ತುಮಕೂರು
ಪಾಲಿಕೆ ವ್ಯಾಪ್ತಿಯಲ್ಲಿರುವ 35 ವಾರ್ಡು ಹಾಗೂ 22 ಹಳ್ಳಿಗಳಲ್ಲಿರುವ ಅನಧಿಕೃತ ಆಸ್ತಿ/ಸ್ವತ್ತು/ಕಟ್ಟಡಗಳ ಮೇಲೆ ವಿಧಿಸಲಾಗುತ್ತಿರುವ ದುಪ್ಪಟ್ಟು ತೆರಿಗೆ ನಿಯಮವನ್ನು ಕೈಬಿಡಬೇಕೆಂದು ಪಾಲಿಕೆ ಸದಸ್ಯರೆಲ್ಲಾ ಒಕ್ಕೊರಲಿನಿಂದ ಆಗ್ರಹಿಸಿದರು.
ಪಾಲಿಕೆ ಸಭಾಂಗಣದಲ್ಲಿಂದು ಜರುಗಿದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಪಾಲಿಕೆಯಿಂದ ದುಪ್ಪಟ್ಟು ತೆರಿಗೆ ವಸೂಲಿ ಮಾಡುವುದರಿಂದ ಬಡಜನರಿಗೆ ಹೊರೆಯಾಗುತ್ತಿದೆ. ಈ ನಿಯಮವನ್ನು ಕೈಬಿಡಬೇಕೆಂದು ಹಿಂದಿನ ತುರ್ತು ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದರೂ ಇದುವರೆಗೂ ಕ್ರಮಕೈಗೊಂಡಿಲ್ಲದಿರುವುದು ಅಧಿಕಾರಿಗಳ ಬೇಜವಾಬ್ದಾರಿತನ. ಕೂಡಲೇ ನಿಯಮವನ್ನು ಕೈಬಿಡಬೇಕೆಂದು ಸದಸ್ಯರೆಲ್ಲ ಒಮ್ಮತದಿಂದ ಪಟ್ಟು ಹಿಡಿದರು.
ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾeóï ಮಾತನಾಡಿ, ಅನಧಿಕೃತ ಆಸ್ತಿಗಳಿಂದ ವಸೂಲಿ ಮಾಡುತ್ತಿರುವ ದುಪ್ಪಟ್ಟು ತೆರಿಗೆ ನಿಯಮವನ್ನು ಕೈಬಿಡುವುದರೊಂದಿಗೆ ಪಾಲಿಕೆ ವ್ಯಾಪ್ತಿಯಲ್ಲಿರುವ ಅನಧಿಕೃತ ಆಸ್ತಿಗೆ ಸಂಬಂಧಿಸಿದ ಖಾತಾ ನಕಲ(ನಮೂನೆ 3)ನ್ನು ನೀಡಬೇಕು ಹಾಗೂ ವಿದ್ಯುತ್ ಸಂಪರ್ಕಕ್ಕಾಗಿ ಎನ್‍ಓಸಿ (ನಿರಾಕ್ಷೇಪಣಾ ಪತ್ರ)ಯನ್ನು ಕಡ್ಡಾಯಗೊಳಿಸಬಾರದೆಂದು ಮೂರು ಬೇಡಿಕೆಗಳನ್ನು ಸಭೆಯ ಮುಂದಿಟ್ಟರಲ್ಲದೆ ದುಪ್ಪಟ್ಟು ತೆರಿಗೆಯಿಂದ ಬಡವರು ಸಾಲಗಾರರಾಗುತ್ತಿದ್ದಾರೆ. ಎನ್‍ಓಸಿ ಇಲ್ಲದೆ ಬೆಸ್ಕಾಂನವರು ವಿದ್ಯುತ್ ಸಂಪರ್ಕ ಕಲ್ಪಿಸುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.
ಪಾಲಿಕೆಯಲ್ಲಿ ಅಧಿಕಾರಿಗಳದ್ದೇ ಕಾರುಬಾರು ನಡೆಯುತ್ತಿದೆ. ಸದಸ್ಯರ ಮಾತಿಗೆ ಕಿಂಚಿತ್ತು ಬೆಲೆಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ನಯಾಜ್, ಸೇವೆ ಮಾಡುವ ದೃಷ್ಟಿಯಿಂದ ಪಾಲಿಕೆ ಪ್ರತಿನಿಧಿಯಾಗಿ ತಮ್ಮನ್ನು ಜನರು ಆಯ್ಕೆ ಮಾಡಿದ್ದಾರೆ. ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಅವರಿಗೆ ಮುಖ ತೋರಿಸುವುದು ಹೇಗೆ? ನಮ್ಮೆಲ್ಲರ ಮಾತಿಗೆ ಬೆಲೆ ದೊರೆಯದಿದ್ದಲ್ಲಿ ಸಭೆ ನಡೆಸಲು ಅವಕಾಶ ನೀಡುವುದಿಲ್ಲವೆಂದು ಆಗ್ರಹಿಸಿದಾಗ ಎಲ್ಲ ಸದಸ್ಯರು ದನಿಯಾದರು.
ಮತ್ತೊಬ್ಬ ಸದಸ್ಯೆ ನಳಿನ ಇಂದ್ರಕುಮಾರ್ ಮಾತನಾಡಿ, ಪಾಲಿಕೆಯಲ್ಲಿ ಬಡವರಿಗೊಂದು ಸಿರಿವಂತರಿಗೊಂದು ನ್ಯಾಯ ಅನುಸರಿಸಲಾಗುತ್ತಿದೆ. ಪಾಲಿಕೆಯ ಸುಪ್ರೀಂ ಅಧಿಕಾರಿಗಳೋ, ಜನಪ್ರತಿನಿಧಿಗಳೋ ಒಂದೂ ತಿಳಿಯುತ್ತಿಲ್ಲ. ಸದಸ್ಯರ ಮೂಲಕ ಬರುವ ಸಮಸ್ಯೆಗಳಿಗೆ ಮಲತಾಯಿ ಧೋರಣೆ ಮಾಡಲಾಗುತ್ತಿದೆ. ಅಧಿಕಾರಿಗಳ ಮೂಲಕ ನಡೆಯುವ ಎಲ್ಲಾ ಕೆಲಸಗಳೂ ಸುಲಭವಾಗಿ ಕಾರ್ಯಗತವಾಗುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದು ಮೇಯರ್ ಗಮನಕ್ಕೆ ತಂದರು.
ಮೇಯರ್ ಲಲಿತಾರವೀಶ್ ಮಾತನಾಡಿ, ಸದಸ್ಯರು ಪಾಲಿಕೆಗೆ ತರುವ ಎಲ್ಲಾ ಸಮಸ್ಯೆಗಳಿಗೆ ಆದ್ಯತೆ ಮೇಲೆ ಸ್ಪಂದಿಸಿ ಬಗೆಹರಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಡಬಗ್ಗರಿಗೆ ಅನುಕೂಲವಾಗದ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಗಳಿಂದ ಯಾವುದೇ ಉಪಯೋಗವಿಲ್ಲ. ಹಿಂದಿನ ಸಭೆಯ ನಡಾವಳಿಗಳನ್ನು ಓದಿದರೆ ಮಾತ್ರ ಸಭೆ ಮುಗಿಯುವುದಿಲ್ಲ. ಜನರಿಗೆ ಅನುಕೂಲವಾಗುವಂತಹ ಸೌಲಭ್ಯಗಳ ಬಗ್ಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಂಡು ಕಾರ್ಯಗತಗೊಳಿಸಿದಾಗ ಮಾತ್ರ ಸಭೆಗಳಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತ ಭೂಬಾಲನ್ ಮಾತನಾಡಿ ಪಾಲಿಕೆ ಕೆಲಸ ಕಾರ್ಯಗಳನ್ನು ಕಾನೂನು ಚೌಕಟ್ಟಿಯಲ್ಲಿಯೇ ನಿರ್ವಹಿಸಬೇಕಾಗುತ್ತದೆ. ಪೌರಾಡಳಿತ ನಿಯಮದಂತೆ ಅನಧಿಕೃತ ಕಟ್ಟಡದ ಮೇಲೆ ವಿಧಿಸುತ್ತಿರುವ ತೆರಿಗೆ ನಿಯಮವನ್ನು ಕೈಬಿಡಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು. ಸ್ವತ್ತಿಗೆ ಸಂಬಂಧಿಸಿದಂತೆ ಆಸ್ತಿ ಮಾಲೀಕರು ಖಾತೆ ಪಡೆಯಲು ಮಧ್ಯವರ್ತಿ ಗಳಿಂದ ಮೋಸ ಹೋಗಬಾರದೆನ್ನುವ ದೃಷ್ಟಿಯಿಂದ “ಇ-ಸ್ವತ್ತು” ಪದ್ಧತಿಯನ್ನು ಸರ್ಕಾರ ಜಾರಿಗೆ ತಂದಿದ್ದು, ಇ ಸ್ವತ್ತು ಪದ್ಧತಿಯಡಿ ಅನಧಿಕೃತ ಆಸ್ತಿಗಳಿಗೆ ನಮೂನೆ 3(ಖಾತಾ ನಕಲು)ನೀಡಲು ಅವಕಾಶವಿಲ್ಲ ಎಂದು ತಿಳಿಸಿದರು.
ಸದಸ್ಯ ಕುಮಾರ್ ಮಾತನಾಡಿ, ಅಧಿಕಾರಿಗಳು ನಮಗೆ ದಾರಿತಪ್ಪಿಸುವ ಕೆಲಸ ಮಾಡುತ್ತಾರೆ. ಸಾರ್ವಜನಿಕ ಕೆಲಸ ಮಾಡಿಕೊಡಲು ವಿಳಂಬ ಮಾಡುತ್ತಿದ್ದಾರೆ. ಎನ್‍ಓಸಿ ನಿಲ್ಲಿಸಬೇಕೆಂದು ಸರ್ಕಾರದಿಂದ ಯಾವುದಾದರೂ ಮಾರ್ಗಸೂಚಿ ಬಂದಿದೆಯೇ? ಅನಧಿಕೃತ ಸ್ವತ್ತುಗಳಿಗೆ ಖಾತಾ ನಕಲು ನೀಡುವುದನ್ನು ಏಕೆ ನಿಲ್ಲಿಸಲಾಗಿದೆ ಎಂದು ಪ್ರಶ್ನಿಸಿದರು.
ಪಾಲಿಕೆ ಉಪ ಆಯುಕ್ತ ಯೋಗಾನಂದ ಮಾತನಾಡಿ, ಪ್ರಸ್ತುತ ಪಾಲಿಕೆ ವ್ಯಾಪ್ತಿಯ ಆಸ್ತಿ ಖಾತೆಗೆ ಸಂಬಂಧಿಸಿದಂತೆ ಪಾಲಿಕೆಯು ಇ-ಸ್ವತ್ತು ನಿಯಮಾವಳಿಗೊಳಪಡುವುದರಿಂದ ಸರ್ಕಾರದಿಂದ ಹೊಸದಾಗಿ 2019ರ ಆಗಸ್ಟ್ 8ರಂದು ಜಾರಿ ಯಾಗಿರುವ ಸುತ್ತೋಲೆ ಪ್ರಕಾರ ಅಧಿಕೃತ/ ಅನಧಿಕೃತ ಸ್ವತ್ತುಗಳಿಗೆ ನಮೂನೆ-3 (ಖಾತಾ ನಕಲು)ನ್ನು ನೀಡಲಾಗುತ್ತಿದೆ ಎಂದರಲ್ಲದೆ ವಿದ್ಯುತ್ ಸಂಪರ್ಕಕ್ಕಾಗಿ ನಿರಾಕ್ಷೇಪಣಾ ಪತ್ರ(ಎನ್‍ಓಸಿ)ದ ಅಗತ್ಯವಿಲ್ಲ. ಆಸ್ತಿಯ ಮಾಲೀಕರು ತಮ್ಮ ಸ್ವತ್ತಿನ ಖಾತಾ ನಕಲು ಹಾಗೂ ತೆರಿಗೆ ಪಾವತಿ ರಸೀದಿಯನ್ನು ನೇರವಾಗಿ ಬೆಸ್ಕಾಂಗೆ ಸಲ್ಲಿಸಿದಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶವಿದೆ ಎಂದರು.
ಪಾಲಿಕೆ ವ್ಯಾಪ್ತಿಯ ಎಷ್ಟೋ ಕಡೆ ಕಂಬಗಳು ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದರೂ ಬೆಸ್ಕಾಂ ಗಮನಹರಿಸುತ್ತಿಲ್ಲ. ವಾರ್ಡುಗಳಲ್ಲಿರುವ ವಿದ್ಯುತ್ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಸದಸ್ಯರೆಲ್ಲಾ ಬೆಸ್ಕಾಂ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಶಿಥಿಲಾವಸ್ಥೆಯಲ್ಲಿರುವ ಕಂಬಗಳನ್ನು ಕೂಡಲೇ ತೆರವುಗೊಳಿಸಿ ಹೊಸ ಕಂಬಗಳನ್ನು ನೆಡಬೇಕು. ವಿದ್ಯುತ್ ಅವಘಡಗಳಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಉಂಟಾದಲ್ಲಿ ನಿಮ್ಮನ್ನೇ ನೇರ ಹೊಣೆ ಮಾಡಲಾಗುವುದು ಎಂದು ಮೇಯರ್ ಬೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರಲ್ಲದೆ ಬಾರ್‍ಲೈನ್ ರಸ್ತೆಯಲ್ಲಿ ವಿದ್ಯುತ್ ಪರಿವರ್ತಕ ಬೀಳುವ ಸ್ಥಿತಿಯಲ್ಲಿದ್ದು, ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಉಪಮೇಯರ್ ರೂಪಶ್ರೀ, ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿನರಸಿಂಹರಾಜು; ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಎಸ್.ಮಂಜುಳಾ; ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ವಿ.ಎಸ್.ಗಿರಿಜಾ; ಸದಸ್ಯರು, ಪಾಲಿಕೆ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.