ತುಮಕೂರು

ತುಮಕೂರು ನಗರದ ಮಿನಿವಿಧಾನಸೌಧದ ಹಿಂಭಾಗ ತುಮಕೂರು ತಾಲ್ಲೂಕು ಕಚೇರಿಗೆ ಹೊಂದಿಕೊಂಡಂತೆ ಇರುವ ಸಕಾಲ/ಭೂಮಿ ಕೇಂದ್ರವು ಮತ್ತೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿದ್ದು, ಕಾರ್ಯಾರಂಭ ಮಾಡಿದೆ.
ಕಳೆದ ಒಂದು ತಿಂಗಳ ಹಿಂದೆ ಭಾನುವಾರದಂದು ವಿದ್ಯುತ್ ಶಾರ್ಟ್‍ಸಕ್ರ್ಯೂಟ್ ನಿಂದ ಇದ್ದಕ್ಕಿದ್ದಂತೆ “ಸಕಾಲ/ಭೂಮಿ ಕೇಂದ್ರ”ದಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕಟ್ಟಡ ಸುಟ್ಟು ಕರಕಲಾಗಿತ್ತು. ಅಲ್ಲಿದ್ದ ಕಂಪ್ಯೂಟರ್‍ಗಳು, ಪೀಠೋಪಕರಣಗಳು, ವಿದ್ಯುತ್ ಸಂಪರ್ಕಜಾಲ ಮತ್ತಿತರ ವಸ್ತುಗಳು ಸುಟ್ಟು ಕರಕಲಾಗಿದ್ದವು.
ಇದ್ದಕ್ಕಿದ್ದಂತೆ ಈ ಕೇಂದ್ರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಖಾತೆ ಬದಲಾವಣೆ, ಪಹಣಿ, ಎಂ.ಆರ್. ಮೊದಲಾದ ಹಲವು ಸೇವೆಗಳನ್ನು ಪಡೆಯಲು ತೀವ್ರ ಸಮಸ್ಯೆ ಎದುರಾಯಿತು. ಈ ಸೇವೆಗಳಿಗಾಗಿ ಪಕ್ಕದ ತಾಲ್ಲೂಕು ಕಚೇರಿಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಯಿ ತಾದರೂ, ತಾಂತ್ರಿಕ ಕಾರಣಗಳಿಂದ ಪೂರ್ಣ ಪ್ರಮಾಣದಲ್ಲಿ ಸೇವೆ ನೀಡಲು ಆಗಿರಲಿಲ್ಲ.
ಈ ಮಧ್ಯೆ ಕೇಂದ್ರದ ಕಟ್ಟಡವನ್ನು ಪುನರ್ ರೂಪಿಸಲು ಹಾಗೂ ಸಜ್ಜುಗೊಳಿಸುವ ಕಾರ್ಯ ಭರದಿಂದ ನಡೆಯಿತು. ಇಡೀ ಕಟ್ಟಡದ ವಿದ್ಯುದೀಕರಣವನ್ನು ಹೊಸದಾಗಿ ಮಾಡಲಾಯಿತು. ಇಡೀ ಕಟ್ಟಡ ಬೆಂಕಿಯಿಂದ ಕರಕಲಾಗಿದ್ದ ಕಾರಣ, ಹೊಸದಾಗಿ ಬಣ್ಣ ಬಳಿಯಲಾಯಿತು. ಕಿಟಕಿಗಳನ್ನು ಸರಿಪಡಿಸಲಾಯಿತು. ಪೀಠೋಪಕರಣ ಹಾಗೂ ಪಾರ್ಟಿಷನ್ ಕೆಲಸಗಳನ್ನೂ ಕೈಗೊಳ್ಳಲಾಯಿತು. ಹೊಸದಾಗಿ ಕಂಪ್ಯೂಟರ್ ಗಳನ್ನು ಮತ್ತು ಇತರೆ ಪೂರಕ ಉಪಕರಣಗಳನ್ನು ವ್ಯವಸ್ಥೆ ಮಾಡಲಾಯಿತು.
ಗಾಳಿ-ಬೆಳಕಿಗೆ ಅನುಕೂಲವಾಗುವಂತೆ ಹೊಸದಾಗಿ ವೆಂಟಿಲೇಟರ್ ವ್ಯವಸ್ಥೆ ಮಾಡಲಾಯಿತು. ಇವೆಲ್ಲ ಕಾರ್ಯಗಳನ್ನು ಕ್ಷಿಪ್ರವಾಗಿ ಕೈಗೊಂಡು ಕೇಂದ್ರವನ್ನು ಸಂಪೂರ್ಣವಾಗಿ ಸಜ್ಜುಗೊಳಿಸಿದ್ದು, ಸೆ.11 ರಿಂದ ಕೇಂದ್ರವು ಎಂದಿನಂತೆ ಕಾರ್ಯಾರಂಭ ಮಾಡಲಾರಂಭಿಸಿದೆ.
ಓರ್ವ ಶಿರಸ್ತೇದಾರ್‍ರವರ ಮೇಲುಸ್ತುವಾರಿಯಲ್ಲಿ ಕಾರ್ಯನಿರ್ವಹಿಸುವ ಈ ಕೇಂದ್ರದಲ್ಲಿ ಪ್ರಸ್ತುತ 11 ಜನ ಸಿಬ್ಬಂದಿ ಇದ್ದಾರೆ. ಅರ್ಜಿ ಸ್ವೀಕಾರಕ್ಕೆ ಪ್ರತ್ಯೇಕ ಕೌಂಟರ್‍ಗಳಿವೆ.
ಸರ್ಕಾರಿ ಕಚೇರಿಯಂತೆಯೇ ನಿಗದಿತ ಕಾಲಾವಧಿüಯಲ್ಲಿ ಕೇಂದ್ರವು ಕಾರ್ಯನಿರ್ವಹಿಸಲಿದೆ. ಮೂಲಗಳು ತಿಳಿಸಿದ ಪ್ರಕಾರ ಶುಕ್ರವಾರ ಬೆಳಗ್ಗೆ ಈ ಕೇಂದ್ರದಲ್ಲಿ ಖಾತೆ ಬದಲಾವಣೆಯ 103 ಅರ್ಜಿಗಳು ಮತ್ತು ಪೋಡು ಕುರಿತಾದ 19 ಅರ್ಜಿಗಳು ಬಾಕಿ ಇದ್ದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
