ತುಮಕೂರು
ಪತ್ರಕರ್ತರು ಪೂರ್ವಾಗ್ರಹ ಪೀಡಿತರಾಗದೆ, ಪ್ರತ್ಯಕ್ಷ್ಯ ಕಂಡರೂ ಪ್ರಮಾಣಿಸಿ ನೋಡುವ ರೀತಿಯ ವರದಿ ಮಾಡಿ ಸಮಾಜಕ್ಕೆ ನೀಡಬೇಕು. ಯಾವತ್ತೂ ಬಡವರು, ಗ್ರಾಮೀಣ ಜನರು, ಧ್ವನಿ ಇಲ್ಲದವರ ಪರವಾಗಿ, ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಪತ್ರಕರ್ತರು ಕೆಲಸ ಮಾಡಬೇಕು ಎಂದು ಸಚಿವ ಜೆ. ಸಿ. ಮಾಧುಸ್ವಾಮಿ ಸಲಹೆ ಮಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಪತ್ರಿಕಾ ಭವನದ ಚಟುವಟಿಕೆಗಳ ಉದ್ಘಾಟನೆ, ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸತ್ಯನಿಷ್ಠ ವರದಿಯಿಂದ ಆ ಪತ್ರಕರ್ತರು ವೃತ್ತಿ ಗೌರವ ಹೊಂದಬೇಕು ಎಂದು ಹೇಳಿದರು.
ಚುನಾವಣಾ ಪೂರ್ವ ಸರ್ವೆ ರೀತಿಯ ವರದಿಗಳನ್ನು ನಿಗ್ರಹ ಮಾಡಬೇಕಾಗುತ್ತದೆ, ಇಂತಹ ವರದಿಗಳು ಜನರನು ಗೊಂದಲಕ್ಕೆ ಸಿಲುಕಿಸುವ ಸಾಧ್ಯತೆಗಳಿವೆ ಎಂದ ಸಚಿವರು, ಒಬ್ಬರನ್ನು ಮುಗಿಸಲು, ಇನ್ನಾರನ್ನೋ ಓಲೈಸಲು ಪತ್ರಿಕೋದ್ಯಮ ಬಳಕೆಯಾಗಬಾರದು, ಅದು ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು.
ಕೆಲವರು ಕುರ್ಚಿ ಬಲದಿಂದ ದೊಡ್ಡವರಾಗುತ್ತಾರೆ, ಕೆಲವರಿಂದ ಆ ಕುರ್ಚಿಗೆ ಹೆಸರು ಬರುತ್ತದೆ ಎಂದ ಅವರು, ತಮಗೆ ಯಾವ ಖಾತೆ ಸಿಗಬಹುದು ಎಂಬ ವಿಚಾರ ಚರ್ಚೆ ಉಲ್ಲೇಖಿಸಿ ಮಾತನಾಡಿದ ಅವರು, ಖಾತೆ ಯಾವುದಾದರೇನು ಕೆಲಸ ಮಾಡುವುದು ಮುಖ್ಯ, ಮನುಷ್ಯ ಸತ್ತ ಮೇಲೂ ಜನ ನೆನಪಿಸಿಕೊಳ್ಳುವ ಕೆಲಸ ಮಾಡಬೇಕು, ಬಯಲು ಪ್ರದೇಶಕ್ಕೆ ನೀರಾವರಿ ಯೋಜನೆ ಜಾರಿಗೆ ತಂದರೆ ಜನ ಸತ್ತ ಮೇಲೂ ಜ್ಞಾಪಿಸಿಕೊಳ್ಳುತ್ತಾರೆ. ಮಂತ್ರಿಗಿರಿಯನ್ನು ಅಧಿಕಾರ ಎಂದು ಸ್ವೀಕರಿಸಬಾರದು, ಕೆಲಸ ಮಾಡಲು ಸಿಕ್ಕ ಅವಕಾಶ ಎಂದು ತಿಳಿಯಬೇಕು ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಗಾಂಧೀಜಿ ಬಗ್ಗೆ ನನಗೆ ಅಪಾರ ಗೌರವವಿದೆ. ಗಾಂಧೀಜಿ ಪತ್ರಕರ್ತರಾಗಿ ಪತ್ರಿಕೆ ಮೂಲಕ ಬದುಕು ರೂಪಿಸಿಕೊಂಡವರು, ಪತ್ರಿಕೆ ಮೂಲಕವೇ ಜನರ ಬದುಕು ರೂಪಿಸುವ ಪ್ರಯತ್ನ ಮಾಡಿದವರು ಎಂದ ಅವರು, ತಾವು ರಾಮಕೃಷ್ಣ ಹೆಗಡೆ ಶಾಲೆಯ ವಿದ್ಯಾರ್ಥಿ, ರಾಜಕೀಯ ಅಧಿಕಾರ ಹಿಡಿದವರು ಮೂರು ಕಡೆಗಳಿಂದ ಮಾಹಿತಿ ಪಡೆಯಬೇಕು ಎಂದು ಹೆಗಡೆ ಹೇಳುತ್ತಿದ್ದರು, ಅಧಿಕಾರಿಗಳು, ಕಾರ್ಯಕರ್ತರು ಹಾಗೂ ಪತ್ರಿಕೆಗಳಿಂದ ಮಾಹಿತಿ ಪಡೆಯಬೇಕು. ಅಧಿಕಾರಿಗಳು, ಕಾರ್ಯಕರ್ತರು ಮುಲಾಜಿನ ಮಾಹಿತಿ ನೀಡುತ್ತಾರೆ, ಪತ್ರಕರ್ತರು ನಮ್ಮ ತಪ್ಪುಗಳನ್ನ ಎತ್ತಿ ತೋರಿಸುತ್ತಾರೆ, ಅದರಿಂದ ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳುತ್ತಿದ್ದರು ಎಂದು ಮಾಧುಸ್ವಾಮಿ ಹೆಗಡೆಯವರನ್ನು ಈ ವೇಳೆ ಸ್ಮರಿಸಿಕೊಂಡರು.
ಸಂಸದ ಜಿ ಎಸ್ ಬಸವರಾಜು ಮಾತನಾಡಿ, ಪತ್ರಿಕೋದ್ಯಮ ಜನಪರ ಧೋರಣೆಯ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು, ಪತ್ರಿಕೋದ್ಯಮ ಕಲುಶಿತಗೊಂಡರೆ ಸಮಾಜಕ್ಕೆ ಮಾರಕವಾಗುತ್ತದೆ. ಪತ್ರಕರ್ತರು ಈ ನಿಟ್ಟಿನಲ್ಲಿ ಜವಾಬ್ದಾರಿಯ ಹೆಜ್ಜೆಗಳನ್ನು ಇಡಬೇಕು ಎಂದು ಹೇಳಿದರು.
ಚುನಾಯಿತ ಪ್ರತಿನಿಧಿಗಳು, ಅಧಿಕಾರ ಶಾಹಿಗಳ ತಪ್ಪುಗಳನ್ನು ಪತ್ರಿಕೆಗಳು ಎತ್ತಿ ತೋರಿಸಲಿ, ಆ ಮೂಲಕ ತಿದ್ದಿಕೊಳ್ಳಲು ನೆರವಾಗಲಿ, ಆದರೆ ವಕ್ರ ದೃಷ್ಠಿಯ, ವೈಯಕ್ತಿಕ ನಿಂದನೆ ಮಾಡುವ ವರದಿಗಳು ಬೇಡ ಎಂದು ಹೇಳಿದರು.
ಈ ವೇಳೆ ಪತ್ರಕರ್ತರ ಸಂಘದಿಂದ ನಾಲ್ವರಿಗೆ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉತ್ತಮ ಪರಿಸರ ಬರಹಕ್ಕಾಗಿ ಸಿ. ಎನ್. ಭಾಸ್ಕರಪ್ಪ ದತ್ತಿ ಪ್ರಶಸ್ತಿಯನ್ನು ನರಸಿಂಹಮೂರ್ತಿ, ಮಾನವೀಯ ವರದಿಗಾಗಿ ಹೆಚ್. ಆರ್. ಗುಂಡೂರಾವ್ ಪ್ರಶಸ್ತಿ ಹೆಚ್ ಪಿ ಸುಪ್ರೇಶ್, ಉತ್ತಮ ಗ್ರಾಮೀಣ ವರದಿಗಾಗಿ ಗಂಗಾವಾಹಿನಿ- ವೈ ಕೆ ರಾಮಯ್ಯ ಪ್ರಶಸ್ತಿ ಪ್ರಜಾಪ್ರಗತಿ ವರದಿಗಾರ ಚೇಳೂರಿನ ಮೋಹನ್‍ಕುಮಾರ್, ಗಡಿನಾಡ ವರದಿಗಾಗಿ ಸೊಗಡು ವೆಂಕಟೇಶ್ ಅವರ ಶ್ರೇಯ ದತ್ತಿ ಪ್ರಶಸ್ತಿಯನ್ನು ಮಾರುತಿಪ್ರಸನ್ನ ಅವರಿಗೆ ಪ್ರದಾನ ಮಾಡಲಾಯಿತು. ಜೊತೆಗೆ ಪತ್ರಿಕೋದ್ಯಮದಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ ಹತ್ತು ಮಂದಿ ಹಿರಿಯ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ ಜಿಲ್ಲೆಯ ಪತ್ರಕರ್ತರ ಮಕ್ಕಳಿಗೆ ಪುರಸ್ಕಾರ ವಿತರಿಸಿ ಅವರ ಸಾಧನೆ ಪ್ರಶಂಸಿಸಲಾಯಿತು.ಶಾಸಕ ಜಿ. ಬಿ. ಜ್ಯೋತಿಗಣೇಶ್, ನಗರ ಪಾಲಿಕೆ ಮೇಯರ್ ಲಲಿತಾ ರವೀಶ್, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಚಿ ನಿ ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಎನ್. ಡಿ. ರಂಗರಾಜು, ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಬೃಂಗೇಶ್, ಜಿಲ್ಲಾ ಪಂಚಾಯ್ತಿ ಸಿಇಓ ಶುಭಾ ಕಲ್ಯಾಣ್, ಅಡಿಷನಲ್ ಎಸ್ಪಿ ಡಾ. ಶೋಭಾರಾಣಿ ಮೊದಲಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ