ದಾವಣಗೆರೆ:
ವಿಚಾರಣೆಯ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು ಜಾರಿ ನಿರ್ದೇಶನಾಲಯ(ಇ.ಡಿ)ದ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ನೇತೃತ್ವದ ಕೆಂದ್ರ ಸರ್ಕಾರದ ದ್ವೇಷದ ರಾಜಕಾರಣ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಘೋಷಣೆ ಕೂಗಿ, ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ರಚಿಸಿ, ರಸ್ತೆ ತಡೆ ನಡೆಸಿ, ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಗೆ ಡಿ.ಕೆ.ಶಿವಕುಮಾರ್ ಅವರು ಎಲ್ಲಾ ರೀತಿಯಲ್ಲೂ ಸಹಕರಿಸುತ್ತಿದ್ದರೂ, ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡುತ್ತಿದ್ದರೂ ಸಹ ಇ.ಡಿ. ಅಧಿಕಾರಿಗಳು ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುಗಳು ದ್ವೇಷದ ರಾಜಕಾರಣ ಮಾಡುವುದಿಲ್ಲ ಎನ್ನುತ್ತಿದ್ದರು. ಆದರೆ, ಇತ್ತೀಚೆಗೆ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರನ್ನು ಬಂಧಿಸಲಾಗಿತ್ತು. ಇದೀಗ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದಾರೆ. ಹೀಗೆ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಮೋದಿ ಅವರು ದೇಶದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸಿದರು.
ಐಟಿ, ಸಿಬಿಐ, ಇಡಿಯಂತಹ ಸ್ವಾಯತ್ತ ಸಂಸ್ಥೆಗಳನ್ನೇ ಬಿಜೆಪಿ ತನ್ನ ತಾಳಕ್ಕೆ ತಕ್ಕಂತೆ ಕುಣಿಸಿಕೊಳ್ಳುತ್ತಿದೆ. ಹಿಂದೆ ಗುಜರಾತ್‍ನ ಕಾಂಗ್ರೆಸ್ ಶಾಸಕರನ್ನು ರಾಜ್ಯಕ್ಕೆ ಕರೆ ತಂದು, ಚುನಾವಣೆ ವೇಳೆಗೆ ಸುರಕ್ಷಿತವಾಗಿ ಗುಜರಾತ್ ತಲುಪಿಸಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‍ರಿಂದಾಗಿ ಬಿಜೆಪಿ ಕೇಂದ್ರ ನಾಯಕರಿಗೆ ಅವಮಾನವಾಗಿತ್ತು. ಈ ಅವಮಾನದ ಸೇಡನ್ನು ಹೀಗೇ ತೀರಿಸಿಕೊಳ್ಳುತ್ತಿದ್ದಾರೆ.
ಕಾನೂನಾತ್ಮಕ ಹೋರಾಟದಲ್ಲಿ ಡಿ.ಕೆ.ಶಿವಕುಮಾರ್ ಗೆದ್ದು ಬರಲಿದ್ದಾರೆ. ನರೇಂದ್ರ ಮೋದಿ ಈ ವರೆಗೆ ಜನರಿಗೆ ನೀಡಿದ್ದ ಯಾವುದೇ ಆಶ್ವಾಸನೆ ಸಾಕಾರಗೊಳಿಸಿಲ್ಲ. ಹಿಂದೆ ಇದೇ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಚೆಕ್ ಮೂಲಕ ಲಂಚ ಪಡೆದಿದ್ದರು. ಆಪರೇಷನ್ ಕಮಲ ಮಾಡಿದ್ದರೂ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಯಾವೊಬ್ಬ ನಾಯಕರ ಮನೆ, ಕಚೇರಿ ಮೇಲೂ ದಾಳಿ ನಡೆಯುವುದಿಲ್ಲ. ಆದರೆ, ಕಾಂಗ್ರೆಸ್, ಜೆಡಿಎಸ್ ಪಕ್ಷದ ನಾಯಕರು, ಬಂಧು-ಬಳಗ, ಆತ್ಮೀಯರ ಮನೆ ಮೇಲಷ್ಟೇ ದಾಳಿ ನಡೆಯುತ್ತಿವೆ. ಈ ಬಗ್ಗೆ ಮೋದಿ, ಅಮಿತ್ ಶಾ ಉತ್ತರಿಸಲಿ ಎಂದು ಒತ್ತಾಯಿಸಿದರು.
ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿದಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಶೇ.8 ರಷ್ಟಿದ್ದ ಜಿಡಿಪಿ ಈಗ ಶೇ 5ಕ್ಕೆ ಕುಸಿದಿದೆ. ಬಡವರ ಪರ ಕೆಲಸ ಮಾಡದ ಬಿಜೆಪಿ ಕೇಂದ್ರ ಸರ್ಕಾರದ ನೀತಿಯಿಂದಾಗಿ ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚುತ್ತಿದ್ದು, ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಒಳ್ಳೆಯ ಆಡಳಿತ ನೀಡಿ, ಇವೆಲ್ಲವನ್ನೂ ಸುಧಾರಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿದ್ದಾರೆಂದು ಆರೋಪಿಸಿದರು.
ಬಿಜೆಪಿಯಲ್ಲಿ ಯಾರೂ ಹಗರಣ ಮಾಡಿಲ್ಲವೇ? ಅಮಿತ್‍ಶಾ ಪುತ್ರ ಜಯ್ ಶಾ ಆಸ್ತಿ ಹೆಚ್ಚಾಗಿರುವ ಬಗ್ಗೆ ಏಕೆ ತನಿಖೆ ನಡೆಸುತ್ತಿಲ್ಲ. ನೂರಾರು ಕೋಟಿ ಆಮಿಷವೊಡ್ಡಿ ಆಪರೇಷನ್ ಕಮಲ ನಡೆಸಿರುವ ಬಗ್ಗೆ ಏಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.ನೂರಾರು ಕೋಟಿ ವೆಚ್ಚದಲ್ಲಿ ವಿದೇಶ ಸುತ್ತುವ ಪ್ರಧಾನಿ ರಾಜ್ಯದ ನೆರೆ ಸಂತ್ರಸ್ಥರ ಸಂಕಷ್ಟ ವಿಚಾರಿಸಿಲ್ಲ. ದೇಶದ ಜನರ ಬಗ್ಗೆ ಇವರಿಗೆ ಕಾಳಜಕಾಳಜಿಯೇ ಇಲ್ಲ. ಮೋದಿಗೆ ನಿಜಕ್ಕೂ ದೇಶದ ಜನರ ಬಗ್ಗೆ ಕಾಳಜಿ ಇದ್ದರೆ, ನೆರೆ ಸಂತ್ರಸ್ಥರ ಪರಿಹಾರ ಕಲ್ಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ತಮಗೆ ಬೇಕಾದವರಿಗೆ ಸಚಿವ ಸ್ಥಾನ ಕೊಡಿಸುವ ತಾಕತ್ತು ಇಲ್ಲದ ಸಿಎಂ ಯಡಿಯೂರಪ್ಪ ಅವರು ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸ್ವಯತ್ತ ಸಂಸ್ಥೆಗಳನ್ನು ದುರುಪಯೋಗ ಪಡೆಸಿಕೊಂಡು ದ್ವೇಷದ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ ಮಾತನಾಡಿ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದ್ದು, ಪ್ರಜಾಪ್ರಭುತ್ವದ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಹಿಂದೆ ಬ್ರಿಟಿಷರ ವಿರುದ್ಧ ಹೋರಾಡಿದ್ದ ಕಾಂಗ್ರೆಸ್ ಪಕ್ಷ ಇದೀಗ ಬಿಜೆಪಿ ವಿರುದ್ಧ ಹೋರಾಟ ಮಾಡಬೇಕಾದ ಸ್ಥಿತಿ ಬಂದಿರುವುದು ದುರಂತ. ಐಟಿ, ಇಡಿ, ಸಿಬಿಐನಂತಹ ಸಂವಿಧಾನಿಕ ಸಂಸ್ಥೆಗಳನ್ನೇ ಮೋದಿ ಸರ್ಕಾರ ತನ್ನ ಕೈಗೊಂಬೆ ಮಾಡಿಕೊಂಡಿದ್ದು ಈ ದೇಶದ ದೌರ್ಭಾಗ್ಯ ಎಂದರು.
ಕಾಂಗ್ರೆಸ್ಸಿನ ನಾಯಕ ಡಿ.ಕೆ.ಶಿವಕುಮಾರ ಆರೋಗ್ಯ ಸರಿ ಇಲ್ಲದಿದ್ದರೂ ಬಲವಂತವಾಗಿ ವೈದ್ಯಕೀಯ ತಪಾಸಣೆ ಮಾಡಿ, ವೈದ್ಯರ ವರದಿಯನ್ನೇ ತಿರುಚುವಂತೆ ಒತ್ತಡ ಹೇರುತ್ತಿದ್ದಾರೆ. ಇಡಿ ಹೀಗೆ ಮಾಡುವಲ್ಲಿ ಮೋದಿ-ಶಾ ಒತ್ತಡವೇ ಕಾರಣವಾಗಿದೆ. ಡಿ.ಕೆ.ಶಿವಕುಮಾರ ಆರೋಗ್ಯದಲ್ಲಿ ಏರುಪೇರಾದರೆ ಅದಕ್ಕೆ ಅಮಿತ್ ಶಾ, ನರೇಂದ್ರ ಮೋದಿ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಜಿಪಂ ಸದಸ್ಯ ಕೆ.ಎಸ್.ಬಸವಂತಪ್ಪ, ಮುಖಂಡರಾದ ಎಂ.ಹಾಲೇಶ, ಕಬಡ್ಡಿ ಮಲ್ಲು, ಜಿ.ಮಲ್ಲಿಕಾರ್ಜುನ, ಸೋಮಲಾಪುರ ಹನುಮಂತಪ್ಪ, ಬಿ.ವೀರಣ್ಣ, ಎಂ.ಹಾಲೇಶ, ಚಂದ್ರಪ್ಪ, ಎ.ನಾಗರಾಜ, ಶ್ರೀಕಾಂತ ಬಗರೆ, ಹರೀಶ ಕೆಂಗಲಹಳ್ಳಿ, ಎಲ್.ಎಚ್.ಸಾಗರ್, ದಾಕ್ಷಾಯಣಮ್ಮ, ಕೇರಂ ಗಣೇಶ, ಅಯೂಬ್ ಪೈಲ್ವಾನ್, ಸರ್ವಮಂಗಳ, ಕೋಳಿ ಇಬ್ರಾಹಿಂ, ಚಂದ್ರಪ್ಪ, ಮುಮ್ತಾಜ್ ಬೇಗಂ, ಗಾಂ„ ನಗರ ರಮೇಶ, ಡೋಲಿ ಚಂದ್ರು, ಮಲ್ಲಿಕಾರ್ಜುನ ಇಂಗಳೇಶ್ವರ, ಜಯಣ್ಣ, ಕೆ.ಜಿ.ಲಿಂಗರಾಜು, ಡಿ.ಶಿವಕುಮಾರ ಇತರರು ಪ್ರತಿಭಟನೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ