ದಾವಣಗೆರೆ:
ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬಿಜೆಪಿ ಹೈಕಮಾಂಡ್ ಅತಿಯಾಗಿ ನಿಯಂತ್ರಣ ಮಾಡಬಾರದು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‍ಎಸ್‍ಎಸ್) ಸಹ ಅನಧಿಕೃತವಾಗಿ ಹಸ್ತಕ್ಷೇಪ ಮಾಡಬಾರದು ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ||ಶ್ರೀಅಭಿನವ ಅನ್ನದಾನ ಸ್ವಾಮೀಜಿ ಸಲಹೆ ನೀಡಿದರು.
ಇಲ್ಲಿನ ದೇವರಾಜ್ ಅರಸು ಬಡಾವಣೆಯ ಶ್ರೀಅನ್ನದಾನೇಶ್ವರ ಶಾಖಾ ಮಠದಲ್ಲಿ ಭಾನುವಾರ ನಡೆದ ಲಿಂ.ಶ್ರೀಗುರು ಅನ್ನದಾನ ಮಹಾಶಿವಯೋಗಿಗಳವರ 42ನೇ ಪುಣ್ಯಾರಾಧನೆ, 228ನೇ ಶಿವಾನುಭವ ಸಂಪದ, 501 ಮುತ್ತೈದೆಯರಿಗೆ ಉಡಿ ತುಂಬುವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಂತ್ರಿಮಂಡಲ ರಚನೆ, ಖಾತೆ ಹಂಚಿಕೆ ಹೀಗೆ ಎಲ್ಲಾ ವಿಷಯದಲ್ಲೂ ಹೈಕಮಾಂಡ್ ಯಡಿಯೂರಪ್ಪನವರ ಮೇಲೆ ನಿಯಂತ್ರಣ ಹೇರುತ್ತಿರುವುದು ಸರಿಯಾದ ಕ್ರಮವಲ್ಲ. ಆರ್‍ಎಸ್‍ಎಸ್‍ನವರು ಪ್ರತಿ ವಿಷಯದಲ್ಲೂ ಅನಧಿಕೃತವಾಗಿ ಹಸ್ತಕ್ಷೇಪ ಮಾಡುತ್ತಿರುವುದು ಒಳ್ಳೆಯದಲ್ಲ. ಬಿಜೆಪಿ ಹೈಕಮಾಂಡ್ ಸಹ ಆರ್‍ಎಸ್‍ಎಸ್‍ನವರ ಮಾತು ಎಷ್ಟು ಕೇಳಬೇಕೊ ಅಷ್ಟೇಮಾತ್ರ ಕೇಳಬೇಕು ಎಂದರು.
ಸಿಎಂ ಯಡಿಯೂರಪ್ಪನವರನ್ನು ನಿಯಂತ್ರಣ ಮಾಡದೇ ಸ್ವತಂತ್ರವಾಗಿ ಆಡಳಿತ ನಡೆಸಲು ಬಿಟ್ಟರೆ, ಮೂರೂವರೆ ವರ್ಷಗಳಲ್ಲಿ ರಾಜ್ಯದ ಚಿತ್ರಣ ಬದಲಾಯಿಸಿ, ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ಶ್ರಮಿಸುವುದಲ್ಲದೇ ರಾಜ್ಯ ಅಭಿವೃದ್ಧಿ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.
ವೀರಶೈವ-ಲಿಂಗಾಯತ ಎರಡೂ ಒಂದೇಯಾಗಿದೆ. ಇವರೆಡೂ ಎಂದೂ ಬೇರೆ, ಬೇರೆಯಲ್ಲ. ಆದರೆ, ಇತ್ತೀಚೆಗೆ ಕೆಲ ಮಹಾಪಂಡಿತರು ಲಿಂಗಾಯತವೇ ಬೇರೆ ಧರ್ಮವಾಗಿದೆ.
ಆದ್ದರಿಂದ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿ ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಮಾನ್ಯತೆ ನೀಡಲ್ಲ. ಏಕೆಂದರೆ, ಹಿಂದೂ ಧರ್ಮ ಬಿಟ್ಟು ಬೇರೆ ಧರ್ಮ ಹುಟ್ಟುತ್ತೇ ಎಂದರೆ, ಕೇಂದ್ರ ಸರ್ಕಾರ ಅಷ್ಟು ಆಸ್ತೆ ತೋರುವುದಿಲ್ಲ. ಹಿಂದೂ ಧರ್ಮ ಎಲ್ಲಾ ಎನ್ನುವ ಇಚ್ಛೆ ಕೇಂದ್ರಕ್ಕೆ ಇದೆ ಎಂದರು.
ವೀರಶೈವ-ಲಿಂಗಾಯತರು ಒಳ ಪಂಗಡಗಳನ್ನು ವಿಲೀನಗೊಳಿಸುವ ಮೂಲಕ ಒಂದಾಗುವ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು. ಅಲ್ಲಿಯ ವರೆಗೂ ನಮಗೆ ಸ್ವತಂತ್ರ ಧರ್ಮದ ಸ್ಥಾನಮಾನ ಸಿಗುವುದಿಲ್ಲ. ಅಕಸ್ಮಾತ್ ನಾವು ಒಂದಾಗುವ ಪ್ರಯತ್ನವೇ ಮಾಡದಿದ್ದರೆ, ವೀರಶಯವ-ಲಿಂಗಾಯತ ಧರ್ಮದ ಸಮಗ್ರತೆಗೆ ಧಕ್ಕೆ ಬರಲಿದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.
ಸರ್ವಧರ್ಮ ಸಮನ್ವಯ ಮಠವಾಗಿರುವ ನಮ್ಮ ಅನ್ನದಾನೇಶÀ್ವರ ಮಠಕ್ಕೆ ಲಿಂಗಾಯತರಲ್ಲದೇ, ಲಿಂಗಾಯತೇತರರಾದ ಕುರುಬರು, ನಾಯಕರು, ಮುಸಲ್ಮಾನರು ಸೇರಿದಂತೆ ಸರ್ವ ಧರ್ಮಿಯರು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಮೊಹರಂ ಹಬ್ಬದಲ್ಲಿ ಅಲ್ಲಹ ದೇವರಿಗೆ ಲಿಂಗ ಕಟ್ಟಿದ ಕೀರ್ತಿ ಯಾರಿಗಾದರೂ ಇದ್ದರೆ, ಅದು ಅನ್ನದಾನ ಶಿವಯೋಗಿಗಳಿಗೆ ಮಾತ್ರ. ನಮ್ಮ ಮಠವು ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡುವ ಮೂಲಕ ಸರ್ವ ಜನಾಂಗದ ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನ ದಸೋಹ ನೀಡಿ, ಅವರ ಪ್ರಗತಿಗೆ ಸಹಕರಿಸಿದೆ ಎಂದು ಹೇಳಿದರು.
ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಮಾತನಾಡಿ, ಕುವೆಂಪು ವಿಶ್ವವಿದ್ಯಾನಿಲಯದ ಬಸವ ಅಧ್ಯಯನ ಪೀಠದ ಮೂಲಕ ಬಸವಾದಿ ಪ್ರಮಥರು ಹಾಕಿಕೊಟ್ಟಿರುವ ತತ್ವಾದರ್ಶಗಳನ್ನು ಜಗತ್ತಿಗೆ ಸಾರುವ ಕೆಲಸ ಮಡುತ್ತೇನೆ ಎಂದ ಅವರು, ಬಸವಣ್ಣನವರನ್ನು ಗಾಂಧಿ, ಬುದ್ಧ, ಅಂಬೇಡ್ಕರ್, ಕುವೆಂಪು ಅವರಲ್ಲಿ ಕಾಣಬಹುದಾಗಿದೆ. ಬಸವಣ್ಣರ ತತ್ವಗಳಿಗೆ ಯವುದೇ ಚ್ಯುತಿ ಬಾರದಂತೆ ಶಿರಸಾವಹಿಸಿ ಪಾಲಿಸೋಣ ಎಂದು ಕಿವಿಮಾತು ಹೇಳಿದರು.
ನಾನು ಕುವೆಂಪು ವಿವಿಯ ಕುಲಪತಿಯಾದರೂ, ಅದರ ಸೇವಕನಾಗಿ ಕಾರ್ಯನಿರ್ವಹಿಸಿ ನಮ್ಮ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕಣ್ಣಲ್ಲಿ ಒಂದು ಹನಿ ನೀರು ಬಾರದಂತೆ ನೋಡಿಕೊಂಡು, ವಿವಿಯ ಆವರಣದಲ್ಲಿ ರಾಮರಾಜ್ಯದ ಪರಿಕಲ್ಪನೆಯ ವಾತಾವರಣ ಸೃಷಷಿಸುತ್ತೇನೆ ಎಂದರು.
ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ ಮಾತನಾಡಿ, ವೀರಶೈವ ಲಿಂಗಾಯತ ಧರ್ಮದ ವಿಚಾರ ಎರಡು ವರ್ಷಗಳದ್ದು. ಇವೆರಡು ಬೇರೆ ಅಲ್ಲ, ಒಂದೇ ಆಗಿವೆ. ಇದರ ಪರವಾಗಿ ನಿಂತಿದ್ದ ಶಾಮನೂರು ಶಿವಶಂಕರಪ್ಪ ಬೆನ್ನೆಲುಬು ಆಗಿ ಡಾ.ಅಭಿನವ ಅನ್ನದಾನ ಶ್ರೀಗಳು ನಿಂತಿದ್ದರು. ಶ್ರೀಗಳು ಎಲ್ಲಾ ಸ್ವಾಮೀಜಿಗಳನ್ನು ದಾವಣಗೆರೆಗೆ ಕರೆತಂದು ಸಭೆ ನಡೆಸಿ, ಚರ್ಚಿಸಿ ಒಗ್ಗಟ್ಟು ಮೂಡಿಸಿದ್ದರು ಎಂದರು.
1972ರಲ್ಲಿ ದಾವಣಗೆರೆಯಲ್ಲಿ ಅನ್ನದಾನ ಶಾಖಾ ಮಠ ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ. 50ಲಕ್ಷ ರೂ.ನಲ್ಲಿ ಕಲ್ಯಾಣ ಮಂಟಪ ಕಟ್ಟಬೇಕಿದ್ದು, ಭಕ್ತರು ದೇಣಿಗೆ ನೀಡಬೇಕು ಎಂದು ಹೇಳಿದರು.
ಅನ್ನದಾನೀಶ್ವರ ಕಾಲೇಜಿನ ಉಪನ್ಯಾಸಕ ಎಫ್.ಎನ್.ಹುಡೇದ್ ಉಪನ್ಯಾಸ ನೀಡಿದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಟಿ.ಜೆ.ಜಯರುದ್ರೇಶ್, ಡಾ.ಎ.ಕೆ.ರುದ್ರಮುನಿ, ಶಿವಪುತ್ರಪ್ಪ ಸಂಗಪ್ಪ ಸಿಂಗಾಡಿ, ರಾವುತಪ್ಪ ವೀರಭದ್ರಪ್ಪ ತುಂಬರಗುದ್ದಿ ಅವರುಗಳಿಗೆ ಗೌರವ ಶ್ರೀರಕ್ಷೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ, ಶ್ರೀಮುಪ್ಪಿನ ಬಸವಲಿಂಗ ದೇವರು, ಶ್ರೀ ಅನ್ನದಾನೀಶ್ವರ ಸಾರ್ವಜನಿಕ ಸೇವಾಟ್ರಸ್ಟ್ ಅಧ್ಯಕ್ಷ ಅಥಣಿ ಎಸ್.ವೀರಣ್ಣ ಅಥಣಿ ವೀರಣ್ಣ, ಉಪನ್ಯಾಸಕ ಎಫ್.ಎನ್.ಹುಡೇದ್, ವಿ.ಸಿ.ಪಾಟೀಲ್, ಎನ್.ಅಡಿವೆಪ್ಪ, ಗಿರೀಶ, ಪತ್ರಕರ್ತ ವೀರಣ್ಣ ಎಂ.ಭಾವಿ, ಅಮರಯ್ಯ ಗುರುವಿನಮಠ್, ನಾಗರಾಜ್ ಯರಗಲ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ