ಬೆಂಗಳೂರು
ನೂತನ ಕೈಗಾರಿಕಾ ನೀತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಹೆಚ್ಚು ರಿಯಾಯಿತಿ ನೀಡಿ ಪ್ರೋತ್ಸಾಹ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.ನೆನೆಗುದಿಗೆ ಬಿದ್ದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಲಾಗುವ ಶೆಡ್, ಫ್ಲಾಟ್ ಮತ್ತು ಮಳಿಗೆಗಳ ಮೀಸಲಾತಿಯನ್ನು ಶೇ. ೫೦ ರಿಂದ ಶೇ. ೭೫ಕ್ಕೆ ಹೆಚ್ಚಿಸುವುದನ್ನು ರಾಜ್ಯದಲ್ಲಿ ೨೦೧೯ -೨೦ನೇ ಸಾಲಿನಲ್ಲಿ ಅನುಷ್ಠಾನಕ್ಕೆ ತರಲಿರುವ ನೂತನ ಕೈಗಾರಿಕಾ ನೀತಿಯಲ್ಲಿ ತರಲಾಗುವುದು ಎಂದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ರಾಜ್ಯ ಎಸ್‌ಸಿ, ಎಸ್‌ಟಿ ಉದ್ಯಮಿದಾರರ ಕೈಗಾರಿಕೆಗಳ ಸಂಘ (ದಲಿತ ಉದ್ದಿಮೆದಾರರ ಸಂಘ) ಏರ್ಪಡಿಸಿದ್ದ ಸರ್ಕಾರದ ಸವಲತ್ತುಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಮಂಜೂರಾತಿ ನೀಡುವ ಹಂತದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡಲಾಗುವುದು ಎಂದು ತಿಳಿಸಿದರು.
ಕೆಎಸ್‌ಎಫ್‌ಸಿ ಹಣಕಾಸು ಸಂಸ್ಥೆಯಿಂದ ಸಾಲ ನೀಡುವಾಗ ನಿವೇಶನವನ್ನೇ ಭದ್ರತೆಯನ್ನಾಗಿ ಇಟ್ಟುಕೊಂಡು ಸಾಲ ವಿತರಿಸಬೇಕೆಂದು ಸಂಸ್ಥೆಯ ಹಣಕಾಸು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಸ್.ಇ.ಪಿ. ಮತ್ತು ಟಿ.ಎಸ್.ಪಿ. ಹಣವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುವುದು. ೩೦,೪೪೭ ಕೋಟಿ ರೂ. ಹಣಕ್ಕೆ ಅನುಮೋದನೆ ನೀಡಲಾಗಿದೆ.ಗ್ರಾಮೀಣ ಭಾಗದಲ್ಲಿ ಕೈಗಾರಿಕಾ ಘಟಕಗಳಿಗೆ ಹೆಚ್ಚು ಉತ್ತೇಜನ ನೀಡಲಾಗುವುದು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸವಲತ್ತುಗಳ ಮಾಹಿತಿ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಸ್.ಸಿ, ಎಸ್.ಟಿ. ಜನಾಂಗದ ಉದ್ದಿಮೆದಾರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಬಿಜೆಪಿ ಸರ್ಕಾರವು ಈ ಜನಾಂಗದ ಬೇಡಿಕೆಗಳನ್ನು ಈಡೇರಿಸಲು ಪ್ರತಿಪಕ್ಷದವನಾಗಿ ನಿಮಗೆ ದನಿಗೂಡಿಸುವುದಾಗಿ ತಿಳಿಸಿದರು. ಎಸ್.ಸಿ. ಮತ್ತು ಎಸ್.ಟಿ. ಜನಾಂಗದ ಗುತ್ತಿಗೆದಾರರಿಗೆ ೫೦ ಲಕ್ಷ ರೂ. ವರೆಗೆ ಮೀಸಲಾತಿ ಒದಗಿಸುವುದನ್ನು ಅನುಷ್ಠಾನಕ್ಕೆ ತಂದಿದ್ದೇನೆ. ಅದು ಹೊಸಸರ್ಕಾರದಲ್ಲಿ ಒಂದು ಕೋಟಿ ರೂ. ಗಳಿಗೆ ಹೆಚ್ಚಳವಾಗಬೇಕೆಂದು ಒತ್ತಾಯಿಸಿದರು.
ಕೆಎಸ್‌ಎಫ್‌ಸಿ ಹಣಕಾಸು ಸಂಸ್ಥೆ ಜೊತೆಗೆ, ರಾಷ್ಟ್ರೀಕೃತ ಬ್ಯಾಂಕ್‌ಗಳೂ ಕೂಡ ೧೦ ಕೋಟಿ ರೂ. ವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕೆಂದು ಆದೇಶ ಹೊರಡಿಸಿದ್ದಾಗಿ ಅವರು ತಿಳಿಸಿದರು. ಮುಂದಿನ 10 ವರ್ಷಗಳವರೆಗೆ ಎಸ್.ಇ.ಪಿ ಮತ್ತು ಟಿ.ಎಸ್.ಪಿ. ಅನುದಾನ ೬೦ ರಿಂದ ೭೦ ಸಾವಿರ ಕೋಟಿ ರೂ. ವರೆಗೆ ಆಗಬಹುದು. ಇದರಿಂದ ಈ ವರ್ಗದ ಜನರು, ಸಬಲರಾಗಬೇಕೆಂದು ಹೇಳಿದರು.
ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ, ಮಹೇಶ್, ಮಾಜಿ ಶಾಸಕ ಡಿ.ಎಸ್. ವೀರಯ್ಯ ಸೇರಿದಂತೆ, ಮತ್ತಿತರರು ಉಪಸ್ಥಿತರಿದ್ದರು. ಸಂಘದ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸನ್ ಅವರು ಪ್ರಸ್ತಾವಿಕ ಭಾಷಣ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ