ಬೆಂಗಳೂರು :
ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಂದ್ರಹಳ್ಳಿ ಬಳಿ ನಡೆದಿದೆ.
ಮೃತರನ್ನು ರಮೇಶ್ (30), ಮಂಜುನಾಥ್ (36) ಅಶೋಕ್ ರೆಡ್ಡಿ (26),ಗೌರಿಶ್ (23) ಎಂದು ಗುರುತಿಸಲಾಗಿದ್ದು ಮೃತರೆಲ್ಲರೂ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಬಳಿಯ ನಕ್ಕಲಹಳ್ಳಿ ನಿವಾಸಿಗಳು.
ಕಾರಿನಲ್ಲಿ ಒಟ್ಟು 9 ಮಂದಿ ಇದ್ದರು. ಇವರೆಲ್ಲರೂ ಬೆಂಗಳೂರಿನ ಆವಲಹಳ್ಳಿ ಬಳಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಒಂದೇ ರೂಮಿನಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ಮಧ್ಯರಾತ್ರಿ ಸ್ನೇಹಿತನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ನಂತರ ಶನಿವಾರ, ಭಾನುವಾರ ರಜೆಯಿದ್ದ ಕಾರಣಕ್ಕೆ ಕಾರಿನಲ್ಲಿ ನಂದಿಬೆಟ್ಟಕ್ಕೆ ತೆರಳುತ್ತಿದ್ದರು.
ಆದರೆ ಇಂದು ಮುಂಜಾನೆ ಸುಮಾರು 3.30ಕ್ಕೆ ಹಂದರಹಳ್ಳಿ ಬಳಿ ಕಾರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಹೊಸಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ದೇವನಹಳ್ಳಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ