ಚಿತ್ರದುರ್ಗ:

ಜಿಲ್ಲೆಯಲ್ಲಿರುವ ಸರ್ಕಾರದ ಎಲ್ಲಾ ಶಾಲೆಗಳಿಗೆ ಉಚಿತವಾಗಿ ನೀಡಲಾಗುವ ಶೂ ಮತ್ತು ಸಾಕ್ಸ್ ಗಳು ಉತ್ತಮ ಗುಣಮಟ್ಟದ ಬ್ರಾಂಡೆಡ್ ಉತ್ಪನ್ನವಾಗಿರಬೇಕು. ಯಾವುದೇ ಅಥವಾ ಯಾರದೇ ಪ್ರಭಾವಕ್ಕೆ ಒಳಗಾಗಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಅವರು ತಾಕೀತು ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತ್ ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ವರ್ಷ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆಯಲ್ಲಿ ವಿಳಂಬ ಮಾಡಲಾಗಿದೆ. 8 ನೇ ತರಗತಿಯ ಮಕ್ಕಳಿಗೆ ಬೈಸಿಕಲ್‍ಗಳನ್ನು ಅರ್ಧ ಶೈಕ್ಷಣಿಕ ವರ್ಷ ಮುಗಿಯುತ್ತ ಬಂದಿದ್ದರೂ ಇನ್ನೂ ವಿತರಿಸಿಲ್ಲ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ ನೀಡುವ ಯೋಜನೆ ಜಾರಿಗೆ ಬಂದಿದ್ದರೂ, ಇದುವರೆಗೂ ವಿತರಣೆ ಆಗಿಲ್ಲ. ಈ ರೀತಿಯಾದರೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಯಾಗುತ್ತದೆ.
ಸರ್ಕಾರದ ಯೋಜನೆಗಳು ಸಕಾಲದಲ್ಲಿ ಅನುಷ್ಠಾನಗೊಳ್ಳದಿದ್ದಲ್ಲಿ ಆ ಯೋಜನೆಗಳಿಂದಾಗುವ ಉಪಯೋಗವಾದರೂ ಏನು? ಎಂದು ಪ್ರಶ್ನಿಸಿದರು ಬರುವ ವರ್ಷಗಳಲ್ಲಿಯಾದರೂ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಶಾಲೆಗಳು ಪ್ರಾರಂಭವಾದ ಕೂಡಲೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳ ವಿತರಣೆಯಾಗುವಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಶಾಲಾ ಮಕ್ಕಳಿಗೆ ವಿತರಣೆಯಾಗುವ ಶೂ ಮತ್ತು ಸಾಕ್ಸ್‍ಗಳು ಕಡ್ಡಾಯವಾಗಿ ಗುಣಮಟ್ಟದ್ದು ಹಾಗೂ ಬ್ರಾಂಡೆಡ್ ಕಂಪನಿಗಳದ್ದಾಗಿರಬೇಕು ಎಂದು ಡಿಡಿಪಿಐ ಗೆ ಸೂಚನೆ ನೀಡಿದರು.
ಅನುದಾನ ಬಳಕೆಗೆ ಡಿಸೆಂಬರ್ ಗಡುವು :
ಕೃಷಿ, ತೋಟಗಾರಿಕೆ, ವಿವಿಧ ಅಭಿವೃದ್ಧಿ ನಿಗಮಗಳು ಸೇರಿದಂತೆ ನಾನಾ ಯೋಜನೆಗಳ ಅನುಷ್ಠಾನ ಇಲಾಖೆಗಳು ಆಯಾ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಅನುದಾನವನ್ನು ಅದೇ ಉದ್ದೇಶಕ್ಕೆ ಬಳಕೆ ಮಾಡಬೇಕು. ಈಗಾಗಲೆ ಆರ್ಥಿಕ ವರ್ಷದ ಅರ್ಧ ದಾರಿಯನ್ನು ಕ್ರಮಿಸಿದ್ದು, ಇದುವರೆಗಿನ ಪ್ರಗತಿ ಪರಿಶೀಲಿಸಿದಾಗ, ಸಾಧನೆ ತೃಪ್ತಿಕರವಾಗಿಲ್ಲ ಎಂದು ಅಧ್ಯಕ್ಷರು ಅಸಮಧಾನ ವ್ಯಕ್ತಪಡಿಸಿದರು
ಆಯಾ ಇಲಾಖೆಗಳು ನಿಗದಿಪಡಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಬಿಡುಗಡೆ ಮಾಡಿರುವ ಅನುದಾನವನ್ನು ಬಳಸಿಕೊಂಡು, ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಬೇಕು.
ಕಾಮಗಾರಿಗಳಿದ್ದಲ್ಲಿ ನಿಗದಿತ ಕಾಲಮಿತಿಯೊಳಗೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಪಶುಸಂಗೋಪನೆ ಇಲಾಖೆಯವರು ಯೋಜನೆಯಡಿ ಫಲಾನುಭವಿಗಳಿಗೆ ಕೊಡುವ ಗಿರಿರಾಜ ಕೋಳಿಗಳು ಕೊಟ್ಟ ಎರಡು ದಿನಕ್ಕೆ ಸಾಯುತ್ತವೆ. ಇಂತಹ ಯೋಜನೆ ಏಕೆ ಬೇಕು. ಕೊಡುವುದಾದರೆ ಗುಣಮಟ್ಟದ ಆರೋಗ್ಯವಂತ ಕೋಳಿಮರಿಗಳನ್ನು ನೀಡಿ. ಅವುಗಳ ಪೋಷಣೆ ಹಾಗೂ ಆಹಾರ ನೀಡಿಕೆ ಕುರಿತು ಸೂಕ್ತ ತರಬೇತಿ ನೀಡಿ ಎಂದು ಸೂಚನೆ ನೀಡಿದರು.
ಶ್ರದ್ಧಾಂಜಲಿ ವಾಹನಕ್ಕೆ ಪ್ರಸ್ತಾವನೆ :
ಆರ್ಥಿಕವಾಗಿ ಹಿಂದುಳಿದವರು, ಬಡವರ ಶವವನ್ನು ಸಾಗಿಸಲು ಸದ್ಯ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಆರೋಗ್ಯ ಇಲಾಖೆಯಡಿ ಒಂದು ವಾಹನ ಮಾತ್ರ ಲಭ್ಯವಿದೆ. ಹೀಗಾಗಿ ಕನಿಷ್ಟ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಒಂದು ಶ್ರದ್ಧಾಂಜಲಿ ವಾಹನ ಇರುವಂತಾಗಬೇಕು. ಇದೀಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಶಾಸಕರೇ ಆರೋಗ್ಯ ಸಚಿವರಾಗಿರುವುದರಿಂದ, ಅವರ ಮನವೊಲಿಸಿ, ಈ ಯೋಜನೆಗೆ ಅನುಮೋದನೆ ಪಡೆಯಲಾಗುವುದು. ಹೀಗಾಗಿ ಕೂಡಲೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಜಿ.ಪ. ಅಧ್ಯಕ್ಷರು ಡಿಹೆಚ್‍ಒ ಡಾ. ಪಾಲಾಕ್ಷ ಅವರಿಗೆ ಸೂಚನೆ ನೀಡಿದರು.
ಕೃಷಿ ಇಲಾಖೆ ಚೆಕ್‍ಡ್ಯಾಂ ಗೆ ಅಸಮಾಧಾನ :
ಉದ್ಯೋಗಖಾತ್ರಿ ಯೋಜನೆಯಡಿ ಕೃಷಿ ಇಲಾಖೆಯವರು ಬದುಗಳ ನಿರ್ಮಾಣ, ಮಣ್ಣು ಸಂರಕ್ಷಣೆ ಹೀಗೆ ಕೃಷಿ ಚಟುವಟಿಕೆಗಳಿಗೆ ಬೇಕಾದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಆದರೆ ಜಿಲ್ಲೆಯ ಕೆಲವೆಡೆ ಕೃಷಿ ಇಲಾಖೆ ಹಾಗೂ ಅರಣ್ಯ ಇಲಾಖೆಯವರು ಚೆಕ್ ಡ್ಯಾಂ ನಿರ್ಮಿಸಿರುವುದಕ್ಕೆ ತೀವ್ರ ಜಿ.ಪಂ.ಸಿಇಓ ಸತ್ಯಭಾಮ ಅಸಮಾಧಾನ ವ್ಯಕ್ತಪಡಿಸಿದರು
ಚೆಕ್ ಡ್ಯಾಂ ನಿರ್ಮಿಸಲು ನಿಮಗೆ ಅನುಮೋದನೆ ಯಾರು ಕೊಟ್ಟರು, ಕೃಷಿ ಅಧಿಕಾರಿಗಳು ರೈತೋಪಯೋಗಿ ಚಟುವಟಿಕೆ ಕೈಗೊಳ್ಳಬೇಕೇ ಹೊರತು ಉದ್ಯಮಿಗಳಾಗಬಾರದು. ಅನುಮೋದನೆ ಇಲ್ಲದೆ ಚೆಕ್ ಡ್ಯಾಂ ನಿರ್ಮಿಸಿರುವ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ, ಅಮಾನತುಗೊಳಿಸಿ ಎಂದು ಸೂಚಿಸಿದರು. ಸಾಮಾಜಿಕ ಅರಣ್ಯ ಇಲಾಖೆಯವರು ಜಿಲ್ಲೆಯಲ್ಲಿ 4.23 ಲಕ್ಷ ಗಿಡಗಳನ್ನು ನೆಟ್ಟಿದ್ದಾರೆ. ಬರೀ ಗಿಡ ನೆಟ್ಟು ಸುಮ್ಮನಾದರೆ ಉಪಯೋಗವಿಲ್ಲ. ಅವುಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಎನ್.ಪಿ. ಸುಶೀಲಮ್ಮ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
