ಬೆಂಗಳೂರು
ಯಡಿಯೂರಪ್ಪ ಅವರು ಅದೃಷ್ಟವಂತ.ಯಾಕೆಂದರೆ ಅವರು ಸಿಎಂ ಆಗ್ತಾರೆ ಅಂದ್ರೆ ಬರ ಹೋಗಿ ನೆರೆ ಬರುತ್ತದೆ ಎಂದಿರುವ ವಸತಿ ಸಚಿವ ವಿ.ಸೋಮಣ್ಣ,ಹೀಗೆ ನೆರೆ ಬಂದರೂ ಅದಕ್ಕಾಗಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ .ವಿಕಾಸಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಡಿಯೂರಪ್ಪ ಸಿಎಂ ಆದ ಮೇಲೆ ಬರ ಹೋಗಿ ನೆರೆ ಬಂದಿದೆ.ಒಂದೇ ವಾರದಲ್ಲಿ ರಾಜ್ಯದ ಎಲ್ಲ ಡ್ಯಾಂಗಳು ಭರ್ತಿಯಾಗಿವೆ ಎಂದು ಹೇಳಿದರು.
ಅತಿವೃಷ್ಟಿಯಿಂದ ಹಾನಿಯಾಗಿರುವುದು ನಿಜ.ಹೀಗಾಗಿ ಅದನ್ನು ಎದುರಿಸಲು ಕ್ರಮ ಕೈಗೊಂಡಿದ್ದೇವೆ ಎಂದ ಅವರು,ವಸತಿ ಇಲಾಖೆಯಲ್ಲಿ ಹಿಂದಿನ ಸರ್ಕಾರ ಜಾರಿಗೊಳಿಸಿದ ಯೋಜನೆಗಳಿಗೆ ತಡೆ ಒಡ್ಡುವುದಿಲ್ಲ ಎಂದರು.ಹಿಂದಿನ ಸರ್ಕಾರಗಳ ಎಲ್ಲ ಯೋಜನೆಗಳನ್ನು ಮುಂದುವರಿಸುವುದಾಗಿ ನುಡಿದ ಅವರು,ಸರ್ಕಾರ ಯಾವುದೇ ಬರಲಿ,ಅಂತಿಮವಾಗಿ ಜನರಿಗೆ ಒಳ್ಳೆಯದಾಗಬೇಕು ಎಂಬುದಷ್ಟೇ ತಮ್ಮ ಉದ್ದೇಶ ಎಂದು ಹೇಳಿದರು.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುತ್ತದೆ ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ಧರಾಮಯ್ಯ ಅವರು ಅನುಭವಿ ರಾಜಕಾರಣಿ.ಆದರೆ ಯಾವ ಹಿನ್ನೆಲೆಯಲ್ಲಿ ಇದನ್ನು ಹೇಳಿದ್ದಾರೋ?ಗೊತ್ತಿಲ್ಲ ಎಂದರು.ಅವರು ತಮ್ಮ ಅನುಭವವನ್ನು ಆಧರಿಸಿ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದಿದ್ದಾರೆ.ಆದರೆ ನನ್ನ ಅನುಭವದ ಪ್ರಕಾರ ಹೇಳುವುದಾದರೆ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾಗುವುದಿಲ್ಲ ಎಂದರು.
ಹೀಗಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಾಕಿ ಉಳಿದ ಅವಧಿಯನ್ನು ಪೂರೈಸುತ್ತದೆ.ಇದರಲ್ಲಿ ಯಾವುದೇ ಅನುಮಾನ ಬೇಡ ಎಂದ ಅವರು,ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿಯೂ ಬಿಜೆಪಿಯೇ ಗೆದ್ದು ಅಧಿಕಾರ ಹಿಡಿಯಲಿದೆ ಎಂದರು.ಇವತ್ತು ನಾಡಿನ ಜನ ಮಧ್ಯಂತರ ಚುನಾವಣೆಯನ್ನು ಬಯಸುತ್ತಿಲ್ಲ.ತಮ್ಮ ಸಮಸ್ಯೆಗಳಿಗೆ ಪರಿಹಾರ ಬಯಸುತ್ತಿದ್ದಾರೆ ಎಂದ ಅವರು,ಇದನ್ನು ಗಮನಿಸಿದರೆ ಮಧ್ಯಂತರ ಚುನಾವಣೆಯ ಅಗತ್ಯ ಜನರಿಗೂ ಇಲ್ಲ.ರಾಜಕಾರಣಿಗಳಿಗೂ ಇಲ್ಲ ಎಂದರು.
ಕಾಂಗ್ರೆಸ್ ನಾಯಕ,ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ನಡೆಯುತ್ತಿರುವ ಐಟಿ,ಇಡಿ ಧಾಳಿ,ವಿಚಾರಣೆಗಳು ರಾಜಕೀಯ ಪ್ರೇರಿತವಲ್ಲ ಎಂದ ಅವರು ಸನ್ನಿವೇಶ ಸನ್ನಿವೇಶಕ್ಕೆ ಅನುಗುಣವಾಗಿ ಇಂತವು ನಡೆಯುತ್ತವೆ ಎಂದರು.ಕಾಂಗ್ರೆಸ್ ಪಕ್ಷದವರು ಇದನ್ನು ಅರ್ಥ ಮಾಡಿಕೊಳ್ಳಬೇಕು.ಐಟಿ,ಇಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡಿಲ್ಲ ಎಂದರಲ್ಲದೆ ಕೇಂದ್ರದವರಿಗೆ ಅಧಿಕಾರ ಮಾಡುವುದು ಗೊತ್ತು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
