ಹುಳಿಯಾರು
ಹುಳಿಯಾರು ಪಪಂ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಕಾಗಿನೆಲೆ ಮಹಾ ಸಂಸ್ಥಾನದ ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಪ್ರವಾಸ ಕೈಗೊಂಡು ಶ್ರಾವಣ ಭಿಕ್ಷೆ ನಡೆಸಿದರು.
ಹೊಸದುರ್ಗದಿಂದ ನೇರವಾಗಿ ಹುಳಿಯಾರಿನ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ್ದ ಸ್ವಾಮೀಜಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಿ ಭಿಕ್ಷಾಟನೆ ಆರಂಭಿಸಿದರು. ಗ್ರಾಮಸ್ಥರು ಭಕ್ತಿಭಾವದಿಂದ ಸ್ವಾಮೀಜಿಗಳನ್ನು ಸ್ವಾಗತಿಸಿಕೊಂಡು ಸ್ವಾಮೀಜಿ ಹೋಗುವ ದಾರಿಯುದ್ದಕ್ಕೂ ನೀರು ಹಾಕುತ್ತಾ ಮಡಿ ಮಾಡಿ ಭಕ್ತಿ ಪ್ರದರ್ಶಿಸಿದರು.
ಪೂರ್ವ ನಿಗಧಿಯಾದಂತೆ ಗ್ರಾಮದ ಕೆಲವು ಸಮುದಾಯದ ಮನೆಗಳಿಗೆ ತೆರಳಿದ್ದ ಸ್ವಾಮೀಜಿಗೆ ಭಕ್ತರು ಧನ, ಧಾನ್ಯ ಸೇರಿದಂತೆ ಇನ್ನಿತರ ಭಿಕ್ಷೆಯನ್ನು ಗೌರವ ಪೂರ್ವಕವಾಗಿ ಸಮರ್ಪಿಸಿದರು. ಸ್ವಾಮೀಜಿ ನಡೆದಾಡುವ ರಸ್ತೆಯಲ್ಲಿಯೇ ಭಕ್ತರು ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದದ್ದು ಹೆಜ್ಜೆ ಹೆಜ್ಜೆಗೂ ಕಂಡು ಬಂದು ಗಮನ ಸೆಳೆಯುವಂತಿತ್ತು.
ಭಕ್ತರ ಮನೆಗೆ ಭಿಕ್ಷಾಟನೆಗೆ ತೆರಳಿದ್ದ ಸ್ವಾಮೀಜಿಗಳು ಕುರುಬರು ಕಂಬಳಿಯನ್ನು ಎಂದೂ ಮರೆಯಬಾರದು, ಭಂಡಾರ ಹಣೆಗೆ ಹಚ್ಚಿ ಕಂಬಳಿಗೆ ನಮಿಸಿ ಮುನ್ನಡೆಯಬೇಕು. ಗುರುಗಳು ಮನೆಗಳಿಗೆ ಭಿಕ್ಷೆಗೆ ಬಂದಾಗ ಕರಿಯ ಕಂಬಳಿಯ ಗದ್ದುಗೆ ಮಾಡಿ ಮನೆಯಲ್ಲಿರುವ ಅಕ್ಕಿ, ಹಿಟ್ಟು, ಕಾಣಿಕೆಯನ್ನು ಜೋಳಿಗೆಗೆ ಹಾಕಿ, ಭಂಡಾರ ದಾನ ಪಡೆಯುವುದು ಪವಿತ್ರ ಕಾರ್ಯ ಇದನ್ನು ಮಕ್ಕಳಿಗೆ ತಿಳಿಸಬೇಕು. ಹಾಗು ಮಠಕ್ಕೆ ಬಂದೋಗುವ, ಅಲ್ಲಿನ ಧಾರ್ಮಿಕ ಕೈಂಕರ್ಯಗಳಲ್ಲಿ ಭಾಗಿಯಾಗುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ