ದಾವಣಗೆರೆ ವಿವಿಯಿಂದ ಮತ್ತೊಂದು ಎಡವಟ್ಟು!

ದಾವಣಗೆರೆ:

ವಿಶೇಷ ವರದಿ: ವಿನಾಯಕ ಪೂಜಾರ್

     ಆರಂಭದಿಂದಲೂ ಒಂದಿಲ್ಲೊಂದು ಎಡವಟ್ಟುಗಳನ್ನೇ ಮಾಡಿಕೊಂಡು ಬಂದಿರುವ ದಾವಣಗೆರೆ ವಿವಿಯು, 2018-19ನೇ ಸಾಲಿನಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ 6ನೇ ಸೆಮಿಸ್ಟರ್‍ನ ಮೂಲ ಅಂಕಪಟ್ಟಿ ಇನ್ನೂ ವಿತರಿಸದೇ ಮತ್ತೊಂದು ಎಡವಟ್ಟು ಮಾಡಿದೆ. ಹೀಗಾಗಿ ಈಗಾಗಲೇ ಬಿ.ಇಡಿ ಕೋರ್ಸ್‍ಗೆ ಆಯ್ಕೆಯಾಗಿರುವವರು ತಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿಸಿಕೊಳ್ಳಲು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

      ಹೌದು… ಈಗಾಗಲೇ ಪದವಿ ಪೂರೈಸಿ ಬಿ.ಇಡಿ ಕೋರ್ಸ್‍ಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿ, ಆನ್‍ಲೈನ್‍ನಲ್ಲಿ ಕಾಲೇಜು ಸಹ ತೋರಿಸಿ ಬಿ.ಇಡಿ ಪ್ರವೇಶಕ್ಕೆ ಅರ್ಹರಿರುವ ಅಭ್ಯರ್ಥಿಗಳ ಪಟ್ಟಿ ಸಹ ಪ್ರಕಟಗೊಂಡಿದೆ. ಆದರೆ, ದಾವಣಗೆರೆ ವಿಶ್ವವಿದ್ಯಾಲಯವು 6ನೇ ಸೆಮಿಸ್ಟರ್‍ನಲ್ಲಿ ತೇರ್ಗಡೆಯಾಗಿ ಪದವಿ ಪಡೆದಿರುವ ಪದವೀಧರರಿಗೆ ಇನ್ನೂ ಮೂಲ ಅಂಕಪಟ್ಟಿ ನೀಡಿಲ್ಲ. ಆದ್ದರಿಂದ ಬಿ.ಇಡಿ ಪ್ರವೇಶ ಪ್ರಕ್ರಿಯೆ ಮುಗಿದು ಹೊದರೆ, ಒಂದು ವರ್ಷ ನಮ್ಮ ಭವಿಷ್ಯವೇ ಹಾಳಾಗಲಿದೆ ಎಂಬ ಆತಂಕದಲ್ಲಿ ಅಭ್ಯರ್ಥಿಗಳಿದ್ದಾರೆ.

      ಬಿ.ಇಡಿ ಕೋರ್ಸ್‍ಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆ ಕಾರ್ಯವು ಸೋಮವಾರದಿಂದ ದಾವಣಗೆರೆಯ ಡಯಟ್ ಆವರಣದಲ್ಲಿ ನಡೆಯುತ್ತಿದೆ. ಇಲ್ಲಿ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಕೊನೆ ಸೆಮ್ (6ನೇ ಸೆಮಿಸ್ಟರ್‍ನ) ಮೂಲ ಅಂಕಪಟ್ಟಿ ತರುವಂತೆ ಅಭ್ಯರ್ಥಿಗಳಿಗೆ ಸೂಚಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ದಾವಣಗೆರೆ ವಿವಿಯು ಮೂಲ ಅಂಕಪಟ್ಟಿಯನ್ನೇ ಮುದ್ರಿಸಿ ಪಾಸಾದವರಿಗೆ ನೀಡಿಲ್ಲ. ಹೀಗಾಗಿ ನಾವು ಮೂಲ ಅಂಕಪಟ್ಟಿಯನ್ನು ಎಲ್ಲಿಂದ ತರಬೇಕೆಂಬುದು ಬಿ.ಇಡಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪ್ರಶ್ನೆಯಾಗಿದೆ.

     ನಾವು ಬಿ.ಇಡಿ ಕೋರ್ಸ್‍ಗೆ ಆಯ್ಕೆಯಾಗಿದ್ದು, ನಮ್ಮ ದಾಖಲಾತಿಗಳ ಪರಿಶೀಲನೆಗಾಗಿ ಕಳೆದ ಎರಡು ದಿನಗಳಿಂದ ಡಯಟ್‍ಗೆ ಅಲೆಯುತ್ತಿದ್ದೇವೆ. ಮೊದಲು ಯಾವುದೇ ಸೂಚನೆ ನೀಡದ ಅಧಿಕಾರಿಗಳು ಈಗ ಮೂಲ ಅಂಕ ಪಟ್ಟಿಗಳನ್ನು ತರುವಂತೆ ಹೇಳುತ್ತಿದ್ದಾರೆ. ನಮ್ಮ ಬಳಿ ಈಗ ಐದು ಸೆಮಿಸ್ಟರ್‍ಗಳ ಮೂಲ ಅಂಕ ಪಟ್ಟಿ ಇದೆ. 6ನೇ ಸೆಮಿಸ್ಟರ್‍ನ ಒರಜಿನಲ್ ಅಂಕ ಪಟ್ಟಿ ಇಲ್ಲ. ಹೀಗಾಗಿ ನಾವು ಇಂಟರ್‍ನೆಟ್‍ನಿಂದ ನಕಲು ಅಂಕಪಟ್ಟಿ ಪಡೆದು, ಅದಕ್ಕೆ ನಮ್ಮ ಪದವಿ ಕಾಲೇಜುಗಳ ಪ್ರಾಂಶುಪಾಲರ ಸಹಿ ಮಾಡಿಸಿ, ಸ್ವಯಂ ದೃಢೀಕರಣ ಮಾಡಿ, ಪರಿಶೀಲಿಸುವಂತೆ ಮನವಿ ಮಾಡಿದರೂ ಸಹ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಬಿ.ಇಡಿಗೆ ಆಯ್ಕೆಯಾಗಿರುವ ಸುಷ್ಮಾ ಹಾಗೂ ನಾಜ್‍ನಿನ್ ಪ್ರಜಾಪ್ರಗತಿಯೊಂದಿಗೆ ಅಳಲು ತೋಡಿಕೊಂಡರು.

     ಇನ್ನೂ ಪ್ರಜಾಪ್ರಗತಿಯೊಂದಿಗೆ ಮಾತನಾಡಿದ ವಿದ್ಯಾರ್ಥಿ ಪೋಷಕ ಹೈದರ್ ಅಲಿ, ಈಗ ಪರಿಶೀಲನೆ ನಡೆಸುತ್ತಿರುವ ಡಯಟ್ ಅಧಿಕಾರಿಗಳು, ಈಗ ನೆಟ್‍ನಿಂದ ಪಡೆದಿರುವ ಅಂಕಪಟ್ಟಿಗೆ ಪ್ರಾಂಶುಪಾಲರ ಸಹಿಯ ಜೊತೆಗೆ, ದಾವಣಗೆರೆ ವಿವಿಯ ಕುಲಪತಿಗಳ ಸಹಿ ಪಡೆದು ಬೆಂಗಳೂರಿನಲ್ಲಿ ನಡೆಯುವ ಕೌನ್ಸಿಲಿಂಗ್‍ಗೆ ಹೋಗಿ ಸಮಸ್ಯೆ ಬಗೆರಹರಿಸಿಕೊಳ್ಳಿ ಎನ್ನುತ್ತಿದ್ದಾರೆ. ನಮ್ಮ ಮಕ್ಕಳಿಗೆ ಬಿ.ಇಡಿ ಸೀಟು ಸಿಕ್ಕಿರುವುದಲ್ಲದೇ, ಕಾಲೇಜು ಸಹ ತೋರಿಸಿದ್ದಾರೆ. ನಾವೇಕು ಕೌನ್ಸಿಲಿಂಗ್‍ಗೆ ಹೋಗಬೇಕೆಂದು ಪ್ರಶ್ನಿಸಿದರು.

      ಒಟ್ಟಿನಲ್ಲಿ ದಾವಣಗೆರೆ ವಿವಿ 6ನೇ ಸೆಮಿಸ್ಟರ್‍ನ ಮೂಲ ಅಂಕ ಪಟ್ಟಿ ನೀಡದಿರುವುದರಿಂದ ಬಿ.ಇಡಿ ಕೋರ್ಸ್‍ಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಒಂದು ವರ್ಷ ಮನೆಯಲ್ಲಿಯೇ ಕುಳಿತುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಈ ಬಗ್ಗೆ ದಾವಣಗೆರೆ ವಿವಿ ಕುಲಪತಿ ಎಸ್.ವಿ.ಹಲಸೆ ಅವರ ಪ್ರತಿಕ್ರಿಯೆ ಪಡೆಯಲು ಫೋನ್ ಮೂಲಕ ಸಂಪರ್ಕಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link