ಗಳನ್ನು ತೆರೆದು ವಿದ್ಯಾರ್ಥಿಗಳ ಕಣ್ಣೊರೆಸುವ ತಂತ್ರ ಮಾಡಿತೆ ವಿನಃ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಇನ್ನು ಹಾಸ್ಟೆಲ್ ಸಿಕ್ಕಿಲ್ಲ ಸರ್ಕಾರ ನಮ್ಮ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಂಡು ಶೀಘ್ರವೇ ಹಾಸ್ಟೆಲ್‍ಗಳನ್ನು ತೆರೆಯಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಬೆದರಿಕೆ ಹಾಕಿದರು.
1988 ರ ನವೆಂಬರ್‍ನಲ್ಲಿ ಹಾಸ್ಟೆಲ್‍ಗಾಗಿ ಹೋರಾಟಕ್ಕಿಳಿದಾಗ ಪೊಲೀಸ್ ಮತ್ತು ವಿದ್ಯಾರ್ಥಿಗಳ ನಡುವೆ ನಡೆದ ಘರ್ಷಣೆಯಲ್ಲಿ ನೂರಾರು ವಿದ್ಯಾರ್ಥಿಗಳು ಕೇಸು ದಾಖಲಿಸಿಕೊಂಡು ತೊಂದರೆ ಅನುಭವಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಗೊಲ್ಲರು, ಜೋಗಿಯರು, ಉಪ್ಪಾರು, ದಾಸ್ಯರು ಇನ್ನು ಮೊದಲಾದವರು ಮೂರು ಲಕ್ಷಕ್ಕೂ ಅಧಿಕವಾಗಿದ್ದಾರೆ.
ಬಜೆಟ್‍ನಲ್ಲಿ ನೂರು ಕೋಟಿ ರೂ.ಗಳನ್ನು ನೀಡುತ್ತೇವೆಂದು ಸರ್ಕಾರ ಹೇಳಿದೆ. ಜಿಲ್ಲೆಯ ಆರು ತಾಲೂಕಿನ ಶಾಸಕರು, ಮಾಜಿ ಸಮಾಜ ಕಲ್ಯಾಣ ಸಚಿವರು, ಸಂಸದರಾಗಲಿ ಯಾರು ನಮ್ಮ ಜನಾಂಗದ ವಿದ್ಯಾರ್ಥಿಗಳ ಕಷ್ಟಗಳ ಬಗ್ಗೆ ಚಕಾರವೆತ್ತು ತ್ತಿಲ್ಲದಿರುವುದು ನೋವಿನ ಸಂಗತಿ. ಕಳೆದ ವರ್ಷ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳು ವಿದ್ಯಾಸಿರಿಗೆ ಅರ್ಜಿ ಸಲ್ಲಿಸಿದ್ದರೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ತಲುಪಿಲ್ಲ. ತಕ್ಷಣದಿಂದ ಈ ಯೋಜನೆಯನ್ನು ಜಾರಿಗೊಳಿಸಿ ಹಿಂದುಳಿದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ಕಾರ ನೆರವು ನೀಡುವಂತೆ ಮನವಿ ಮಾಡಿದರು.
ಗೊಲ್ಲ ಜನಾಂಗದ ಮುಖಂಡರುಗಳಾದ ಸಿ.ವೀರಭದ್ರಪ್ಪ, ಸಿದ್ದೇಶ್‍ಯಾದವ್, ವೆಂಕಟೇಶ್‍ಯಾದವ್, ಜಯಣ್ಣ, ಪಲ್ಗುಣೇಶ್ವರ್ ಸೇರಿದಂತೆ ನೂರಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








