ತಾ.ಪಂ ಸಭೆ: ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ವಾಕ್ಸಮರ

ಹಿರಿಯೂರು :

      ಕಳೆದ ಒಂದೂವರೆ ವರ್ಷದಿಂದ ಶಾಸಕಿ ಪೂರ್ಣಿಮಾರವರು ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡ ತ್ರೈಮಾಸಿಕ ಕೆಡಿಎಫ್ ಸಭೆ ನಡೆಸದೆ, ಒನ್‍ಮ್ಯಾನ್‍ಶೋ ನಡೆಸುತ್ತಿರುವುದು, ತಾಲ್ಲೂಕು ಮಟ್ಟದ ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆ ವಿಫಲಗೊಳ್ಳಲು ಕಾರಣವಾಗಿದೆ ಎಂಬುದಾಗಿ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಒಕ್ಕೊರಲ ಆರೋಪ ಮಾಡಿದರು.

      ನಗರದ ಸಾಮಥ್ರ್ಯಸೌಧದಲ್ಲಿ ಆಯೋಜಿಸಿದ್ದ ತಾ.ಪಂ.ಸಾಮಾನ್ಯ ಸಭೆಯ ಆರಂಭದಲ್ಲೇ ಸದಸ್ಯರು ಎತ್ತಿದ ಗಂಭೀರ ಆರೋಪ ಮಾಡಿದರು.

     ತಾಪಂ ಇಒ ರಾಮ್ ಕುಮಾರ್ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಪ್ರಶ್ನೆಗಳ ಸುರಿಮಳೆಗೈದ ಜೆಡಿಎಸ್-ಕಾಂಗ್ರೆಸ್ ಸದಸ್ಯರ ಆರೋಪಗಳಿಗೆ ಸದಸ್ಯರು ಶಾಸಕರನ್ನು ಸಮರ್ಥಿಸಿಕೊಳ್ಳಲು ಮುಂದಾದಾಗ ಸಭೆಯಲ್ಲಿ ಕೋಲಾಹಲ ಸೃಷ್ಠಿಯಾಗಿ ಒಂದು ಹಂತದಲ್ಲಿ ಕೈಕೈ ಮಿಲಾಯಿಸುವ ಪರಿಸ್ಥಿತಿ ತಲುಪಿತು.

       ಜೆಡಿಎಸ್-ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಸದಸ್ಯರ ಪರಸ್ಪರ ಚಕಮಕಿ, ಗದ್ದಲದಲ್ಲಿ ಅಧಿಕಾರಿಗಳು ನೀಡುತ್ತಿದ್ದ ಸ್ಪಷ್ಟನೆಗಳು ಅರಣ್ಯ ರೋಧನವಾದವು. ಸದಸ್ಯ ಓಂಕಾರಪ್ಪ ಕೊಳವೆ ಬಾವಿ ವಿಚಾರವಾಗಿ ಮಾತನಾಡಿ, 2018-19ನೇ ಸಾಲಿನಲ್ಲಿ ಎಷ್ಟು ಕೊಳವೆಬಾವಿ ಕೊರೆಸಲಾಗಿದೆ ಎಂಬ ಮಾಹಿತಿ ನೀಡಿ, ಎಂದು ಆರ್.ಡಬ್ಲ್ಯೂ.ಡಿ.ಎಸ್. ಇಲಾಖೆ ಎಇಇ ಮಂಜುನಾಥ್ ಗೆ ತಾಕೀತು ಮಾಡಿದಾಗ, ತಡವರಿಸಿದ ಅಧಿಕಾರಿ 700 ಕ್ಕೂ ಹೆಚ್ಚು ಬೋರ್ ಕೊರೆಸಿದ್ದೇವೆ. ಶೇ.70-80ರಷ್ಟು ವಿಫಲವಾಗಿವೆ ಎಂದರು.

     ಇದರಿಂದ ಮತ್ತಷ್ಟು ಕೆರಳಿದ ಸದಸ್ಯ ಮುಕುಂದಪ್ಪ, ಕೊಳವೆ ಬಾವಿ ಕೊರೆಸುವ ಮುನ್ನ ಯಾವ ಮಾಹಿತಿ ವಿನಿಮಯ ಮಾಡಿಕೊಂಡಿ ದ್ದೀರೆಂಬುದನ್ನು ಮೊದಲು ಸಭೆಗೆ ತಿಳಿಸಬೇಕೆಂದು ಆಗ್ರಹಿಸಿದರು. ಗ್ರಾಮೀಣ ನೀರು ಸರಬರಾಜು ಇಲಾಖೆ ಕ್ರಿಯಾ ಯೋಜನೆ ಅನುಮೋದಿಸುವುದು ನಾವು, ಜಿ.ಪಂ.ಮಂಜೂರಾತಿ ನೀಡುತ್ತೆ, ಬಿಲ್ ಗಾಗಿ ಸ್ಥಳ ಪರಿಶೀಲನೆ, ವರದಿ ಸಲ್ಲಿಕೆ ಮೊದಲಾದ ಪ್ರಕ್ರಿಯೆಗಳನ್ನು ಗ್ರಾ.ಪಂ.ಅಧಿಕಾರಿಗಳು ನಡೆಸಬೇಕು. ಆದರೆ ನೀವು ಶಾಸಕರು, ಅವರ ಹಿಂಬಾಲಕ ಮರ್ಜಿಗೆ ಬಿದ್ದು, ಕೆಲಸ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

     ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಇದ್ದೂ, ಇಲ್ಲದಂತಾಗಿದೆ. ಆಡಳಿತ ಸಂಪೂರ್ಣ ಕುಸಿದಿದೆ. ಮಳೆಗಾಲದಲ್ಲೇ ಕುಡಿಯಲು ನೀರಿಲ್ಲದ ಪರಿಸ್ಥಿತಿ ಉದ್ಭವಿಸಿದೆ ಎಂಬುದಾಗಿ ಅವರು ದೂರಿದರು.

     ಬಿಜೆಪಿ ಸದಸ್ಯರಾದ ಯಶವಂತರಾಜು ಮತ್ತು ಜಯರಾಮಯ್ಯ, ಇಂತಹ ಸಂಪ್ರದಾಯ ಆರಂಭಿಸಿದ್ದೇ ನೀವು. ಅದನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ. ಅಂದು ಸರಿ ಕಂಡದ್ದು, ಇಂದು ತಪ್ಪಾಗಿ ಕಾಣುತ್ತಿದೆಯೇ ಎಂದು ಪ್ರಶ್ನಿಸಿದಾಗ, ಪರಸ್ಪರರ ವಾಕ್ಸಮರ ತಾರಕಕ್ಕೇರಿತು.

       ಮುಂದುವರೆಸಿ ಯಶವಂತರಾಜು ಮಾತನಾಡಿ, ಬರವಿದ್ದರೂ ಮೇವು ವಿತರಣೆ ಏಕೆ ನಿಲ್ಲಿಸಲಾಗಿದೆ ಎಂದು ಪ್ರಶ್ನಿಸಿದಾಗ, ಕಾಂಗ್ರೆಸ್-ಜೆಡಿಎಸ್ ಸದಸ್ಯರು ಈ ಪ್ರಶ್ನೆಯನ್ನು ಶಾಸಕರಿಗೆ ಕೇಳಿ, ಸರ್ಕಾರ ನಿಮ್ಮದೆ ಇದೆ, ತಹಶೀಲ್ದಾರ್ ಮೂಲಕ ವರದಿ ತಯಾರಿಸಿ ಜಿಲ್ಲಾಡಳಿತಕ್ಕೆ ನೀಡಿ, ಒತ್ತಡ ತಂದರೆ ಗೋಶಾಲೆ ಆರಂಭಿಸಲಾಗುತ್ತದೆ. ಶಾಸಕರಿಗೆ ಅಷ್ಟೂ ಮಾಡಲಾಗುವುದಿಲ್ಲವೇ? ಎಂದು ತಿರುಗೇಟು ನೀಡಿದರು.

     ಅಂತು-ಇಂತೂ ಬರೀ ಗೊಂದಲ ಗದ್ದಲದಲ್ಲೇ ಮುಕ್ತಾಯಗೊಂಡ ಸಭೆಯಲ್ಲಿ ತಾ.ಪಂ.ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀದೇವಿ, ಉಪಾಧ್ಯಕ್ಷೆ ಶ್ರೀಮತಿ ಚಂದ್ರಕಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಪಿಟ್ಲಾಲಿ ಕರಿಯಣ್ಣ, ತಾ.ಪಂ.ಇಒ ರಾಮ್ ಕುಮಾರ್, ತಾಲ್ಲೂಕು ತಹಶೀಲ್ದಾರ್ ಕಾಂತರಾಜ್, ವ್ಯವಸ್ಥಾಪಕ ಅಶ್ವತ್ಥಾಮ, ಸೇರಿದಂತೆ ಇತರರು ಉಪಸ್ಥಿತರಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link