ಕೆಂದ್ರದ ತಪ್ಪು ನೀತಿಗಳಿಂದ ದೇಶಕ್ಕೆ ಸಂಕಷ್ಟ

ದಾವಣಗೆರೆ :

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದಾಗಿ, ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದ್ದು, ಇಡೀ ರಾಷ್ಟ್ರ ಸಂಕಷ್ಟಕ್ಕೆ ತುತ್ತಾಗಿದೆ ಎಂದು ಭಾರತ ಕಮ್ಯೂನಿಷ್ಟ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

     ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರವು ಮೊದಲ ಬಾರಿ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದಾಗ ಬಿಜೆಪಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ, ಕೇಂದ್ರ ಸರ್ಕಾರ ಕೈಗೊಂಡ ನೋಟು ಅಮಾನ್ಯೀಕರಣ, ಜಿಎಸ್‍ಟಿ, ಭಾರತೀಯ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ ಸೇರಿದಂತೆ ಇತರೆ ತಪ್ಪು ನೀತಿಗಳಿಂದಾಗಿ ಹೊಸ ಉದ್ಯೋಗ ಸೃಷ್ಟಿಸುವದಿರಲಿ, ಈಗಿರುವ ಉದ್ಯೋಗಿಗಳೇ ನಿರುದ್ಯೋಗಿಗಳಾಗುವ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

      ದೇಶ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಕಾರಣಕ್ಕೆ ಬಟ್ಟೆ ಖರೀದಿಸಲು ಜನರ ಬಳಿ ಹಣ ಇಲ್ಲದ ಕಾರಣ ಪ್ರಸ್ತುತ ಸಿದ್ಧ ಉಡುಪು ತಯಾರಿಕ ಕೈಗಾರಿಕೆಗಳಲ್ಲಿ ಕಾರ್ಯ ಸ್ಥಗಿತವಾಗುವ ಪರಿಸ್ಥಿತಿಯಲ್ಲಿದ್ದು, ರಾಜ್ಯವೊಂದರಲ್ಲಿಯೇ 3 ಲಕ್ಷ ಜನ ಗಾರ್ಮೆಂಟ್ಸ್ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

     ದಾವಣಗೆರೆ ಜಿಲ್ಲೆಯಲ್ಲಿರುವ 15 ಸಿದ್ಧ ಉಡುಪು ತಯಾರಿಕ ಘಟಕಗಳಲ್ಲಿ ಈಗಾಗಲೇ ಮೂರು ಘಟಕಗಳು ಸ್ಥಗಿತಗೊಂಡಿದ್ದು, ನೂರಾರು ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿ ಪಾಲಾಗಿದ್ದಾರೆಂದು ದೂರಿದರು.ಕೂದಲಿನಿಂದ ಉಪ ಉತ್ಪನ್ನಗಳನ್ನು ತಯಾರಿಸುತ್ತಿದ್ದ ಕರ್ನಾಟಕದ 30 ಕೈಗಾರಿಕೆಗಳಲ್ಲಿ ಈಗಾಗಲೇ 28 ಕಂಪನಿಗಳು ಕಾರ್ಯಸ್ಥಗಿತಗೊಳಿಸಿರುವ ಕಾರಣ ಸಾವಿರಾರರು ಕಾರ್ಮಿಕರು ಬೀದಿಪಾಲಾಗಿದ್ದಾರೆ.

      ದೇಶದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಕುಂಠಿತಗೊಂಡಿರುವುದರಿಂದ ಕಟ್ಟಡ ಕಾರ್ಮಿಕರು ಸಹ ಕೆಲಸ ಕಳೆದುಕೊಂಡು ತಮ್ಮನ್ನೇ ನೆಚ್ಚಿಕೊಂಡಿರುವ ಹೆಂಡತಿ, ಮಕ್ಕಳನ್ನು ಸಾಕಲಾಗದಷ್ಟು ಕಡು ಕಷ್ಟಕ್ಕೆ ತುತ್ತಾಗಿದ್ದಾರೆ. ಒಟ್ಟಿನಲ್ಲಿ ದೇಶದಲ್ಲಿ ಸಣ್ಣ ಮತ್ತು ಮಧ್ಯವ ವರ್ಗದ ಕೈಗಾರಿಕೆಗಳಿಗೆ ಕುತ್ತು ಬಂದಿದೆ ಎಂದು ಆಪಾದಿಸಿದರು.

     ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭಾರತೀಯ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆಯಿಂದಾಗಿ ಆಟೋ ಮೊಬೈಲ್ ಮತ್ತು ವಾಹನ ತಯಾರಿಕ ಕಂಪೆನಿಗಳಾದ ಮಾರುತಿ, ಟಾಟಾ ಮೋಟಾರ್ಸ್, ಹೋಂಡಾ ಕಾರ್ಸ್, ಫೋರ್ಡ್, ಅಶೋಕ ಲೈಲಾಂಡ್ ಸೇರಿದಂತೆ ಹಲವು ವಾಹನ ತಯಾರಿಕ ಸಂಸ್ಥೆಗಳು ಸಹ ವಾಹನ ಖರೀದಿ ಕುಸಿದಿರುವುದರಿಂದ ವಾಹನ ಉತ್ಪಾದನೆಯನ್ನು ತಗ್ಗಿಸಿವೆ. ಹೀಗಾಗಿ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ತಿಂಗಳಿಗೆ 15 ದಿನ ಮಾತ್ರ ಕೆಲಸ ಮಾಡಿ ವೇತನ ಪಡೆಯುತ್ತಿದ್ದಾರೆ.

      ಹೀಗೆ ಉದ್ಯೋಗಿಗಳೇ ಕೆಲಸ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದರೆ, ಇನ್ನೊಂದೆಡೆ ದೇಶದ ಯುವಜನತೆ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ. ಆದರೂ ಸಹ ಕೇಂದ್ರ ಸರ್ಕಾರ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

      ಕೆಲ ತಿಂಗಳ ಹಿಂದೆ ಸುರಿದ ಮಹಾ ಮಳೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭೂಮಿ, ಜಾನುವಾರು, ಮನೆ-ಮಠಗಳು ಕೊಚ್ಚಿಕೊಂಡು ಹೋಗಿವೆ. ಹೀಗಾಗಿ ನೆರೆ ಸಂತ್ರಸ್ತರು ಎಲ್ಲವನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಹೀಗಾಗಿ ಇದನ್ನು ರಾಷ್ಟ್ರೀಯ ವಿಪ್ಪತ್ತು ಎಂಬುದಾಗಿ ಪರಿಗಣಿಸಿ, ನೆರೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಬೇಕೆಂದು ದೇಶದ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಒತ್ತಾಯಿಸಿವೆ. ಅಲ್ಲದೇ, ಸ್ವತಃ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಮೂರ್ನಾಲ್ಕು ಬಾರಿ ಸೂಕ್ತ ಪರಿಹಾರ ನೀಡುವಂತೆ ಪ್ರಧಾನಿಯವರಲ್ಲಿ ಮನವಿ ಮಾಡಿದರೂ ಸಹ ಕೇಂದ್ರ ಸರ್ಕಾರ ಕಣ್ಣು ತೆರೆದು ನೋಡಿಲ್ಲ. ಹೀಗಾಗಿ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಆಪಾದಿಸಿದರು.

     ನೆರೆ ಪ್ರದೇಶದಲ್ಲಿ ಆಗಿರುವ ಅನಾಹುತದ ಬಗ್ಗ ವೈಮಾನಿಕ ಸಮೀಕ್ಷೆ ನಡೆಸಿ, ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವರುಗಳಾದ ನಿರ್ಮಲ ಸೀತಾರಾಮನ್, ಅಮಿತ್ ಶಾ ಪ್ರಧಾನಿಗಳಿಂದ ಸೂಕ್ತ ಪರಿಹಾರ ಕೊಡಿಸುವಲ್ಲಿ ವಿಫಲರಾಗಿದ್ದಾರೋ, ಇಲ್ಲವೋ ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡುವ ಧೈರ್ಯವೇ ಅವರುಗಳಿಗೆ ಇಲ್ಲವೋ ಎಂದು ಪ್ರಶ್ನಸಿದ ಅವರು, ರಾಜ್ಯದಿಂದ ಗೆದ್ದು ಸಂಸತ್‍ಗೆ ಹೋಗಿರುವ ಬಿಜೆಪಿಯ 25 ಮಂದಿ ಸಂಸದರು ಸಹ ರಾಜ್ಯಕ್ಕೆ ನ್ಯಾಯಕೊಡಿಸುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದರು.

      ತಕ್ಷಣವೇ ಕೇಂದ್ರ ಸರ್ಕಾರ ಆರ್ಥಿಕ ಹಿಂಜರಿತದಿಂದ ಸಂಕಷ್ಟದಲ್ಲಿರುವ ಉದ್ಯಮಿಗಳ ಹಾಗೂ ನೆರೆ ಸಂತ್ರಸ್ತರ ನೆರವಿಗೆ ಧಾವಿಸಬೇಕು. ಇಲ್ಲದಿದ್ದರೆ, ಈ ಎಲ್ಲಾ ಅಂಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಜನಾಂದೋಲನ ರೂಪಿಸಿ, ಕೇಂದ್ರದ ಜನವಿರೋಧಿ ನೀತಿಯ ವಿರುದ್ಧ ಜನರನ್ನು ಬೀದಿಗೆ ಇಳಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು  ಸುದ್ದಿ ಗೋಷ್ಠಿಯಲ್ಲಿ ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್, ಸಹ ಕಾರ್ಯದರ್ಶಿಗಳಾದ ಆವರಗೆರೆ ಚಂದ್ರು, ಎಚ್.ಜಿ.ಉಮೇಶ್, ಎನ್.ಟಿ.ಬಸವರಾಜ್, ಐರಣಿ ಚಂದ್ರು, ರಾಮಪ್ಪ, ಗದಿಗೇಶ್ ಮತ್ತಿತರರು ಹಾಜರಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap