ಚಿತ್ರದುರ್ಗ:
ಡಾಕ್ಟರೇಟ್ ಪದವಿಗಳನ್ನು ನೀಡುವ ನಕಲಿ ವಿಶ್ವವಿದ್ಯಾನಿಲಯಗಳನ್ನು ತಡೆಗಟ್ಟಿದರೆ ನಿಜವಾಗಿ ಯಾರು ಪರಿಶ್ರಮ, ಹೋರಾಟ, ನಿಸ್ವಾರ್ಥ ಸೇವೆ ಸಲ್ಲಿಸುತ್ತಾರೋ ಅಂತಹವರಿಗೆ ಪ್ರಶಸ್ತಿ ಪದವಿಗಳು ಹುಡುಕಿಕೊಂಡು ಬರುತ್ತದೆ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರಮಹಾಸ್ವಾಮಿ ಹೇಳಿದರು.
ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾ ಸಮಿತಿಯಿಂದ ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗಾಗಿ ಪತ್ರಕರ್ತರ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ, ಗೌರವ ಡಾಕ್ಟರೇಟ್ ಪಡೆದಿರುವ ಬಿ.ಹೆಚ್.ಪ್ರಕಾಶ್ ಬೀರಾವರ, ಆರ್.ದೇವರಾಜ್ ಪಟೇಲ್ ಮಂಡ್ಯ, ವಕೀಲರ ಸಂಘದ ಅಧ್ಯಕ್ಷ ಎಸ್.ವಿಜಯಕುಮಾರ್ ಇವರ ಅಭಿನಂದನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಪ್ರಶಸ್ತಿಗಳು ಪರಿಶ್ರಮಕ್ಕೆ ಸಿಗಬೇಕೆ ವಿನಃ ಪ್ರಭಾವಕ್ಕೆ ಸಿಗಬಾರದು. ಹಣ ಕೊಟ್ಟರೆ ಪ್ರಶಸ್ತಿಗಳು ಸಿಗುವಂತಾಗಿದೆ. ಪ್ರಶಸ್ತಿ ವ್ಯಾಪಾರೀಕರ ಣವಾದರೆ ಪ್ರಶಸ್ತಿಗಳನ್ನು ಪಡೆದುಕೊಳ್ಳುವವರಿಗೆ ವ್ಯಕ್ತಿತ್ವವಿಲ್ಲದಂತಾಗುತ್ತದೆ. ದಲ್ಲಾಲಿಗಳಿಗೆ ಹಣ ಕೊಟ್ಟರೆ ಪ್ರಶಸ್ತಿ ತರಬಹುದು ಎನ್ನುವ ಭಾವನೆ ಜನರಲ್ಲಿ ಮೂಡಿರುವುದರಿಂದ ಪ್ರಶಸ್ತಿಗಳಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ ಸ್ವಾಮೀಜಿ ಕರ್ನಾಟಕದಲ್ಲಿರುವ ಎಲ್ಲಾ ದೇವಸ್ಥಾನಗಳ ಪೂಜಾರಿ, ಸ್ವಾಮಿಗಳು ಡಾಕ್ಟರೇಟ್‍ಗಳಾಗಿದ್ದಾರೆ.
ವ್ಯಕ್ತಿತ್ವ, ಸೇವೆ, ತ್ಯಾಗ, ಹೋರಾಟದಿಂದ ಮಾತ್ರ ಪ್ರಶಸ್ತಿಗಳನ್ನು ಪಡೆಯಬೇಕು. ನಿಜವಾಗಿಯೂ ಅರ್ಹತೆಯಿದ್ದವರಿಗೆ ಪ್ರಶಸ್ತಿ ಸಿಕ್ಕರೆ ಎಲ್ಲವೂ ಖುಷಿ ಪಡುತ್ತಾರೆ. ದರೋಡೆಕೋರರು, ಕಳ್ಳತನ ಮಾಡುವವರು ಪ್ರಶಸ್ತಿ ಪಡೆಯುವಂತಾದಾಗ ಪ್ರಶಸ್ತಿಗಳನ್ನು ನೀಡುವವರು ಹಾಗೂ ಪಡೆದುಕೊಳ್ಳುವವರು ಅಪಹಾಸ್ಯಕ್ಕೊಳಗಾಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಶಸ್ತಿಗಳನ್ನು ನೀಡುವುದಕ್ಕಾಗಿಯೇ 50 ವಿ.ವಿ.ಗಳು ಹುಟ್ಟಿಕೊಂಡಿವೆ. ನಿಜವಾಗಿಯೂ ಸೇವೆ ಮಾಡುವವರನ್ನು ಹುಡುಕಿ ಪ್ರಶಸ್ತಿ ಕೊಡಿ. ಮೊದಲು ಗೌರವ ಡಾಕ್ಟರೇಟ್ ಪದವಿ ನೀಡುವುದನ್ನು ನಿಲ್ಲಿಸಲಿ. ಅರ್ಹತೆ, ಪರಿಶ್ರಮ ಮೇಲೆ ಪ್ರಶಸ್ತಿಗಳು ಸಿಗಲಿ. ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಶಸ್ತಿಗಳನ್ನು ಕೊಡಿಸುವುದಕ್ಕಾಗಿಯೇ ಮೂರ್ನಾಲ್ಕು ಮಂದಿಯಿದ್ದಾರೆ. ಹೋರಾಟಗಾರರು ಜಾಸ್ತಿಯಿದ್ದರೂ ಸಮಾಜಕ್ಕೆ ಹಾನಿ. ಕೆಲಸದ ಮೂಲಕ ಶ್ರೇಷ್ಟವಾಗಬೇಕು.
ಸಂಸಾರದಲ್ಲಿದ್ದು, ಸದ್ಗಿತ ಕಾಣಬೇಕು. ದೌರ್ಬಲ್ಯ, ದೌರ್ಜನ್ಯ, ದುಶ್ಚಟ, ದುರ್ಗುಣಗಳನ್ನು ಮಾನವ ಮೊದಲು ತಿದ್ದಿಕೊಳ್ಳಬೇಕು. ಪೀಠ, ಅಧಿಕಾರದಿಂದ ದೊಡ್ಡವರಾದರೆ ಗಂಡಾಂತರವಿರುತ್ತೆ. ಪ್ರಭಾವ, ಶಿಫಾರಸ್ಸುಗಳು ಜಾಸ್ತಿಯಾಗಿ ಕಾನೂನು ಹದಗೆಟ್ಟಿದೆ. ನಮ್ಮ ದೇಶದ ಕಾನೂನು ಬಲಿಷ್ಟವಾಗಿದೆ. ಪಾಲನೆ ಮಾಡುವವರು ಇಲ್ಲದಂತಾಗಿದ್ದಾರೆ. ಹನ್ನೆರಡನೇ ಶತಮಾನದ ಬಸವಣ್ಣನವರಂತೆ ನುಡಿದಂತೆ ನಡೆಯಬೇಕು. ಪ್ರಶಸ್ತಿಗಳನ್ನು ನಿಲ್ಲಿಸಿದರೆ ಒಳ್ಳೆಯದು ಎಂದು ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ ವಂದೇ ಮಾತರಂ ಜಾಗೃತಿ ವೇದಿಕೆಯಿಂದ ರಕ್ತದಾನ ಶಿಬಿರ ಏರ್ಪಡಿಸಿರುವುದು ಅತ್ಯಂತ ಪುಣ್ಯದ ಕೆಲಸ. ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಪಡೆದುಕೊಂಡವರು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಿ ಎಂದು ಹಾರೈಸಿದರು.
ಹಿರಿಯೂರು ಆದಿಜಾಂಬವ ಮಹಾಸಂಸ್ಥಾನದ ಷಡಾಕ್ಷರಿಮುನಿ ಸ್ವಾಮೀಜಿ ಮಾತನಾಡುತ್ತ ಮಾನವೀಯ ಕಳಕಳಿಯಿಂದ ನೊಂದವರು, ನೆರೆ ಸಂತ್ರಸ್ಥರಿಗೆ ಸ್ಪಂದಿಸುವುದು ಪ್ರತಿಯೊಬ್ಬ ಮಾನವನ ಧರ್ಮವಾಗಬೇಕು. ಸಮಾಜ ಸೇವೆಯಲ್ಲಿರುವವರು, ಹೋರಾಟಗಾರರು ಎಲ್ಲಿಯೂ ಕಳಂಕ ತಂದುಕೊಳ್ಳಬಾರದು. ಹಾಗಂತ ಪ್ರಶಸ್ತಿ ಪಡೆದವರು, ಹೋರಾಟಗಾರರು, ಸಮಾಜ ಸೇವಕರು ಎಲ್ಲರನ್ನು ವಕ್ರ ದೃಷ್ಟಿಯಿಂದ ನೋಡಬಾರದು. ಸಮಾಜ ಸುಧಾರಕರು, ಸಮಾಜ ಸೇವಕರು, ಹೋರಾಟಗಾರರನ್ನು ಗೌರವಿಸಬೇಕು. ಪ್ರಶಸ್ತಿಗಳು ಮೌಲ್ಯ, ಅಪಮೌಲ್ಯವಾಗುವುದಿಲ್ಲ. ಪ್ರಶಸ್ತಿ ಪದವಿಗಳನ್ನು ಬೆನ್ನತ್ತಿ ಪಡೆಯುವವರು ಅಪಹಾಸ್ಯಕ್ಕೆ ಒಳಗಾಗುತ್ತಾರೆ ಎಂದು ಎಚ್ಚರಿಸಿದರು.
ಪ್ರಶಸ್ತಿಗಳಿಗೂ ಮೌಲ್ಯವಿರುವುದರಿಂದ ಪಡೆಯುವವರ ಜವಾಬ್ದಾರಿ ಹೆಚ್ಚುತ್ತದೆ. ಕೊಂಕು ಮಾತನಾಡುವವರು ಎಲ್ಲಾ ಕಡೆ ಇರುತ್ತಾರೆ. ನಡೆ, ನುಡಿ, ಸರಿಯಾಗಿರಬೇಕು. ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ ವಂದೇಮಾತರಂ ಜಾಗೃತಿ ವೇದಿಕೆಯವರು ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ನಿಜಕ್ಕೂ ಅರ್ಥಪೂರ್ಣವಾದುದು. ಇದಕ್ಕಿಂತ ದೊಡ್ಡ ನೆರವು ಯಾವುದೂ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗೌರವ ಡಾಕ್ಟರೇಟ್ ಹೆಚ್.ಪ್ರಕಾಶ್‍ಬೀರಾವರ ಹೋರಾಟ ಮಾಡಿ ಜೈಲಿಗೆ ಹೋಗಿ ಅನೇಕ ಕೇಸುಗಳನ್ನು ಹಾಕಿಸಿಕೊಂಡಿದ್ದೇನೆ. ಹೋರಾಟಗಾರರಿಗೂ ಗೌರವವಿದೆ ಎನ್ನುವುದಕ್ಕೆ ನಾನೇ ಸಾಕ್ಷಿ. ಸಮಾಜ ಸೇವಕರು, ಹೋರಾಟಗಾರರಿಗೆ ಸ್ಥಳ ಪ್ರಜ್ಞೆ, ಸಮಯ ಪ್ರಜ್ಞೆ, ಸಾಮಾನ್ಯ ಪ್ರಜ್ಞೆ ಇರಬೇಕು ಎಂದು ಹೇಳಿದರು.
ವಕೀಲರ ಸಂಘದ ನೂತನ ಅಧ್ಯಕ್ಷ ಎಸ್.ವಿಜಯಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ರಕ್ತದಾನ ಅತ್ಯಂತ ಪವಿತ್ರವಾದುದು. ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ ನೆರವು ನೀಡಲು ವಕೀಲರ ಸಂಘದಿಂದ ಬೆಳಗಾವಿ ಜಿಲ್ಲೆಗೆ ಹೋಗಿದ್ದೆವು. ಅಲ್ಲಿನ ಕಠೋರ ಪರಿಸ್ಥಿತಿಯನ್ನು ನೋಡಿದರೆ ಕಲ್ಲು ಹೃದಯದವನಿಗೂ ಮನಸ್ಸು ಕರಗುತ್ತದೆ ಎಂದು ಬಣ್ಣಿಸಿದರು.
ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಜಾದು ಶಿಕ್ಷಕ ಡಾ.ಮೋಹನ್‍ರನ್ನು ಸನ್ಮಾನಿಸಲಾಯಿತು.ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣ ಗೌರಣ್ಣ ವೇದಿಕೆಯಲ್ಲಿದ್ದರು. ಎಲ್ಲಾ ಪದಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.