ಚಿತ್ರದುರ್ಗ :
ನಗರದ ಹೊರವಲಯದಲ್ಲಿರುವ ಆಡುಮಲ್ಲೇಶ್ವರ ಕಿರು ಮೃಗಾಲಯವನ್ನು ಉತ್ತಮ ದರ್ಜೆಗೇರಿಸಿ, ಬರದ ನಾಡಿನಲ್ಲಿಯೂ ಪ್ರವಾಸಿಗರ ನೆಚ್ಚಿನ ತಾಣವನ್ನಾಗಿ ಅಭಿವೃದ್ಧಿ ಪಡಿಸಲು 3 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ತಿಳಿಸಿದರು.
ಅವರು ಶನಿವಾರದಂದು ನಗರದ ಹೊರವಲಯದಲ್ಲಿರುವ ಆಡು ಮಲ್ಲೇಶ್ವರ ಕಿರು ಮೃಗಾಲಯದ ನೂತನ ಆವರಣಗಳ ಉದ್ಘಾಟನೆ ಹಾಗೂ ಲೋಕಾರ್ಪಣೆಗೊಳಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಆಡುಮಲ್ಲೇಶ್ವರ ಕಿರು ಮೃಗಾಲಯದ ಹೊಸ ಆವರಣಗಳ ಕಾಮಗಾರಿ ಶೇ 80 ರಷ್ಟು ಅಭಿವೃದ್ದಿ ಮಾಡಲಾಗಿದೆ. ಮೈಸೂರು ಮೃಗಾಲಯದ ಮಾದರಿಯಲ್ಲಿ ಇಲ್ಲಿಯೂ ಸಹ ಅಭಿವೃದ್ದಿಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಪ್ರಾಣಿ-ಪಕ್ಷಿಗಳನ್ನು ಸಂರಕ್ಷಿಸಲಾಗುವುದು. ಬರದ ಜಿಲ್ಲೆಯಾಗಿರುವುದರಿಂದ ಇಲ್ಲಿನ ಜನರಿಗೆ ಜಿಲ್ಲೆಯಲ್ಲಿಯೇ ಆಕರ್ಷಕ ತಾಣಗಳು, ಪ್ರಕೃತಿ ಸವಿಯುವ ಪ್ರದೇಶಗಳನ್ನು ಇನ್ನಷ್ಟು ಆಕರ್ಷಣೀಯವಾಗುವಂತೆ ಮಾಡಲಾಗುವುದು ಎಂದರು
ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ನಗರದಿಂದ ಬರಲು, ಸಾರಿಗೆ ವ್ಯವಸ್ಥೆ ಹಾಗೂ ಪಾದಚಾರಿ ಮಾರ್ಗ, ದ್ವಿಚಕ್ರ ವಾಹನಗಳಿಗೆ ಅನುಕೂಲವಾಗುವಂತೆ ಸೂಕ್ತ ರಸ್ತೆ ಮಾಡಲಾಗುವುದು. ಆಡುಮಲ್ಲೇಶ್ವರ ಕಿರು ಮೃಗಾಲಯವನ್ನು ಇನ್ನಷ್ಟು ಸುಂದರ ತಾಣವಾಗಿಸಲು, ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿಗಾಗಿ ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿ, ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಡಿ ಅನುದಾನ ಒದಗಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕ ತಿಪ್ಪಾರೆಡ್ಡಿ ಹೇಳಿದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ ಮಾತನಾಡಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ಮೃಗಾಲಯದಲ್ಲಿ ಸ್ಥಳೀಯ ಪ್ರಾಣಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಚಿರತೆ, ಜಿಂಕೆ, ಕರಡಿ, ಕತ್ತೆಕಿರುಬ, ಹುಲಿಗಳು ಸೇರಿದಂತೆ ಕಾಡು ಪ್ರಾಣಿ, ಪಕ್ಷಿಗಳನ್ನು ಮೃಗಾಲಯದಲ್ಲಿ ಸಂರಕ್ಷಿಸಲಾಗುವುದು. ಈ ಕಿರು ಮೃಗಾಲಯದಲ್ಲಿ ಸದ್ಯ 5 ಆವರಣಗಳನ್ನು ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ಆವರಣಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದರು
ಇಲ್ಲಿನ ಕೋಟೆ ಸಾಂಸ್ಕøತಿಕ ಪರಂಪರೆಯ ತಾಣವಾಗಿದ್ದು, ಇದರ ಜೊತೆ ಪ್ರವಾಸಿಗರನ್ನು ಆಕರ್ಷಿಸುವಂತೆ ಹಾಗೂ ಪ್ರಾಣಿ, ಪಕ್ಷಿಗಳ ಬಗ್ಗೆ ಅರಿವು ಮೂಡಿಸಲು ಶೈಕ್ಷಣಿಕ ವಾತಾವರಣವನ್ನು ಕಿರು ಮೃಗಾಲಯದಲ್ಲಿ ಕಲ್ಪಿಸಲಾಗುವುದು. ಹೆಚ್ಚಿನ ಅನುದಾನ ಸಂಗ್ರಹವಾಗುವ ಮೃಗಾಲಯದಿಂದ ಅನುದಾನ ಹಂಚಿಕೆಗೆ ಅವಕಾಶ ಕಲ್ಪಿಸಿದ್ದು, ಇದರಡಿ ಬನ್ನೇರುಘಟ್ಟ ವನ್ಯಧಾಮದ ಅನುದಾನದಲ್ಲಿ ಇಲ್ಲಿನ ಕಿರು ಮೃಗಾಲಯಕ್ಕೆ 3 ಕೋಟಿ ರೂ. ಅನುದಾನ ಒದಗಿಸಿದ್ದು, ಇದರಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಶೌಚಾಲಯ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹೊಸ ಅತಿಥಿಗಳ ಆಗಮನ :
ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ ಮಂಜುನಾಥ ಮಾತನಾಡಿ, ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ 05- ನೀಲ್ಗಾಯ್ ಹಾಗೂ 15-ಚುಕ್ಕೆ ಜಿಂಕೆಗಳನ್ನು ತರಿಸಲಾಗಿದ್ದು, ಹೀಗಾಗಿ ಕಿರು ಮೃಗಾಲಯಕ್ಕೆ 20 ನೂತನ ಪ್ರಾಣಿಗಳ ಸೇರ್ಪಡೆಯಾದಂತಾಗಿದೆ. ಶೀಘ್ರದಲ್ಲಿಯೇ ಹುಲಿಗಳೂ ಮೃಗಾಲಯಕ್ಕೆ ಸೇರ್ಪಡೆಯಾಗಲಿವೆ ಎಂದು ಹೇಳಿದರು
ಸದ್ಯ 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಿದ್ದು, ಇನ್ನೂ 10 ಕೋಟಿ ರೂ. ಕಾಮಗಾರಿಗೆ ಅನುಮೋದನೆ ದೊರೆತಿದೆ. ಅನುದಾನ ಬಿಡುಗಡೆ ಬಳಿಕ ಕಾಮಗಾರಿ ನಡೆಯಲಿದೆ. ಮೃಗಾಲಯದ ಸುತ್ತಲೂ ಜೋಗಿಮಟ್ಟಿ ಹಾಗೂ ಪ್ರಕೃತಿದತ್ತವಾಗಿ ಬೆಟ್ಟ ಗುಡ್ಡ ಆವರಿಸಿದ್ದು, ಮೃಗಾಲಯಕ್ಕೆ ನಿತ್ಯ ಚಿರತೆ, ಕರಡಿಗಳು ಬರುತ್ತವೆ. ಹೀಗಾಗಿ ಮೃಗಾಲಯದಲ್ಲಿನ ಜಿಂಕೆ ಹಾಗೂ ಇತರೆ ಪ್ರಾಣಿಗಳನ್ನು ರಕ್ಷಿಸಲು ನೈಟ್ ಕ್ರಾಲ್ ಆವರಣವನ್ನು ರಚಿಸಿದ್ದು, ರಾತ್ರಿ ವೇಳೆ ಇದರೊಳಗೆ ಜಿಂಕೆಗಳನ್ನು ಬಿಡಲಾಗುತ್ತದೆ.
ಆವರಣಗಳಿಗೆ ಚೈನ್‍ಲಿಂಕನ್ನು ಮುಚ್ಚಿಲ್ಲ, ಪ್ರವಾಸಿಗರು ಪ್ರಾಣಿಗಳೊಂದಿಗೆ ಪೋಟೋಗ್ರಫಿ ಹಾಗೂ ಅವುಗಳೊಂದಿಗೆ ಭಾವನಾತ್ಮಕವಾಗಿ ಸ್ಪರ್ಷಿಸಲು ಅನುಕೂಲವಾಗುವಂತೆ ತೆರೆದಿರುವಂತೆ ಮಾಡಲಾಗಿದೆ. ಇನ್ನೆರಡು ವರ್ಷಗಳಲ್ಲಿ ಆಡುಮಲ್ಲೇಶ್ವರ ಕಿರು ಮೃಗಾಲಯವು ಪೂರ್ಣ ಪ್ರಮಾಣದ ಮೃಗಾಲಯವಾಗಿ ಸಿದ್ಧವಾಗಲಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಸ್. ರಾಘವೇಂದ್ರ ರಾವ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








