ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲ.!

ಬೆಂಗಳೂರು

      ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಆರೋಪಿಸಿದರು.

      ಹುಬ್ಬಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಸಂತ್ರಸ್ಥರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯಸರ್ಕಾರಗಳು ನಿರ್ಲಕ್ಷ್ಯ ತೋರಿವೆ ಎಂದು ಟೀಕಿಸಿದರು. ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದ್ದ ಗಂಜಿ ಕೇಂದ್ರಗಳನ್ನು ಈಗಾಗಲೇ ಮುಚ್ಚಲಾಗಿದೆ. ಬೆಳೆ ಹಾಗೂ ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಯಾವುದೇ ಪರಿಹಾರ ತಲುಪಿಲ್ಲ. ಸಂತ್ರಸ್ಥರ ನೋವು ಕೇಳುವವರೇ ಇಲ್ಲದಂತಾಗಿದೆ ಎಂದರು.

     ಸಂತ್ರಸ್ಥರಿಗೆ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಡಬೇಕೆಂದು ಸರ್ಕಾರವನ್ನು ಒತ್ತಾಯ ಮಾಡಿದ್ದೆ. ಆದರೆ, ಇದುವರೆಗೂ ಈ ಕೆಲಸ ಸಮರ್ಪಕವಾಗಿ ನಡೆದಿಲ್ಲ ಎಂದರು. ಬಿಜೆಪಿ ಸರ್ಕಾರಕ್ಕೆ ಸಂತ್ರಸ್ಥರ ಕಷ್ಟಕಾರ್ಪಣ್ಯಗಳನ್ನು ನೋಡಲು ಮತ್ತು ಆಲಿಸಲು ಕಣ್ಣು ಮತ್ತು ಕಿವಿ ಇಲ್ಲದಂತಾಗಿದೆ ಎಂದು ಟೀಕಿಸಿದ ಅವರು, ಮಹಾರಾಷ್ಟ್ರದ ಕೊಯಿನಾ ಜಲಾಶಯದಿಂದ ನೀರು ಹರಿಸುತ್ತಿರುವ ವಿಚಾರದಲ್ಲಿ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ ಎಂದರು.

    ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಮತ್ತೊಮ್ಮ ಪ್ರವಾಹಭೀತಿ ಎದುರಾಗಿದ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೂಡಲೇ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ರಾಜಕೀಯ ಪ್ರೇರಿತ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಮತ್ತೊಮ್ಮೆ ಅವರು ಆರೋಪಿಸಿದರು. ಡಿಕೆಶಿ ಬಂಧನದ ಪ್ರತಿಯೊಂದು ಪ್ರಕ್ರಿಯೆ ರಾಜಕೀಯದಿಂದ ಕೂಡಿದೆ. ಇದರ ರೂವಾರಿಗಳು ಬಿಜೆಪಿ ನಾಯಕರೇ ಆಗಿದ್ದಾರೆ ಎಂದರು.

    ಡಿಕೆಶಿ ಬಂಧನ ವಿರೋಧಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದೇ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಿಲ್ಲ. ಆದರೆ, ಕಾಂಗ್ರೆಸ್ ಪ್ರತಿಭಟನೆ ಸಂದರ್ಭದಲ್ಲಿ ಕಿಡಿಗೇಡಿಗಳು ಸೇರಿಕೊಂಡು ಹಿಂಸಾತ್ಮಕ ಕೃತ್ಯಗಳನ್ನು ಮಾಡುತ್ತಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳುವುದು ಒಳ್ಳೆಯದಲ್ಲ ಎಂದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link