ದಾವಣಗೆರೆ
ಈಗಾಗಲೇ 25 ಕೋಟಿ ರೂ.ಗಳಲ್ಲಿ ಅಭಿವೃದ್ಧಿಗೊಂಡಿರುವ ಗಾಜಿನ ಮನೆಗೆ ಸ್ಮಾರ್ಟ್‍ಸಿಟಿ ಕಂಪನಿಯಿಂದ ಇನ್ನೂ 5 ಕೋಟಿ ರೂ. ಅನುದಾನ ಪಡೆದು, ಗ್ಲಾಸ್ ಹೌಸ್ ಸುತ್ತ ಇನ್ನಷ್ಟು ಗಿಡಿ ಮರಗಳನ್ನು ಬೆಳೆಸಿ, ಹಸರೀಕರಣಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕ ಎಸ್.ಎ.ರವೀಂದ್ರನಾಥ್ ತಿಳಿಸಿದರು.
ನಗರದ ಕುಂದುವಾಡ ಕೆರೆ ಸಮೀಪದ ಗಾಜಿನಮನೆ ಆವರಣದಲ್ಲಿ ಶುಕ್ರವಾರದಿಂದ ಐದು ದಿನಗಳ ವರೆಗೆ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ನಿರ್ಮಾಣವಾದ ಗಾಜಿನಮನೆ ಅತ್ಯಂತ ಪ್ರಸಿದ್ದಿ ಪಡೆಯುತ್ತಿದೆ. ಇದನ್ನು ಅತ್ಯುತ್ತಮವಾಗಿ ನಿರ್ವಹಿಸಿಕೊಂಡು ಹೋಗಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಾಜಿನ ಮನೆಯ ಅಭಿವೃದ್ಧಿಗೆ ಈವರೆಗೆ 25 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನೂ ಐದು ಕೋಟಿ ರೂಪಾಯಿಗಳನ್ನು ಸ್ಮಾರ್ಟ್‍ಸಿಟಿ ಕಂಪನಿ ನೀಡಲಿದೆ. ಈ ಹಣದಲ್ಲಿ ಗಾಜಿನಮನೆ ಸುತ್ತಮುತ್ತ ಗಿಡ, ಹೂ ಬಳ್ಳಿಗಳನ್ನು ಬೆಳೆಸಿ ಹಸಿರಿನಿಂದ ಕಂಗೊಳಿಸುವಂತೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ನಗರದಲ್ಲಿ ಪ್ರತಿ ವರ್ಷ ತೋಟಗಾರಿಕೆ ಇಲಾಖೆ ವತಿಯಿಂದ ಸ್ವಾತಂತ್ರ್ಯ ದಿನಚರಣೆಯಂದು ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿತ್ತು. ಆದರೆ, ಈ ಬಾರಿ ಅತಿ ಹೆಚ್ಚು ಮಳೆ ಮತ್ತು ಪ್ರವಾಹದ ಹಿನ್ನಲೆಯಲ್ಲಿ ತಡವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಜನರಿಗೆ ಮನರಂಜನೆ ಹಾಗೂ ಮಾಹಿತಿ ನೀಡುವಂತಹ ಕಾರ್ಯಕ್ರಮವಾಗಬೇಕು ಎಂದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೋಮ್ಮನ್ನರ್ ಮಾತನಾಡಿ, ಗಾಜಿನ ಮನೆ ಆವರಣದಲ್ಲಿ ಈಗಾಗಲೇ ಐದು ಇ-ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಈ ಪೈಕಿ ಎರಡು ಕಾರ್ಯನಿರ್ವಹಿಸುತ್ತಿವೆ. ಸ್ಮಾರ್ಟ್‍ಸಿಟಿ ಯೋಜನೆಯಡಿ ಕಾಂಕ್ರಿಟ್ ಕೆಲಸ, ವಿದ್ಯುತ್ ದೀಪಗಳು, ಭದ್ರತೆಗಾಗಿ ಸುತ್ತಲು ತಂತಿ ಬೇಲಿ, ನೀರಿನ ಕಾರಂಜಿ ಮುಂತಾದವುಗಳನ್ನು ವ್ಯವಸ್ಥೆಮಾಡಿ ಪ್ರವಾಸಿಗರಿಗೆ ಅನುಕೂಲ ವಾಗುವಂತೆ ಮಾಡಲಾಗುವುದು. ಶಾಮನೂರಿಗೆ ಬರುವ ನಗರ ಸಾರಿಗೆ ಬಸ್ಸುಗಳು ಗಾಜಿನ ಮನೆಯವರೆಗೆ ಬಂದು ಹೋಗುವಂತೆ ಜಿಲ್ಲಾಧಿಕಾರಿಗಳಿಗೆ ಕೋರಲಾಗಿದೆ. ಗಾಜಿನಮನೆಯ ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ 19 ಲಕ್ಷಕ್ಕೂ ಹೆಚ್ಚಿನ ಹಣವನ್ನು ವೆಚ್ಚಮಾಡಲಾಗಿದೆ ಎಂದು ಹೇಳಿದರು.
ಪ್ರದರ್ಶನವನ್ನು ನೋಡಲು ಆಗಮಿಸುವ ನಾಗರಿಕರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ, ಮಕ್ಕಳ ಮನೋರಂಜನೆಗಾಗಿ ಉದ್ಯಾನವನ, ಡಿಜಿಟಲ್ ಲೈಟಿಂಗ್ ವ್ಯವಸ್ಥೆ ಹಾಗೂ ಪ್ರತಿ ದಿನ ಸಂಜೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಗರಿಕರಿಗೆ ಗಾಜಿನ ಮನೆಗೆ ಬರಲು ಸುಗಮ ರಸ್ತೆ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ಉತ್ತಮವಾದ ಫಲಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಗಾಜಿನಮನೆ ಎಂಬುದು ಕೇವಲ ಐದು ದಿನದ ಪ್ರವಾಸಿ ಸ್ಥಳವಾಗುವ ಬದಲು, ಶಾಶ್ವತ ಪ್ರವಾಸಿ ತಾಣವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಉಮಾ ಎಂ.ಪಿ.ರಮೇಶ್, ಮಾಜಿ ಉಪಾಧ್ಯಕ್ಷರಾದ ಗೀತಾ ಗಂಗಾಧರ್ ನಾಯ್ಕ್, ಜಿ.ಪಂ ಸದಸ್ಯರುಗಳಾದ ಸಾಕಮ್ಮ, ಲೋಕೇಶ್ವರಪ್ಪ, ಸಂಗನ ಗೌಡ್ರು ಹಾಗೂ ನಾಗರಾಜಪ್ಪ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ರೇಷ್ಮಾ ಪರ್ವಿನ್ ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯ, ತೋಟಗಾರಿಕೆ ಅಪರ ನಿರ್ದೇಶಕ ಪರಶಿವಮೂರ್ತಿ, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಬಿ.ಮುದುಗಲ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ