ತುಮಕೂರು

ಜಿಲ್ಲೆಯಲ್ಲಿ ಅಗತ್ಯ ಸಿಬ್ಬಂದಿಗಳಿಲ್ಲದೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಾಂತ್ವನ ಕೇಂದ್ರಗಳನ್ನು ರದ್ದುಪಡಿಸಿ ನಿಯಮಾನುಸಾರ ಹೊಸ ಕೇಂದ್ರಗಳನ್ನು ತೆರೆಯಲು ಪ್ರಸ್ತಾವನೆ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಾಂತ್ವನ ಯೋಜನೆ, ಸ್ತ್ರೀಶಕ್ತಿ ಯೋಜನೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಡೆಯುತ್ತಿರುವ ಸಾಂತ್ವನ ಕೇಂದ್ರಗಳಲ್ಲಿ ಕಡ್ಡಾಯವಾಗಿ ಒಬ್ಬ ಸಮಾಲೋಚಕರು, ಮೂರು ಮಂದಿ ಸಮಾಜಸೇವಾ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು. ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕೇಂದ್ರಕ್ಕೆ ಬರುವ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪರಿಹಾರ ದೊರೆಯಬೇಕೇ ಹೊರತು ನಿರಾಶರಾಗಿ ಹೋಗುವಂತಿರಬಾರದು. ಶೋಷಣೆಗೊಳಗಾದ ಮಹಿಳೆಯರ ಸಮಾಲೋಚನೆ ನಡೆಸಲು ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿ ಇರಬೇಕು.
ಸಮಾಲೋಚನೆಗಾಗಿ ಮಹಿಳಾ ಸಿಬ್ಬಂದಿಗಳನ್ನೇ ನಿಯೋಜಿಸಬೇಕು. ಅಗತ್ಯ ಸೌಲಭ್ಯ ಹಾಗೂ ಸಿಬ್ಬಂದಿಗಳಿಲ್ಲದ ಸಾಂತ್ವನ ಕೇಂದ್ರಗಳನ್ನು ರದ್ದುಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಾಂತ್ವನ ಕೇಂದ್ರಗಳನ್ನು ನಡೆಸುವ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.
ಕುಣಿಗಲ್, ಮಧುಗಿರಿ ಹಾಗೂ ತುರುವೇಕೆರೆ ಸಾಂತ್ವನ ಕೇಂದ್ರಗಳಲ್ಲಿ ಸಿಬ್ಬಂದಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ ಕೇಳಿ ಬಂದ ದೂರಿನನ್ವಯ ಅಧಿಕಾರಿಗಳಿಗೆ ಪರಿಶೀಲನೆ ನಡೆಸಲು ಕಳೆದ ಸಭೆಯಲ್ಲಿ ಸೂಚಿಸಲಾಗಿತ್ತು. ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಕೇಳಿದಾಗ ಮಾಹಿತಿ ಒದಗಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶನ ಎಸ್. ನಟರಾಜ್ ಸದರಿ ಕೇಂದ್ರಗಳಿಗೆ ಪೊಲೀಸ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿದ್ದಾರೆ.
ವರದಿಯನುಸಾರ ಕುಣಿಗಲ್, ಮಧುಗಿರಿ ಹಾಗೂ ತುರುವೇಕೆರೆ ಸಾಂತ್ವನ ಕೇಂದ್ರಗಳಲ್ಲಿ ಅಧಿಕಾರಿಗಳ ಭೇಟಿ ಸಂದರ್ಭದಲ್ಲಿ ಕೇಂದ್ರದಲ್ಲಿ ದಾಖಲಾಗುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರತ್ಯೇಕ ದಾಖಲೆ, ಕಡತ/ವಹಿಗಳನ್ನು ನಿರ್ವಹಿಸಿರುವುದಿಲ್ಲ. ಸಿಬ್ಬಂದಿಗಳೂ ಸಹ ನಿಗಧಿತ ವೇಳೆಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲದಿರುವುದು ಕಂಡು ಬಂದಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಶುಭಾ ಕಲ್ಯಾಣ್ ಸಾಂತ್ವನ ಕೇಂದ್ರದ ಕಾರ್ಯಚಟುವಟಿಕೆ ಬಗ್ಗೆ ಎಲ್ಲ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿ ಕಾರಿಗಳು ಮಾಸಿಕ ತಾಯಂದಿರ ಸಭೆ, ಅಂಗನವಾಡಿ ಕಾರ್ಯಕರ್ತೆಯರ ಸಭೆ, ಗ್ರಾಮ ಸಭೆಗಳನ್ನು ನಡೆಸಿ ಮಹಿಳೆಯರಿಗೆ ಅರಿವು ಮೂಡಿಸಬೇಕೆಂದರಲ್ಲದೆ ಮಹಿಳಾ ಸಹಾಯವಾಣಿ ಸಂಖ್ಯೆ 1091 ಮೂಲಕ ಸ್ವೀಕರಿಸಿದ ಕರೆಗಳ ತಾಲೂಕುವಾರು ಮಾಹಿತಿ ಪಡೆದರು. ಮಹಿಳೆಯರು ಎಚ್ಚೆತ್ತುಕೊಳ್ಳುವಂತೆ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕಾಯ್ದೆ ಕುರಿತು ಜಿಲ್ಲೆಯಲ್ಲಿರುವ ಎಲ್ಲ ಲಂಬಾಣಿ ತಾಂಡ, ಗಾರ್ಮೆಂಟ್ಸ್ ಹಾಗೂ ಮಹಿಳೆಯರು ಕಾರ್ಯ ನಿರ್ವಹಿಸುವ ಮತ್ತಿತರ ಸ್ಥಳಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಬೇಕೆಂದು ನಿರ್ದೇಶನ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಂಬಿಕಾ ಮಾತನಾಡಿ ಜಿಲ್ಲೆಯಲ್ಲಿ 2019ರ ಏಪ್ರಿಲ್ 1 ರಿಂದ ಜೂನ್ 30ರವರೆಗಿನ ಮೊದಲ ತ್ರೈಮಾಸಿಕದಲ್ಲಿ ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದ 459 ಪ್ರಕರಣಗಳು ಸಾಂತ್ವನ ಕೇಂದ್ರದಲ್ಲಿ ದಾಖಲಾಗಿವೆ. ಕಳೆದ ತ್ರೈಮಾಸಿಕದಲ್ಲಿ ಬಾಕಿಯಿದ್ದ 95 ಹಾಗೂ 459 ಪ್ರಕರಣ ಸೇರಿ ಒಟ್ಟು 554 ಪ್ರಕರಣಗಳ ಪೈಕಿ 392 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸರ್ಕಾರದ ನಿರ್ದೇಶನದಂತೆ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ, ಬಾಲ್ಯವಿವಾಹ ನಿಷೇಧ ಹಾಗೂ ಸಮಗ್ರ ಮಕ್ಕಳ ರಕ್ಷಣಾ ಸಮಿತಿಗಳನ್ನು ವಿಲೀನಗೊಳಿಸಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 10970 ಸ್ತ್ರೀಶಕ್ತಿಗುಂಪುಗಳು ರಚನೆಯಾಗಿ ಚಟುವಟಿಕೆ ನಡೆಸುತ್ತಿವೆ. ಈ ತ್ರೈಮಾಸಿಕದಲ್ಲಿ ಯಾವುದೇ ಸ್ತ್ರೀಶಕ್ತಿ ಗುಂಪುಗಳು ರಚನೆಯಾಗಿಲ್ಲ ಎಂದು ತಿಳಿಸಿದರು.
ನಂತರ ಮಾತನಾಡಿದ ನಟರಾಜ್ ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ, ಬಹುಪತ್ನಿತ್ವ, ಅತ್ಯಾಚಾರ, ಬಾಲ್ಯವಿವಾಹ, ಲೈಂಗಿಕ ಶೋಷಣೆ, ವಿಚ್ಛೇದನೆ, ಮತ್ತಿತರ ಮಹಿಳಾ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳಾ ಸಹಾಯವಾಣಿ 1091 ಮೂಲಕ ಸ್ವೀಕರಿಸುವ ಕರೆಗಳು ನೇರವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಯುಕ್ತರ ಕಚೇರಿ ಗಮನಕ್ಕೆ ಹೋಗುತ್ತಿರುವುದರಿಂದ ಜಿಲ್ಲೆಯಿಂದ ಸ್ವೀಕರಿಸಿದ ಕರೆಗಳ ಮಾಹಿತಿ ನಮಗೆ ದೊರೆಯುತ್ತಿಲ್ಲ.
ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರಕರಣಗಳಿಗೆ ಮಾತ್ರ ಸೀಮಿತಗೊಳಿಸಿ ಹೊಸ ಮಹಿಳಾ ಸಹಾಯವಾಣಿ ಸಂಖ್ಯೆ 181ನ್ನು ಸ್ಥಾಪಿಸಲಾಗಿದ್ದು, ಶೋಷಣೆಗೊಳಗಾದ ಮಹಿಳೆಯರು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ದೂರನ್ನು ದಾಖಲಿಸಬಹುದಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು, ಸಾಂತ್ವನ ಕೇಂದ್ರದ ಸಿಬ್ಬಂದಿಗಳು, ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








