ಒಣಗಿದ ತ್ರಿವಳಿ ಕೆರೆಗಳು : ನೀರು ಹರಿಸುವ ಇಚ್ಚಾಶಕ್ತಿ ರಾಜಕಾರಣಿಗಳಲಿಲ್ಲವೇ…?

ಶಿರಾ

    ಬರದ ನಾಡಿನ ಶಿರಾ ಭಾಗಕ್ಕೆ ದೋ…. ಎಂದು ಸುರಿಯದ ಜವರಾಯ ಕನಿಷ್ಠಪಕ್ಷ ಭೂಮಿಯನ್ನೂ ಸರಿಯಾಗಿ ತಣಿಸದೆ ರೈತರನ್ನು ಕಂಗಾಲಾಗಿಸಿದ್ದಾನೆ. ಪ್ರಸಕ್ತ ವರ್ಷವೂ ಇಂತಹ ಸಂಕಷ್ಟ ಎದುರಾಗುತ್ತದೆ ಎಂಬ ಕಲ್ಪನೆ ಯಾರಲ್ಲೂ ಇರಲಿಲ್ಲ.

   ಕಳೆದ 20 ವರ್ಷಗಳಿಂದಲೂ ಉತ್ತಮವಾದ ಮಳೆ ಬಾರದೆ ಕೂಡಿಟ್ಟ ಬೀಜವನ್ನೂ ಸರಿಯಾಗಿ ಬಿತ್ತದೆ ಮುಂಗಾರು ಮಳೆ ಬಂದಾಗ ಭೂಮಿಯನ್ನು ಹಸನು ಮಾಡಿಕೊಂಡು ಮಳೆಗಾಗಿ ಹಾತೊರೆಯುವ ಶಿರಾ ಭಾಗದ ರೈತರ ಸಂಕಷ್ಟದ ಸ್ಥಿತಿ ಸದ್ಯಕ್ಕೆ ಕೊನೆಗಾಣುವಂತೆಯೇ ಕಾಣುತ್ತಿಲ್ಲ.

    ಮುಂಗಾರಿನ ಸಂದರ್ಭದಲ್ಲಿ ಪ್ರಸಕ್ತ ವರ್ಷ ತಾಲ್ಲೂಕಿನ ಕೆಲವೇ ಹೋಬಳಿಯ ಗ್ರಾಮಗಳಲ್ಲಿ ಭೂಮಿಯನ್ನು ತಣಿಸಿದ ಜವರಾಯನ ಕರುಣೆಯಿಂದ ಕೆಲವು ರೈತರು ಬಿತ್ತನೆ ಕಾರ್ಯ ಕೈಗೊಂಡರು. ಆ ನಂತರ ಬಾರದ ಮಳೆ ಬೆಳೆಗಳನ್ನು ಒಣಗುವಂತೆ ಮಾಡಿದೆ.

    ಇನ್ನೇನು ರೈತರು ಬಿತ್ತಿದ ಶೇಂಗಾ ಬೆಳೆಯು ಊಡು ಇಳಿದು ಹೂವು ಕಾದು ಫಲ ಕೊಡಬೇಕು ಅನ್ನುವಷ್ಟರಲ್ಲಿ, ಮಳೆ ಬಾರದೆ ರೈತರ ಬೆಳೆಗಳು ಭೂಮಿಯಲ್ಲಿಯೇ ಒಣಗಿ ಹೋಗುವಂತಹ ಸಂಕಷ್ಟದ ವಾತಾವರಣ ಈ ಭಾಗದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ಕೆಲವೇ ಹೋಬಳಿಯ ರೈತರು ಬಿತ್ತಿದ ಫಸಲು ಕಾಯಿ ಬಿಡುವ ಹಂತ ತಲುಪಿದಾಗಲಾದರೂ ಒಂದಿಷ್ಟು ಮಳೆ ಬಂದಿದ್ದರೆ ರೈತರ ಹೋದ ಜೀವ ಬಂದಂತಾಗುತ್ತಿತ್ತು. ಆದರೆ ರೈತರ ಸಂಕಷ್ಟವನ್ನು ದೂರ ಗೊಳಿಸುವ ಮಳೆ ಕೊನೆಗೂ ಬಾರಲೇ ಇಲ್ಲ.

     ಇಡೀ ತಾಲ್ಲೂಕಿನಲ್ಲಿನ ಯಾವ ಕೆರೆಗಳೂ ಕೂಡ ಮಳೆಯ ನೀರಿನಿಂದ ತುಂಬಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಬಾಚಿ ಬಾಚಿ ಹಳ್ಳಗಳಲ್ಲಿ ತುಂಬಿದ ಅಕ್ರಮ ಮರಳು ಸಾಗಾಣಿಕೆಯಿಂದ ಇಡೀ ತಾಲ್ಲೂಕಿನ ಅಂತರ್ಜಲ ಬತ್ತಿ ಹೋಗಿದೆ.

    ಕಳೆದ ಒಂದೆರಡು ವರ್ಷಗಳ ಹಿಂದೆ 700-800 ಅಡಿಗಳಿಗೆಲ್ಲಾ ಕೊಳವೆ ಬಾವಿಗಳಲ್ಲಿ ಲಭ್ಯವಾಗುತ್ತಿದ್ದ ನೀರು ಈಗ 1,500 ಅಡಿ ಕೊರೆದರೂ ಒಂದು ಹನಿ ನೀರು ಕೂಡ ಲಭ್ಯವಾಗದಂತಹ ಸ್ಥಿತಿ ಎದುರಾಗಿದೆ. ಅಡಕೆ-ತೆಂಗಿನ ತೋಟದ ರೈತರು ಹತ್ತಾರು ಕೊಳವೆ ಬಾವಿಗಳನ್ನು ಕೊರೆಸಿ ಸಾಲವನ್ನೂ ತೀರಿಸಲಾಗದೆ ಬೆಂದು ಬಸವಳಿದು ಹೋಗಿದ್ದಾರೆ.

    ಮಳೆಯೇನೋ ಹೋಯ್ತು ಈ ಮಳೆಯ ಹಿಂದೆಯೇ ಕುಡಿಯುವ ನೀರಿಗಾಗಿ ಶಿರಾ ನಗರವೂ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ತೀವ್ರತರವಾದ ಸಮಸ್ಯೆಗಳು ಸೃಷ್ಟಿಯಾಗತೊಡಗಿವೆ. ಗ್ರಾಮಗಳ ಕೊಳವೆ ಬಾವಿಗಳ ನೀರು ಕೂಡ ಬತ್ತಿ ಹೋಗಿ ಅನೇಕ ಗ್ರಾಮಗಳಲ್ಲಿ ಟ್ಯಾಂಕರ್‍ಗಳಲ್ಲಿ ನೀರು ಪೂರೈಸುವ ಕಾರ್ಯ ಅನಿವಾರ್ಯವಾಗಿದೆ. ಮತ್ತೂ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವಲ್ಲಿ ಗ್ರಾಮ ಪಂಚಾಯ್ತಿಗಳೇ ವಿಫಲಗೊಂಡಿವೆ.

    ಜಿಲ್ಲೆಯ ಬಹುತೇಕ ತಾಲ್ಲೂಕುಗಳು ಶಾಶ್ವತ ನೀರಾವರಿಗಾಗಿ ಹಪಹಪಿಸುತ್ತಿದ್ದ ಪರಿಸ್ಥಿತಿ ನಿರ್ಮಾಣಗೊಂಡ ನಂತರ ಬಹು ದಿನಗಳ ಬೇಡಿಕೆಯಾದ ಹೇಮಾವತಿಯ ನೀರು ಕುಡಿಯುವ ನೀರಿನ ಸಲುವಾಗಿ ಜಿಲ್ಲೆಯ ಅನೇಕ ತಾಲ್ಲೂಕುಗಳಿಗೆ ಹರಿಯುವ ಮೂಲಕ ಕೊಂಚವಾದರೂ ಕುಡಿಯುವ ನೀರಿನ ಸಮಸ್ಯೆ ನೀಗಿದ್ದು ಸರಿಯಷ್ಟೆ.

     ಇದೀಗ ತಾಲ್ಲೂಕಿನ ಕುಡಿಯುವ ಸಮಸ್ಯೆಗೆ ತಾಲ್ಲೂಕು ಆಡಳಿತ ವ್ಯಾಪಕ ತುರ್ತು ಕ್ರಮಗಳನ್ನು ಕೈಗೊಳ್ಳಲೇಬೇಕಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಇರುವ ಮಾರ್ಗ ಹೇಮಾವತಿ ನೀರನ್ನು ಹರಿಸಿಕೊಳ್ಳುವುದೇ ಆಗಿದ್ದು, ಇದೀಗ ಹೇಮಾವತಿ ನಾಲಾ ವಲಯದ ವ್ಯಾಪ್ತಿಗೆ ಒಳಪಟ್ಟ ಶಿರಾ, ಕಳ್ಳಂಬೆಳ್ಳ ಹಾಗೂ ಮದಲೂರು ಕೆರೆಗಳಿಗೆ ಹೇಮಾವತಿಯನ್ನು ಹರಿಸಿಕೊಳ್ಳುವ ಚಾಣಾಕ್ಷತೆಯನ್ನು ನಮ್ಮ ಜನಪ್ರತಿನಿಧಿಗಳು ಮೆರೆಯಲೇಬೇಕಿದೆ.

      ಮಾಜಿ ಶಾಸಕರಾದ ಟಿ.ಬಿ.ಜಯಚಂದ್ರ, ಪಿ.ಎಂ.ರಂಗನಾಥಪ್ಪ, ದಿ.ಭೂವನಹಳ್ಳಿ ಶ್ರೀನಿವಾಸಯ್ಯ, ಎಸ್.ಕೆ.ದಾಸಪ್ಪ, ಬಿ.ಸತ್ಯನಾರಾಯಣ್, ಈ ಭಾಗದ ಮಠಾಧೀಶರೂ, ಹೇಮಾವತಿ ಹೋರಾಟ ಸಮಿತಿಯೂ ಸೇರಿದಂತೆ ಹತ್ತು ಹಲವು ಸಂಘಟನೆಗಳ ಹೋರಾಟದ ಪ್ರತಿಫಲವಾಗಿ ಹೇಮಾವತಿ ಈ ಭಾಗಕ್ಕೆ ಹರಿಯಲು ಕಾರಣವಾಯ್ತು. ಇಲ್ಲಿ ಹೇಮಾವತಿಯ ನೀರನ್ನು ಯಾರು ತಂದರು ಎಂಬ ಮೂಲವನ್ನು ಹುಡುಕುವ ಕೆಲಸ ಮುಖ್ಯವಲ್ಲ.

     ಹರಿದು ಬರುತ್ತಿರುವ ನಮ್ಮ ಪಾಲಿನ ಹೇಮಾವತಿಯನ್ನು ಹೇಗೆ ಪಡೆದುಕೊಳ್ಳಬೇಕು ಅನ್ನುವುದು ಅತಿ ಮುಖ್ಯವಾದ ಸಂಗತಿಯಾಗಿದೆ. ಕಳೆದ 20 ವರ್ಷದಿಂದ ತಾಲ್ಲೂಕಿನ ಜನಪ್ರತಿನಿಧಿಗಳು ನೀರಿನ ರಾಜಕಾರಣ ಮಾಡಿದ್ದು ಸಾಕು. ಇನ್ನು ಮುಂದೆ ನಮ್ಮದೇ ಪಾಲಿನ ನೀರನ್ನು ಹೇಗೆ ಹರಿಸಿಕೊಳ್ಳಬೇಕು ಎಂಬುದನ್ನು ಚಿಂತಿಸಿ ಹೋರಾಡುವುದನ್ನು ಕಲಿಯಬೇಕಿದೆ.

     ತಾಲ್ಲೂಕಿನ ಕಳ್ಳಂಬೆಳ್ಳ ಮತ್ತು ಶಿರಾ ಕೆರೆಗೆ ಹೇಮಾವತಿ ಯೋಜನೆಯ ನೀರನ್ನು ತುಮಕೂರು ನಾಲೆ 105.600 ಕಿ.ಮೀ.ನಿಂದ 0.9 ಟಿ.ಎಂ.ಸಿ.ಯಷ್ಟು ನೀರನ್ನು ನೈಸರ್ಗಿಕವಾದ ಕಳ್ಳಂಬೆಳ್ಳ ಹಳ್ಳದ ಮೂಲಕ ಹರಿಸಿ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಸರ್ಕಾರ 2000 ರಲ್ಲಿ ಈ ಯೋಜನೆಗೆ ಮಂಜೂರಾತಿ ಲಭ್ಯವಾಯಿತು.

    ಕಳೆದ 19 ವರ್ಷಗಳಲ್ಲಿ ಶಿರಾ, ಕಳ್ಳಂಬೆಳ್ಳ ಕೆರೆಗಳಿಗೆ ಹೇಮಾವತಿಯನ್ನು ಹರಿಸಿರುವುದನ್ನು ಕಂಡರೆ ಈವರೆಗೂ ಈ ಭಾಗಕ್ಕೆ ಮೀಸಲಾದ 0.9 ಟಿ.ಎಂ.ಸಿಯಷ್ಟು ನೀರನ್ನು ಸರ್ಕಾರ ಪೂರೈಸಿಯೇ ಇಲ್ಲ. ಪ್ರತೀ ವರ್ಷವೂ ಶಿರಾ, ಕಳ್ಳಂಬೆಳ್ಳ ಭಾಗಕ್ಕೆ ಹೇಮಾವತಿಯ ನೀರನ್ನು ಹರಿಸಿಕೊಳ್ಳುವಾಗ ಹಾಲಿ ಇರುವಂತಹ ಜನಪ್ರತಿನಿಧಿಗಳು ಹರ ಸಾಹಸ ಮಾಡಿ ನೀರನ್ನು ಹರಿಸಿಕೊಳ್ಳುವ ಅನಿವಾರ್ಯತೆ ಎದುರಾಗುತ್ತಿದೆ. ನಮಗೆ ಮೀಸಲಾದ ನೀರನ್ನೂ ನಾವು ಪಡೆಯಲು ಯಮ ಯತ್ನ ಮಾಡುವ ಸ್ಥಿತಿ ಬಂತಲ್ಲ ಎಂದು ರೈತರು, ಸಾರ್ವಜನಿಕರು ನೊಂದು ಕೊಂಡ ನಿದರ್ಶನಗಳೂ ಉಂಟು.

   ಕಳೆದ ವರ್ಷ ತಾಲ್ಲೂಕಿನಲ್ಲಿ ಸಮರ್ಪಕವಾದ ಮಳೆಯೇ ಇಲ್ಲದಿರುವಂತಹ ಸಂದರ್ಭದಲ್ಲಿ 900 ಎಂ.ಸಿ.ಎಫ್.ಟಿ. ನೀರಿನ ಪೈಕಿ 925 ಎಂ.ಸಿ.ಎಫ್.ಟಿ.ಯನ್ನು ಹರಿಸಿಕೊಳ್ಳಲಾಗಿತ್ತು. ಕಳ್ಳಂಬೆಳ್ಳದಿಂದ ಶಿರಾವರೆಗಿನ 10 ಕ್ಕೂ ಹೆಚ್ಚು ಬ್ಯಾರೇಜ್‍ಗಳನ್ನು ತುಂಬಿಸಿಕೊಂಡು ಶಿರಾ ಕೆರೆಗೆ ನೀರು ಹರಿಸಿಕೊಳ್ಳುವಲ್ಲಿ ಶಾಸಕ ಬಿ.ಸತ್ಯನಾರಾಯಣ್ ನಿಜಕ್ಕೂ ಹೋರಾಟವನ್ನೇ ಮಾಡಬೇಕಾಯ್ತು.

    ಇದೀಗ ಸೆ.11 ರಿಂದ 30 ರವರೆಗೆ ಪಟ್ರಾವತನಹಳ್ಳಿ ಎಸ್ಕೇಪ್ ಗೇಟ್ ಮೂಲಕ ಕಳ್ಳಂಬೆಳ್ಳ ಶಿರಾ ಕೆರೆಗಳಿಗೆ ಹೇಮಾವತಿಯ ನೀರು ಹರಿಯಲಿದ್ದು ಈ 19 ದಿನದೊಳಗೆ ಕಳ್ಳಂಬೆಳ್ಳ, ಶಿರಾ ಹಾಗೂ ಮದಲೂರು ಕೆರೆಗಳಿಗೆ ನೀರು ತುಂಬಿಸಿಕೊಳ್ಳುವ ಪ್ರಾಮಾಣಿಕ ಕೆಲಸ ಎಷ್ಟರಮಟ್ಟಿಗೆ ನಡೆಯುತ್ತದೆ ಎಂಬುದು ಕುತೂಹಲವೂ ಆಗಿದೆ. ನೀರು ಹರಿಯುವಂತಹ ಈ 19 ದಿನಗಳಲ್ಲಿ ಈ ಎಲ್ಲಾ ಬ್ಯಾರೇಜ್‍ಗಳನ್ನು ತುಂಬಿಸಿಕೊಂಡು ತಾಲ್ಲೂಕಿನ ತ್ರಿವಳಿ ಕೆರೆಗಳನ್ನು ಭರ್ತಿ ಮಾಡಿಕೊಳ್ಳುವುದು ಅತ್ಯಂತ ಕಷ್ಟದ ಸಂಗತಿಯೂ ಆಗಿದೆ

   ಈ ಸಂದರ್ಭದಲ್ಲಿ ಜವರಾಯನ ಕರುಣೆಯೂ ಆದಲ್ಲಿ ಮಾತ್ರ ಹೇಮಾವತಿ ನೀರು ಹಸಿದ ಕೆರೆಗಳನ್ನು ತೃಪ್ತಿಪಡಿಸಲು ಸಾಧ್ಯ. ಈ ನಡುವೆ ನಮ್ಮ ತಾಲ್ಲೂಕಿನ ಜನಪ್ರತಿನಿಧಿಗಳು ಪಕ್ಷ-ಭೇದ ಮರೆತು ಒಟ್ಟಾಗಿ ಅಧಿಕಾರಿಗಳ ಬೆನ್ನ ಹಿಂದೆ ಬಿದ್ದು ನಮ್ಮ ಪಾಲಿನ ನೀರನ್ನು ಪಡೆಯದೇ ಇದ್ದಲ್ಲಿ ಈಗ ಹರಿಯುವ ನೀರು ಕೂಡ ಲಭ್ಯವಾಗುವುದು ಕನಸಿನ ಕೂಸಾಗುತ್ತದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap