ಅಂಡರ್‍ಪಾಸ್‍ನಲ್ಲಿ ಆಗಲಿದೆ ಜನದಟ್ಟಣಿ

ತುಮಕೂರು
ವಿಶೇಷ ವರದಿ :ಆರ್.ಎಸ್.ಅಯ್ಯರ್

      ತುಮಕೂರು ನಗರದಲ್ಲಿ ರೈಲ್ವೆ ಸುರಕ್ಷತೆ ಕಾರಣದಿಂದ ನಗರದ ವ್ಯಾಪ್ತಿಯಲ್ಲಿ ರೈಲ್ವೆ ಹಳಿಯ ಇಕ್ಕೆಲಗಳಲ್ಲೂ ಕಾಂಪೌಂಡ್ ಗೋಡೆ ನಿರ್ಮಿಸುವ ಕಾರ್ಯವನ್ನು ರೈಲ್ವೆ ಇಲಾಖೆಯು  ಭರದಿಂದ ಆರಂಭಿಸಿದೆ. ಶೆಟ್ಟಿಹಳ್ಳಿ ಗೇಟ್  ಭಾಗದಲ್ಲಿ ಕಾಂಪೌಂಡ್ ನಿರ್ಮಾಣವಾದೊಡನೆ, ಅಲ್ಲೇ ಇರುವ ಅಂಡರ್‍ಪಾಸ್‍ನಲ್ಲಿ ಈಗಾಗಲೇ ಇರುವ ವಾಹನ ಸಂಚಾರದ ಒತ್ತಡದೊಡನೆ, ಹೊಸದಾಗಿ ಜನದಟ್ಟಣಿಯೂ ಸೇರ್ಪಡೆಗೊಳ್ಳುವ ಕಳವಳ ಈಗ ಉದ್ಭವಿಸಿದೆ.
      ನಗರದ ರೈಲು ನಿಲ್ದಾಣದಿಂದ ಪೂರ್ವಕ್ಕೆ ಅಂದರೆ ಬೆಂಗಳೂರು ದಿಕ್ಕಿನಲ್ಲಿ ಈಗಾಗಲೇ ರೈಲ್ವೆ ಹಳಿಯ ಎರಡೂ ಬದಿಗಳಲ್ಲಿ, ರೈಲ್ವೆ ಇಲಾಖೆಗೆ ಸೇರಿದ ಜಾಗದ ಕೊನೆಯಲ್ಲಿ ಆಳೆತ್ತರದ ಕಾಂಪೌಂಡ್ ನಿರ್ಮಾಣದ ಕಾಮಗಾರಿ ಆರಂಭವಾಗಿದೆ. ಸರ್ವೋದಯ ಶಾಲೆಯವರೆಗೂ ಕಾಂಪೌಂಡ್ ನಿರ್ಮಾಣವಾಗಿದ್ದು, ಅಲ್ಲಿಂದ ಶೆಟ್ಟಿಹಳ್ಳಿ ಗೇಟ್ ಅಂಡರ್‍ಪಾಸ್ ಭಾಗದ ಕಡೆಗೆ ನಿರ್ಮಾಣದ ಪ್ರಕ್ರಿಯೆ ಮುಂದುವರೆದಿದೆ.
      ಕಾಮಗಾರಿ ನಿಟ್ಟಿನಲ್ಲಿ ದಿನಗಣನೆ ಆರಂಭಿಸಿದೆ. ಕಾಂಪೌಂಡ್ ನಿರ್ಮಾಣವಾದರೆ, ಈವರೆಗೆ ಸಲೀಸಾಗಿ ರೈಲ್ವೆಹಳಿ ದಾಟಿ ಅತ್ತಿಂದಿತ್ತ ಸಂಚರಿಸುತ್ತಿದ್ದಂತೆ ಇನ್ನು ಮುಂದೆ ಸಾಧ್ಯವಾಗದು. ಇದು ಈಗಾಗಲೇ ಶೆಟ್ಟಿಹಳ್ಳಿಗೇಟ್ ಆಸುಪಾಸಿನ ನಾಗರಿಕರಲ್ಲಿ ಕಳವಳಕ್ಕೆ ಎಡೆಮಾಡಿದೆ.
     ಶೆಟ್ಟಿಹಳ್ಳಿಗೇಟ್ ಮೊದಲಿನಿಂದಲೂ ಉತ್ತರ ಮತ್ತು ದಕ್ಷಿಣ ಭಾಗದ ಬಡಾವಣೆಗಳಿಗೆ ಒಂದು ಸೇತುವೆಯಂತಿದೆ. ಅಂಡರ್‍ಪಾಸ್ ನಿರ್ಮಾಣವಾದ ಬಳಿಕ ವಾಹನ ಸಂಚಾರ ಸುಲಲಿತವಾಗಿದೆ. ಆದರೆ ಪಾದಚಾರಿಗಳು ಮಾತ್ರ ಮೇಲ್ಭಾಗದ ರೈಲ್ವೆ ಹಳಿ ದಾಟಿಕೊಂಡೇ ಸಂಚರಿಸುವುದು ಹಾಗೆಯೇ ಮುಂದುವರೆದಿದೆ. ಏಕೆಂದರೆ ಅದು ಪಾದಚಾರಿಗಳಿಗೆ ತುಂಬ ಸಲೀಸಾದುದು. ಶೆಟ್ಟಿಹಳ್ಳಿಗೇಟ್‍ನ ದಕ್ಷಿಣ ಭಾಗದ ವಿಜಯನಗರ, ರಾಘವೇಂದ್ರನಗರ, ಸಪ್ತಗಿರಿ ಬಡಾವಣೆ, ಮಾರುತಿನಗರ ಆಸುಪಾಸಿನ ಜನರು ನಡೆದುಕೊಂಡೇ ಉತ್ತರ ಭಾಗದ ಎಸ್.ಐ.ಟಿ. ಬಡಾವಣೆ ಮತ್ತು ಸೋಮೇಶ್ವರ ಬಡಾವಣೆ ಕಡಗೆ ಬರುವುದು ಸಹಜ.
 
       ಅದೇ ರೀತಿ ಈ ಭಾಗದ ಜನರು ಸಹ ನಡೆದುಕೊಂಡೇ ಆ ಭಾಗಕ್ಕೂ ತೆರಳುವುದು ಸಹಜ. ಗೇಟ್‍ನ ದಕ್ಷಿಣದಲ್ಲಿ ರಾಘವೇಂದ್ರ ಸ್ವಾಮಿಗಳ ಮಠ ಇದ್ದರೆ, ಉತ್ತರಕ್ಕೆ ಆಂಜನೇಯ ಸ್ವಾಮಿ ದೇಗುಲ ಇದೆ. ಇವರೆಡಕ್ಕೂ ಜನರು ಬಂದು ಹೋಗುತ್ತಾರೆ. ದಕ್ಷಿಣದ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ತರಕಾರಿ ಖರೀದಿಗೆ ಸಂಜೆ ವೇಳೆ ಎಲ್ಲೆಡೆಗಳಿಂದ ಜನ ಬರುತ್ತಾರೆ. ಇವರಲ್ಲಿ ಪಾದಚಾರಿಗಳ ಸಂಖ್ಯೆ ದೊಡ್ಡದಾಗಿಯೇ ಇದ್ದು, ಪಾದಚಾರಿಗಳು ಬಹುತೇಕ ರೈಲು ಹಳಿಯನ್ನು ದಾಟಿಕೊಂಡು ಹೋಗುತ್ತಿರುತ್ತಾರೆ. ಆದರೆ ಈಗ ಇಲ್ಲಿ ರೈಲ್ವೆ ಜಾಗದಲ್ಲಿ ಕಾಂಪೌಂಡ್ ನಿರ್ಮಾಣವಾದರೆ, ಪಾದಚಾರಿಗಳು ವಿಧಿಯಿಲ್ಲದೆ ಅನಿವಾರ್ಯವಾಗಿ ಅಂಡರ್‍ಪಾಸ್ ದಾರಿಯನ್ನೇ ಅವಲಂಬಿಸಬೇಕಾಗುತ್ತದೆ. ಇದೇ ಈಗ ತಲೆಯೆತ್ತಲಿರುವ ಹೊಸ ಸಮಸ್ಯೆ ಆಗಲಿದೆ.
      ಅಂಡರ್‍ಪಾಸ್ ಈಗಂತೂ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಎರಡೂ ದಿಕ್ಕುಗಳಿಂದ ದಿನಪೂರ್ತಿ ವಾಹನ ಸಂಚಾರ ಇದ್ದೇ ಇರುತ್ತದೆ. ಸೈಕಲ್‍ನಿಂದ ಹಿಡಿದು, ಸಿಟಿ ಬಸ್‍ವರೆಗೆ ಎಲ್ಲ ತರಹದ ವಾಹನಗಳೂ ರಭಸದಿಂದ ನುಗ್ಗುತ್ತವೆ. ಆದರೆ ಅಂಡರ್‍ಪಾಸ್‍ನ್ನು ಆರಂಭಗೊಂಡ ದಿನದಿಂದ ಈವರೆಗೆ ಪಾದಚಾರಿಗಳು ಉಪಯೋಗಿಸಿಕೊಂಡಿರುವುದು ಮಾತ್ರ ಬಹುತೇಕ ಕ್ಷೀಣ. ವಾಹನ ಭರಾಟೆ, ಧೂಳು, ಮಳೆ ಬಂದಾಗ ಕೆಸರು ಇತ್ಯಾದಿ ಸಮಸ್ಯೆಗಳುಳ್ಳ ಅಂಡರ್‍ಪಾಸ್‍ಗಿಂತ ಮೇಲ್ಭಾಗದ ರೈಲು ಹಳಿ ದಾಟಿ ತೆರಳುವುದೇ ಸಲೀಸೆಂದು ಪಾದಚಾರಿಗಳು ಭಾವಿಸಿರುವುದರಿಂದ, ರೈಲ್ವೆಹಳಿ ದಾಟುವುದು ರೂಢಿಯಾಗಿಬಿಟ್ಟಿದೆ. ಆದರೆ ಇನ್ನು ಮುಂದೆ ಅಂಡರ್‍ಪಾಸ್ ಒಳಗಿನಿಂದಲೇ ಸಂಚರಿಸಬೇಕಾದ ಸಮಯ ಸನ್ನಿಹಿತವಾಗುತ್ತಿದೆ.
ಅಂಡರ್‍ಪಾಸ್‍ನಲ್ಲಿ ಸಮಸ್ಯೆ
     ಅಂಡರ್‍ಪಾಸ್‍ನಲ್ಲಿ ಈಗಾಗಲೇ ಹಲವು ಸಮಸ್ಯೆಗಳಿವೆ. ಇಡೀ ಅಂಡರ್‍ಪಾಸ್ ಧೂಳುಮಯವಾಗಿದೆ. ಇಲ್ಲಿನ ವಿದ್ಯುತ್ ದೀಪಗಳು ಇದ್ದೂ ಇಲ್ಲದಂತಾಗಿವೆ. ಇವುಗಳಿಂದ ಹೆಚ್ಚು ಬೆಳಕೇ ಇರುವುದಿಲ್ಲ. ಎರಡೂ ಬದಿ ಫುಟ್‍ಪಾತ್ ಇದ್ದು, ಇದರಲ್ಲಿ ಹಿರಿಯ ನಾಗರಿಕರು ನಡೆದು ಹೋಗುವುದು ಸುಲಭಸಾಧ್ಯವಲ್ಲ. ಪಾದಚಾರಿಗಳ ಸುರಕ್ಷತೆಗೆ ರೈಲಿಂಗ್ (ಕಂಬಿ) ಇಲ್ಲ. ಅಲ್ಲದೆ ನಡು ಭಾಗದಲ್ಲಿ ಮಳೆ ನೀರೆತ್ತಲು ಫುಟ್‍ಪಾತ್‍ನಲ್ಲೇ ಪಂಪು ಮೋಟಾರ್ ಅಳವಡಿಸಿದ್ದು, ಆ ಭಾಗದಲ್ಲಿ ಪಾದಚಾರಿಗಳಿಗೆ ಅಡಚಣೆ ಆಗುತ್ತದೆ. ಫುಟ್‍ಪಾತ್ ಬಿಟ್ಟು ಅಕಸ್ಮಾತ್ ರಸ್ತೆಗಿಳಿದರೆ ವಾಹನ ದಟ್ಟಣೆಯಿಂದಾಗಿ ಅಪಾಯ ಖಚಿತ. ಅಪಘಾತಗಳುಂಟಾಗುವ ಆತಂಕ ಅಧಿಕವಾಗಿಯೇ ಇದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link