ಹತ್ತಾರು ವರ್ಷ ಒಂದೇ ಶಾಲೆಯಲ್ಲಿದ್ದ 82 ಶಿಕ್ಷಕರ ವರ್ಗಾವಣೆ
ತುಮಕೂರು
ಕಡ್ಡಾಯ ವರ್ಗಾವಣೆಯಾದ ತುಮಕೂರು ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲೆಗಳ 82 ಶಿಕ್ಷಕರು ನಗರದ ಡಿಡಿಪಿಐ ಕಚೇರಿಯಲ್ಲಿ ಶನಿವಾರ ನಡೆದ ಕೌನ್ಸಿಲಿಂಗ್‍ನಲ್ಲಿ ಶಾಲೆ ಆಯ್ಕೆ ಮಾಡಿಕೊಂಡರು.
ಹತ್ತು ವರ್ಷಕ್ಕೂ ಮೇಲ್ಪಟ್ಟು ನಗರ ಪ್ರದೇಶಗಳಲ್ಲಿ ಒಂದೇ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದ ಶಿಕ್ಷಕರನ್ನು ಹಳ್ಳಿ ಶಾಲೆಗಳಿಗೆ ಕಡ್ಡಾಯವಾಗಿ ವರ್ಗಾವಣೆ ಮಾಡಲು ಇಲಾಖೆ ಆದೇಶ ಮಾಡಿತ್ತು. ಹಾಗಾಗಿ ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳಲ್ಲಿ ಎ-ವಲಯ ಶಾಲೆಗಳಲ್ಲಿ ಹತ್ತು ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟು ಅವಧಿ ಒಂದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಶಿಕ್ಷಕರು ಖಾಲಿ ಇರುವ ಸಿ-ವಲಯದ ಶಾಲೆಗಳ ಸ್ಥಳ ಆಯ್ಕೆ ಮಾಡಿಕೊಂಡರು.
ಕಡ್ಡಾಯ ವರ್ಗಾವಣೆ ವಿರೋಧಿಸಿ ಬೆಳಿಗ್ಗೆ ಈ ಶಿಕ್ಷಕರು ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಇಲಾಖೆ ನೀತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಡ್ಡಾಯ ವರ್ಗಾವಣೆ ಬಹಿಷ್ಕರಿಸಿ ಅದೇ ಶಾಲೆಯಲ್ಲಿ ಮುಂದುವರೆಯಲು ಅವಕಾಶ ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನಾ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಡಿಡಿಪಿಐ ಎಂ. ಆರ್. ಕಾಮಾಕ್ಷಿ, ಸರ್ಕಾರದ ನಿಯಮದ ಪ್ರಕಾರ ಕೌನ್ಸಿಲಿಂಗ್ ಮಾಡಬೇಕಾಗಿದೆ. ಇದರಲ್ಲಿ ಶಿಕ್ಷಕರು ಹಾಜರಾಗಿ ಖಾಲಿ ಹುದ್ದೆ ಇರುವ ಶಾಲೆ ಆಯ್ಕೆ ಮಾಡಿಕೊಳ್ಳಬಹುದು, ಗೈರು ಹಾಜರಾಗುವ ಶಿಕ್ಷಕರು ನಾವು ಸೂಚಿಸುವ ಶಾಲೆಗೆ ಹೋಗಬೇಕು ಎಂದು ಹೇಳಿದರು.
ಹತ್ತಾರು ವರ್ಷ ನಗರ ಪ್ರದೇಶದ ಶಾಲೆಗಳಲ್ಲಿ ಕೆಲಸ ಮಾಡಿ ಈಗ ಬಸ್ ಅನುಕೂಲಗಳಿಲ್ಲದ ಹಳ್ಳಿಗಳ ಶಾಲೆಗಳಿಗೆ ಹೋಗಲು ನಿರಾಕರಿಸಿ ಈ ಶಿಕ್ಷಕರು ಪ್ರತಿಭಟನೆ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ಬೇಸರದ ನಡುವೆಯೇ ಪ್ರತಿಭಟನೆ ಕೈಬಿಟ್ಟ ಶಿಕ್ಷಕರು ಕೌನ್ಸಿಲಿಂಗ್‍ಗೆ ಹಾಜರಾಗಿ ಶಾಲೆ ಆಯ್ಕೆ ಮಾಡಿಕೊಂಡರು.
ಹತ್ತು ವರ್ಷ ಮೀರಿ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 82 ಶಿಕ್ಷಕರನ್ನು ಕಡ್ಡಾಯ ವರ್ಗಾವಣೆಗೆ ಗುರುತಿಸಿದ್ದು, ಇವರು ಹಾಲಿ ಕೆಲಸ ಮಾಡುತ್ತಿದ್ದ ಶಾಲೆಗಳಲ್ಲಿ ಇವರ ಹುದ್ದೆಯನ್ನು ಸಿ-ವಲಯದ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ಕೌನ್ಸಿಲಿಂಗ್ ಮೂಲಕ ಈಗಾಗಲೇ ಆಯ್ಕೆ ಮಾಡಿಕೊಂಡಿದ್ದು, ಇವರು ಅವರಿಗಾಗಿ ಸ್ಥಾನ ತೆರವು ಮಾಡಿಕೊಡಬೇಕಾಗಿದೆ. ಈ ಶಿಕ್ಷಕರು ಕೌನ್ಸಿಲಿಂಗ್ ಮೂಲಕವೇ ಹುದ್ದೆ ಖಾಲಿ ಇರುವ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.
82 ಶಿಕ್ಷಕರ ಪೈಕಿ ಮಹಿಳಾ ಶಿಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಬಹುತೇಕರು ತುಮಕೂರು ನಗರದ ಶಾಲೆಗಳಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿದ್ದರು.ಕಡ್ಡಾಯ ವರ್ಗಾವಣೆ ಮಾಡಬಾರದಾಗಿತ್ತು, ಶಾಲೆ ಬದಲಾವಣೆಗೆ ಪರಸ್ಪರ ವರ್ಗಾವಣೆಗೆ ಅವಕಾಶ ಕೊಡಬೇಕಾಗಿತ್ತು. ಸತಿ-ಪತಿ ಪ್ರಕರಣದಲ್ಲಿ ಕಡ್ಡಾಯ ವರ್ಗಾವಣೆ ಕೈಬಿಡಲಾಗಿದೆ, ಅದರಲ್ಲೂ ಮಹಿಳಾ ಶಿಕ್ಷಕರಿಗೆ ಹಳ್ಳಿಗಳಿಗೆ ಹೋಗಿಬರಲು ಅನಾನುಕೂಲವಾಗುತ್ತದೆ.
ಕೆಲವುಕಡೆ ಬಸ್ ಸೌಕರ್ಯವಿಲ್ಲ, ಕೆಲ ಶಾಲೆಗಳಿಗೆ ಬಸ್ ಇಳಿದು ಕಿಲೋಮಿಟರ್‍ಗಟ್ಟಲೆ ನಡೆದು ಹೋಗಬೇಕು. ಈ ಸಮಸ್ಯೆಗಳನ್ನು ಗಮನಿಸಿ ಸರ್ಕಾರ ಶಿಕ್ಷಕಿಯರಿಗೆ ಕಡ್ಡಾಯ ವರ್ಗಾವಣೆಯಲ್ಲಿ ವಿನಾಯಿತಿ ಕೊಡಬೇಕಾಗಿತ್ತು ಎಂದು ಶಾಲೆ ಆಯ್ಕೆಗೆ ಹಾಜರಾಗಿದ್ದ ಬಹತೇಕ ಶಿಕ್ಷಕಿಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಈಗಾಗಲೇ ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ ವರ್ಗಾವಣೆ ಮುಗಿದಿದ್ದು, ಈ ತಿಂಗಳ 11ರಂದು ಪರಸ್ಪರ ವರ್ಗಾವಣೆಗೆ ಅವಕಾಶವಿದೆ. ಇಬ್ಬರೂ ಶಿಕ್ಷಕರು ಹಾಜರಾಗಿ ಪರಸ್ಪರ ಒಪ್ಪಿಗೆ ಮೇಲೆ ಅವರ ವರ್ಗಾವಣೆ ಮಾಡಲಾಗುತ್ತದೆ ಎಂದು ಡಿಡಿಪಿಐ ಎಂ ಆರ್ ಕಾಮಾಕ್ಷಿ ಹೇಳಿದರು.ಪರಸ್ಪರ ವರ್ಗಾವಣೆ ಬಯಸಿ 67 ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ