ಬೆಂಗಳೂರು:
ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನೇ ಕೊಲೆ ಮಾಡಲು ರೂಪಿಸಿದ್ದ ಸಂಚು ಸ್ಮಾರ್ಟ್ ಫೋನ್ ನಿಂದ ಬೆಳಕಿಗೆ ಬಂದ ಘಟನೆ ನಗರದ ಕೆ.ಆರ್.ಪುರದಲ್ಲಿ ನಡೆದಿದೆ.
ತಾವು ಬಾಡಿಗೆ ಇರುವ ಮನೆಯ ಮಾಲೀಕನ ಪುತ್ರನ ಜೊತೆ ಸ್ನೇಹ ಬೆಳೆಸಿದ್ದ ಹೆಂಡತಿಯ ಬಗ್ಗೆ ತಿಳಿದ ಗಂಡ ಮನೆಯನ್ನು ವಿಜಯನಗರಕ್ಕೆ ಶಿಫ್ಟ್ ಮಾಡಿದ್ದಾನೆ. ಆದರೆ, ಕೊನೆಗೆ ಮೊಬೈಲ್ ಕಸಿದುಕೊಂಡು ಪತ್ನಿಗೆ ಪತಿ ಬುದ್ಧಿವಾದ ಹೇಳಿದ್ದ.
ಆದರೂ ಕೂಡ ಪತ್ನಿ ತನ್ನ ಪ್ರಿಯಕರನೊಂದಿಗೆ ಫೋನ್ ನಲ್ಲಿ ಮಾತನಾಡುವುದನ್ನು ನಿಲ್ಲಿಸಿರಲಿಲ್ಲ. ಅತ್ತೆಯ ಮೊಬೈಲ್ ನಲ್ಲಿ ಪ್ರಿಯಕರನೊಂದಿಗೆ ನಿರಂತರವಾಗಿ ಮಾತನಾಡುತ್ತಲೇ ಇದ್ದಳು. ಈ ಬಗ್ಗೆ ತಾಯಿ, ಮಗನಿಗೆ ದೂರು ಹೇಳಿದ್ದಾಳೆ. ಇದಕ್ಕೆ ಬುದ್ಧಿ ಉಪಯೋಗಿಸಿದ ಪತಿ ತನ್ನ ತಾಯಿಗೆ ಒಂದು ಸ್ಮಾರ್ಟ್ ಫೋನ್ ಕೊಡಿಸಿ ಅದರಲ್ಲಿ ಕಾಲ್ ರೆಕಾರ್ಡರ್ ಆಪ್ ಅನ್ನೂ ಇನ್ ಸ್ಟಾಲ್ ಮಾಡಿದ.
ಎಂದೂ ಹಟ ಮಾಡದಿರುವ ಪತ್ನಿ ಇತ್ತೀಚೆಗೆ ತನ್ನ ತಂದೆಯನ್ನು ನೋಡಲು ತುಮಕೂರಿಗೆ ಹೋಗಬೇಕು. ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಬರುವಂತೆ ಹಟ ಮಾಡಿದ್ದಾಳೆ. ಇದರಿಂದ ಅನುಮಾನಗೊಂಡ ಗಂಡ ಹಿಂದಿನ ದಿನ ರಾತ್ರಿ ಪತ್ನಿ, ಪ್ರಿಯಕರನೊಂದಿಗೆ ನಡೆಸಿದ ಸಂಭಾಷಣೆಯನ್ನು ಕೇಳಿದಾಗ ದಂಗಾಗಿ ಹೋಗಿದ್ದಾರೆ. ಅದರಲ್ಲಿ ಗಂಡನನ್ನು ಕೊಲೆ ಮಾಡುವ ಸ್ಕೆಚ್ ಹಾಕಿರುತ್ತಾಳೆ.
ಮರುದಿನ ಬೆಳಗ್ಗೆ ಪತಿ ಆಕೆಯನ್ನು ಬೈಕ್ನಲ್ಲಿ ಕೂರಿಸಿಕೊಂಡು ರೈಲು ನಿಲ್ದಾಣದ ಬದಲಿಗೆ ವಿಜಯನಗರ ಠಾಣೆಗೆ ಕರೆದೊಯ್ದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಅಲ್ಲಿಂದ ದಂಪತಿಯನ್ನು ಪರಿಹಾರ ಕೇಂದ್ರಕ್ಕೆ ಕೌನ್ಸೆಲಿಂಗ್ಗೆ ಪೊಲೀಸರು ಕಳುಹಿಸಿದ್ದರು. ಮತ್ತೊಂದೆಡೆ ಪ್ರಕರಣ ತನಿಖೆ ಕೈಗೊಂಡು ಪೊಲೀಸರು ಪ್ರಿಯಕರನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪರಿಹಾರ ಕೇಂದ್ರದಲ್ಲಿ ಕೌನ್ಸ್ಸೆಲಿಂಗ್ ಮಾಡಲು ಸಾಧ್ಯವಾಗದಿದ್ದಾಗ ಎರಡೂ ಕುಟುಂಬಗಳನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಬಳಿಕ ದಂಪತಿಗೆ ವಿಚ್ಛೇದನ ಪಡೆಯಲು ನಿರ್ಧರಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ.
34 ವರ್ಷದ ಸಿವಿಲ್ ಇಂಜಿನಿಯರ್ ಮತ್ತು ತುಮಕೂರಿನ 24 ವರ್ಷದ ಯುವತಿ 6 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ 4 ವರ್ಷದ ಪುತ್ರನಿದ್ದಾನೆ. ಕುಟುಂಬ ಕೆ.ಆರ್. ಪುರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿತ್ತು.
ತುಮಕೂರಿನಲ್ಲಿ ಹತ್ಯೆಗೆ ಸಂಚು!!
ರೈಲು ನಿಲ್ದಾಣ ಅಥವಾ ಮಾರ್ಗ ಮಧ್ಯದಲ್ಲಿ ಗಂಡ ಬರುವ ಬೈಕಿಗೆ ಕಾರಿನಿಂದ ಡಿಕ್ಕಿ ಹೊಡೆದು ಹತ್ಯೆ ಮಾಡಿ ಆಕ್ಸಿಡೆಂಟ್ ಎಂದು ಬಿಂಬಿಸುವಂತೆ ಸಂಚು ರೂಪಿಸಲಾಗಿತ್ತು. ಒಂದು ವೇಳೆ ಬೆಂಗಳೂರಿನಲ್ಲಿ ಸಾಧ್ಯವಾಗದಿದ್ದರೆ ತುಮಕೂರಿನಲ್ಲಿ ಕೊಲೆ ಮಾಡುವ ಸಂಚನ್ನೂ ರೂಪಿಸಿ, ಇದಕ್ಕಾಗಿ ತುಮಕೂರಿನಲ್ಲಿದ್ದ ಪ್ರಿಯಕರನನ್ನೂ ಸಜ್ಜು ಮಾಡಿದ್ದಳು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ