ಬೆಂಗಳೂರು:
ಚಂದ್ರನ ದಕ್ಷಿಣ ಧ್ರುವವನ್ನು ತಲುಪಿ ಇತಿಹಾಸ ಸೃಷ್ಟಿಸುವ ತವಕದಿಂದ ನಭಕ್ಕೆ ಚಿಮ್ಮಿದ್ದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ -2 ಯೋಜನೆ ಕೊನೆಯ ಕ್ಷಣದಲ್ಲಿ ವಿಫಲವಾಗಿದೆ.
ಯೋಜನೆಯಂತೆ ಶನಿವಾರ ಮುಂಜಾನೆ 1.30ರಿಂದ 2.30ರ ಸುಮಾರಿಗೆ ಚಂದ್ರನ ಮೇಲ್ಮೈ ಸ್ಪರ್ಶಿಸಬೇಕಿದ್ದ ಲ್ಯಾಂಡರ್ ‘ವಿಕ್ರಮ್’ ಚಂದ್ರನತ್ತ ಕೆಳಗಿಳಿಯಿತಾದರೂ, ಕೊನೆಯ ಹಂತದಲ್ಲಿ ಭೂಮಿಯೊಂದಿಗೆ ಸಂಪರ್ಕ ಕಡಿದುಕೊಂಡಿತು.
ಇದರಿಂದ ಇಸ್ರೋ ಬಾಹ್ಯಾಕಾಶ ವಿಜ್ಞಾನಿಗಳು ಹಾಗೂ ದೇಶದ ಲಕ್ಷಾಂತರ ಜನರ ಕನಸುಗಳನ್ನು ಹೊತ್ತು ಸಾಗಿದ್ದ ಚಂದ್ರಯಾನದ 2 ತನ್ನ ನಿಗದಿತ ಗುರಿ ತಲುಪುವಲ್ಲಿ ವಿಫಲವಾದಂತಾಗಿದೆ.
ಚಂದ್ರಯಾನ-2ಗೆ ಹಿನ್ನಡೆಯುಂಟಾದ ಹಿನ್ನಲೆಯಲ್ಲಿ ಭಾವುಕರಾಗಿದ್ದ ಇಸ್ರೋ ಮುಖ್ಯಸ್ಥ ಶಿವನ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಲಂಗಿಸಿ, ಸಂತೈಸಿದ್ದಾರೆ.
ಶನಿವಾರ ಮುಂಜಾನೆ 1. 39ರ ಸುಮಾರಿಗೆ ಚಂದ್ರನ ಮೇಲ್ಮೈಗೆ ಇಳಿಯಲು ಆರಂಭಿಸಿದ ಲ್ಯಾಂಡರ್, 1.52ರ ಸುಮಾರಿಗೆ ಮೇಲ್ಮೈಗೆ ಇನ್ನೂ 2.1 ಕಿಮೀ ಅಕ್ಷಾಂಶ ದೂರವಿರುವಾಗಲೇ ಭೂಮಿಯೊಂದಿಗೆ ಸಂಪರ್ಕ ಕಡಿತಗೊಂಡಿತು.
ಆರಂಭದಿಂದಲೂ ತನ್ನ ವೇಗವನ್ನು ಕಡಿಮೆಗೊಳಿಸುತ್ತಾ ಕೆಳಗಿಳಿದ ಲ್ಯಾಂಡರ್ ಕೊನೆಯ ಹಂತದಲ್ಲಿ ತನ್ನ ಪಥ ಬದಲಿಸಿತು. ಮೊದಲ ಮೂರು ನಿಮಿಷಗಳಲ್ಲೇ ಅದರ ವೇಗವನ್ನು 300 ಕಿಮೀಯಷ್ಟು ಕಡಿಮೆಗೊಳಿಸಲಾಗಿತ್ತು. ಆದರೆ, ಚಂದ್ರನ ನಿಧಾನವಾಗಿ ಶೂನ್ಯ ವೇಗಕ್ಕೆ ತಲುಪಬೇಕಿದ್ದ ಲ್ಯಾಂಡರ್ ತನ್ನ ವೇಗವನ್ನು ಪ್ರತಿ ಸೆಕೆಂಡ್ ಗೆ 48 ಮೀಟರ್ ಗಿಂತ ಕಡಿಮೆಗೊಳಿಸಲು ವಿಫಲವಾಯಿತು ಎನ್ನಲಾಗಿದೆ.
ಆದರೆ, ಲ್ಯಾಂಡರ್ ಪತನಗೊಂಡಿದೆಯೇ, ಅಥವಾ ಅಲ್ಲಿನ ಧೂಳಿನ ರಾಶಿಯಲ್ಲಿ ಕಳೆದು ಹೋಗಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.
ಲ್ಯಾಂಡರ್ ಸಂಪರ್ಕ ಕಡಿತಗೊಂಡ ನಂತರ ಕೆಲ ಕಾಲ ವಿಮರ್ಶೆ ನಡೆಸಿದ ಇಸ್ರೋ ಅಧ್ಯಕ್ಷ ಕೆ.ಶಿವನ್, ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈಯ 2.1 ಕಿಮೀ ಅಕ್ಷಾಂಶದವರೆಗೆ ನಿಗದಿಯಂತೆ ಸಹಜವಾಗಿ ಚಲಿಸಿದ್ದು, ನಂತರ ಭೂಮಿಯ ಕೇಂದ್ರಗಳು ಲ್ಯಾಂಡರ್ ಸಂಪರ್ಕವನ್ನು ಕಳೆದುಕೊಂಡಿದೆ. ದತ್ತಾಂಶಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಪ್ರಕಟಿಸಿದರು.
ಧೈರ್ಯ ತುಂಬಿದ ಮೋದಿ:
ಚಂದ್ರಯಾನ -2 ಯೋಜನೆಯ ಯಶಸ್ಸಿನ ಕ್ಷಣಗಳಿಗೆ ಸಾಕ್ಷಿಯಾಗಲು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಆಗಮಿಸಿದ್ದ ಪ್ರದಾನಿ ನರೇಂದ್ರ ಮೋದಿ, ವಿಜ್ಞಾನಿಗಳಿಗೆ ಧೈರ್ಯ ತುಂಬಿದರು. ತಾಂತ್ರಿಕ ತೊಂದರೆಯ ಕುರಿತು ಮಾಹಿತಿ ಪಡೆದ ಅವರು, ಜೀವನದಲ್ಲಿ ಏರು ಪೇರುಗಳು ಸಹಜ. ಇದೇನು ಸಣ್ಣ ಸಾಧನೆಯಲ್ಲ. ನಿಮ್ಮ ಸಾಧನೆಗೆ ಇಡೀ ದೇಶ ಪಡುತ್ತಿದೆ. ಹೋಪ್ ಫಾರ್ ದಿ ಬೆಸ್ಟ್ . ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ನೀವು ರಾಷ್ಟ್ರ, ವಿಜ್ಞಾನ ಹಾಗೂ ಮಾನವಕುಲಕ್ಕೆ ಬಹುದೊಡ್ಡ ಸೇವೆ ಸಲ್ಲಿಸಿದ್ದಿರಿ. ನಾನು ಎಲ್ಲಾ ಹಂತದಲ್ಲೂ ನಿಮ್ಮೊಂದಿಗಿದ್ದೇನೆ. ಧೈರ್ಯದಿಂದ ಮುಂದುವರಿಯಿರಿ ಎಂದು ಭರವಸೆ ನೀಡಿದರು.
ತಾಂತ್ರಿಕ ತೊಂದರೆ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅರಿಯಲು ಕೆಲ ಕಾಲ ಕಾದ ಮೋದಿ ನಂತರ ಅಲ್ಲಿಂದ ತೆರಳಿದರು. ಇದಕ್ಕೂ ಮುನ್ನ ಅವರು, ದೇಶದ ಮೂಲೆಮೂಲೆಗಳಿಂದ ಚಂದ್ರಯಾನ -2 ಯೋಜನೆ ವೀಕ್ಷಿಸಲು ಬಂದಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
India is proud of our scientists! They’ve given their best and have always made India proud. These are moments to be courageous, and courageous we will be!
Chairman @isro gave updates on Chandrayaan-2. We remain hopeful and will continue working hard on our space programme.
— Narendra Modi (@narendramodi) September 6, 2019
ನಂತರ, ಟ್ವೀಟ್ ಮಾಡಿದ ಅವರು, ನಮ್ಮ ವಿಜ್ಞಾನಿಗಳು ಅತ್ಯುತ್ತಮ ಕೊಡುಗೆ ನೀಡಿದ್ದು, ಯಾವಾಗಲೂ ಭಾರತಕ್ಕೆ ಹೆಮ್ಮೆ ತಂದಿದ್ದಾರೆ ಇವು ನಾವು ಧೈರ್ಯವಾಗಿರಬೇಕಾದ ಕ್ಷಣಗಳು ಹಾಗೂ ನಾವು ಧೈರ್ಯವಾಗಿಯೇ ಇರುತ್ತೇವೆ. ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಯೋಜನೆಯಲ್ಲಿ ಮತ್ತಷ್ಟು ಸಾಧಿಸುವ ನಿರೀಕ್ಷೆಯಿದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ