ಸಂತ್ರಸ್ತರಿಗೆ ಮಿಡಿಯುವವರಿಗೆ ಕೊರತೆ ಇಲ್ಲ : ಡಿಸಿ

ದಾವಣಗೆರೆ:

    ನೆರೆ ಸಂತ್ರಸ್ತರ ನೋವಿಗೆ ಮಿಡಿಯುವ ಹೃದಯಗಳಿಗೆ ಕೊರತೆ ಇಲ್ಲ. ಜಲ ಪ್ರಳಯಕ್ಕೆ ತುತ್ತಾಗಿರುವ ನೆರೆ ಪೀಡಿತರಿಗೆ ವಕೀಲರು ಸೇರಿದಂತೆ ಜಿಲ್ಲೆಯ ಜನತೆ ನೀಡಿರುವ ನೆರವನ್ನು ನಿಯಮಾನುಸಾರವಾಗಿ ಸರ್ಕಾರಕ್ಕೆ ತಲುಪಿಸುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

     ನಗರದ ಜಿಲ್ಲಾ ವಕೀಲರ ಸಭಾ ಭವನದಲ್ಲಿ ಗುರುವಾರ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಜಿಲ್ಲಾ ವಕೀಲರ ಸಂಘದಿಂದ 1,01,005 ರೂ. ನೆರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಿಸಿದ ಸಂದರ್ಭದಲ್ಲಿ ನೆರವು ಸ್ವೀಕರಿಸಿ ಅವರು ಮಾತನಾಡಿದರು.

ಅರ್ಥಪೂರ್ಣ ಕಾರ್ಯ:

     ನೈಸರ್ಗಿಕ ವಿಕೋಪ ಎನ್ನುವುದು ಹೇಳಿಕೇಳಿ ಬರುವುದಿಲ್ಲ್ಲ. ಆದರೆ, ಅಕಸ್ಮಾತಾಗಿ ವಿಕೋಪ ಸಂಭವಿಸಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಕೆಲವೆಡೆಯ ಜನರು ನೆರೆ ಹಾವಳಿಗೆ ತುತ್ತಾಗಿದ್ದಾರೆ. ಈ ನೆರೆ ಸಂತ್ರಸ್ತರ ನೋವಿಗೆ ಮಿಡಿಯುವ ಹೃದಯಗಳಿವೆ ಎಂಬುದಕ್ಕೆ ವಕೀಲರ ಸಂಘ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಿಸಿರುವುದೇ ಸಾಕ್ಷಿಯಾಗಿದೆ. ಇದೊಂದು ಅರ್ಥಪೂರ್ಣ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.

ಬರದಲ್ಲೂ ನೆರವು:

     ನಾನು ಇತ್ತೀಚೆಗೆ ಜಗಳೂರಿಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿಯ ಜನತೆ ಬರಗಾಲಕ್ಕೆ ತುತ್ತಾಗಿ, ನೀರಿನ ತತ್ವಾರÀ, ಮೇವಿನ ಕೊರತೆಯನ್ನು ಎದುರಿಸುತ್ತಿದ್ದರೂ 18ರಿಂದ 20 ಲಕ್ಷ ರೂ. ಮೌಲ್ಯದ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿ, ಬೆಳಗಾವಿ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಕಳುಹಿಸಿಕೊಟ್ಟಿದ್ದಾರೆ. ಹೀಗಾಗಿ ಸರ್ಕಾರದ ಪರವಾಗಿ ನೆರೆ ಸಂತ್ರಸ್ತರಿಗೆ ಮಿಡಿದವರಿಗೆ ಅಭಿನಂದಿಸುತ್ತೇನೆ ಎಂದರು.

ಜನರ ಡಿಸಿಯಾಗುವೆ:

     ತಾವು ಡಿಸಿಯಾಗಿ ಜಿಲ್ಲೆಗೆ ಹೊಸದಾಗಿ ಬಂದಿದ್ದೇನೆ. ನನಗೆ ಮಾರ್ಗದರ್ಶನ ಮಾಡುವಷ್ಟು ಹಿರಿಯ ವಕೀಲರು ಇಲ್ಲಿದ್ದೀರಿ. ಇಂದು ನ್ಯಾಯಯುತವಾಗಿ ಜನರ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ. ಜನರ ಡಿಸಿಯಾಗಿ ಕೆಲಸ ಮಾಡಬೇಕೆಂಬುದೇ ತಮ್ಮ ಬಯಕೆಯಾಗಿದ್ದು, ಇದಕ್ಕೆ ನೀವು ನನಗೆ ಮಾರ್ಗದರ್ಶನ ಮತ್ತು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

    ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಂಬಾದಾಸ್ ಜಿ. ಕುಲ್ಕರ್ಣಿ ಮಾತನಾಡಿ, ‘ಪರೋಪಕಾರಂ ಇದಂ ಶರೀರಂ’ ಎಂಬ ಮಾತನ್ನು ದಾವಣಗೆರೆಯ ವಕೀಲರು ನೆರೆ ಸಂತ್ರಸ್ತರಿಗೆ ನೆರವು ನೀಡುವ ಮೂಲಕ ಸಾಕಾರಗೊಳಿಸಿದ್ದಾರೆ. ಮನುಷ್ಯ ತನ್ನನ್ನು ತಾನು ಅಭಿವೃದ್ಧಿ ಗೊಳಿಸುವುದಕ್ಕಿಂತ ಪರೋಪಕಾರ ಮಾಡುವುದರಿಂದ ಸಾರ್ಥಕ ಜೀವನ ಕಳೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ಗೋಪಾಲ್ ನಾಯ್ಕ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಬಿ.ಎಸ್.ಲಿಂಗರಾಜ್ ಸ್ವಾಗತಿಸಿದರು, ಸಹ ಕಾರ್ಯದರ್ಶಿ ಎಸ್.ಬಸವರಾಜ್ ವಂದಿಸಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link