ತುಮಕೂರು

ತುಮಕೂರು ನಗರದಲ್ಲಿ ತಲೆದೋರಿರುವ ಬೀದಿನಾಯಿ ಹಾವಳಿಯನ್ನು ನಿಯಂತ್ರಿಸುವ ಸಲುವಾಗಿ ತುಮಕೂರು ಮಹಾನಗರ ಪಾಲಿಕೆಯಿಂದ ಶೀಘ್ರವೇ ಕಾರ್ಯಾಚರಣೆ ಆರಂಭವಾಗಲಿದೆ.
ಬೀದಿನಾಯಿಯನ್ನು ಹಿಡಿದು, ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿ, ಶೂಶ್ರೂಷೆ ನೀಡಿ ಲಸಿಕೆ ಹಾಕಿ ಮತ್ತೆ ಅವುಗಳ ಸ್ವಸ್ಥಾನಕ್ಕೆ ತಂದು ಬಿಡುವ ಪ್ರಕ್ರಿಯೆ ಬಗ್ಗೆ ಮಹಾನಗರ ಪಾಲಿಕೆಯು ಕರೆದಿದ್ದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಟೆಂಡರ್ ಪಡೆದಿರುವ ಗುತ್ತಿಗೆದಾರರಿಗೆ ಕಾರ್ಯಾದೇಶವನ್ನು ನೀಡಬೇಕಿದೆ. ಇದಾದ ಬಳಿಕ ಮುಂದಿನ ಸುಮಾರು ಒಂದು ವಾರದೊಳಗೆ ಆ ಗುತ್ತಿಗೆದಾರರು ಕಾರ್ಯಾಚರಣೆ ಪ್ರಾರಂಭಿಸಲಿದ್ದಾರೆ.
ಕಾನೂನಿನ ಪ್ರಕಾರ ಬೀದಿನಾಯಿ ಹಾವಳಿ ನಿಯಂತ್ರಿಸುವ ಸಲುವಾಗಿ ಮಹಾನಗರ ಪಾಲಿಕೆಯು ಪಶುಸಂಗೋಪನಾ ಇಲಾಖೆಯ ತಾಂತ್ರಿಕ ಸಲಹೆ ಕೋರಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆಯು ಮೇಲ್ಕಂಡ ಪ್ರಕ್ರಿಯೆ ನಡೆಸಲು ಗಂಡು ನಾಯಿಗೆ ತಲಾ 1,400 ರೂ. ಹಾಗೂ ಹೆಣ್ಣು ನಾಯಿಗೆ ತಲಾ 1,650 ರೂ. ವೆಚ್ಚ ತಗಲುವುದೆಂದು ತಿಳಿಸಿತ್ತು. ಈ ತಾಂತ್ರಿಕ ವರದಿ ಆಧರಿಸಿ ಮಹಾನಗರ ಪಾಲಿಕೆಯು ಇತ್ತೀಚೆಗೆ ಟೆಂಡರ್ ಆಹ್ವಾನಿಸಿತ್ತು. ಮಹಾರಾಷ್ಟ್ರದ ಒಂದು ಸಂಸ್ಥೆ ಹಾಗೂ ಬೆಂಗಳೂರಿನ ಚೇತಕ್ ಅನಿಮಲ್ ವೆಲ್ಫೇರ್ ಸೊಸೈಟಿ ಎಂಬ ಎರಡು ಸಂಸ್ಥೆಗಳು ಟೆಂಡರ್‍ನಲ್ಲಿ ಭಾಗವಹಿಸಿದ್ದವು. ಇದರಲ್ಲಿ ಬೆಂಗಳೂರಿನ ಸಂಸ್ಥೆಯು ಕಡಿಮೆ ದರವನ್ನು ನಮೂದಿಸಿದ್ದುದರಿಂದ ಆ ಸಂಸ್ಥೆಗೇ ಟೆಂಡರ್ ಆಗಿದೆ.
ಈ ಸಂಸ್ಥೆಯು ಗಂಡು ನಾಯಿಗೆ ತಲಾ 1,100 ರೂ. ಹಾಗೂ ಹೆಣ್ಣು ನಾಯಿಗೆ ತಲಾ 1,200 ರೂ. ವೆಚ್ಚ ಆಗುವುದೆಂದು ಟೆಂಡರ್‍ನಲ್ಲಿ ತಿಳಿಸಿದೆ. ಈ ಮೊತ್ತವು ಮತ್ತೊಂದು ಸಂಸ್ಥೆಯ ದರಕ್ಕಿಂತ ಕಡಿಮೆ ಇದ್ದುದರಿಂದ ಈ ಸಂಸ್ಥೆಗೇ ಟೆಂಡರ್ ಆಗಿದ್ದು, ಪಾಲಿಕೆಯಿಂದ ಕಾರ್ಯಾದೇಶ ನೀಡುವುದೊಂದು ಮಾತ್ರ ಬಾಕಿ ಉಳಿದಿದೆ.
“ಟೆಂಡರ್ ಆಗಿರುವ ಸಂಸ್ಥೆಯು ತನ್ನದೇ ಆದ ತಂಡದೊಂದಿಗೆ ಮುಂದಿನ ಒಂದು ವರ್ಷದ ಅವಧಿಗೆ ನಿರಂತರವಾಗಿ ನಗರಾದ್ಯಂತ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಜರುಗಿಸಲಿದೆ. ಕಾನೂನಿನ ಪ್ರಕಾರ ಬೀದಿನಾಯಿಯನ್ನು ಹಿಡಿಯಬೇಕು. ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ (ಎಸಿಬಿ) ಮಾಡಿಸಬೇಕು. ಒಂದೆರಡು ದಿನ ಆರೈಕೆ ಮಾಡಿ, ಲಸಿಕೆ ಹಾಕಬೇಕು. ಬಳಿಕ ಅದನ್ನು ಎಲ್ಲಿಂದ ಹಿಡಿಯಲಾಗಿತ್ತೋ ಅದೇ ಸ್ಥಳಕ್ಕೆ ತಂದು ಬಿಡಬೇಕಾಗುತ್ತದೆ” ಎಂದು ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ “ಪ್ರಜಾಪ್ರಗತಿ”ಗೆ ತಿಳಿಸಿದ್ದಾರೆ.
ವಾನರ ಹಾವಳಿ ನಿಯಂತ್ರಣ
ಈ ಮಧ್ಯ ಇತ್ತೀಚೆಗೆ ಮಹಾನಗರ ಪಾಲಿಕೆಯು ನಗರದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕರಿಗೆ ತಲೆನೋವಾಗಿದ್ದ ವಾನರ ಹಾವಳಿಯನ್ನು ನಿಯಂತ್ರಿಸುವಲ್ಲೂ ಕ್ರಮ ಜರುಗಿಸಿದೆ. ಪಾಲಿಕೆಯಿಂದ ನಿಯೋಜಿತವಾಗಿದ್ದ ಆಂಧ್ರಪ್ರದೇಶದ ಮದನಪಲ್ಲಿಯ ತಂಡವೊಂದು ಸುಮಾರು 684 ಕೋತಿಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದು, ಬಳಿಕ ಅವನ್ನು ದೂರದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದೆ.
ಕೋತಿಗಳ ಹಾವಳಿ ಬಗ್ಗೆ ಸಾರ್ವಜನಿಕರಿಂದ ಒಂದೇ ಸಮನೆ ದೂರುಗಳಿದ್ದವು. ಪಾಲಿಕೆಯ ಸಭೆಗಳಲ್ಲೂ ಸದಸ್ಯರು ಕ್ರಮಕ್ಕೆ ಆಗ್ರಹಿಸುತ್ತಿದ್ದರು. ಆದರೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಪ್ರಸ್ತುತ ಆ ಬಗ್ಗೆ ಪಾಲಿಕೆಯು ಮೊದಲ ಬಾರಿಗೆ ಕ್ರಮ ಜರುಗಿಸಿದೆ. ಆಂಧ್ರದಿಂದ ತಂಡವೊಂದನ್ನು ಪಾಲಿಕೆ ಕರೆಸಿದೆ.
ಆ ತಂಡದ ಮೂಲಕ ನಗರದ ಬಟವಾಡಿ, ಎಸ್.ಐ.ಟಿ. ಬಡಾವಣೆ, ಗಂಗೋತ್ರಿ ರಸ್ತೆ, ಶ್ರೀನಗರ, ಗಾಂಧಿನಗರ ಮೊದಲಾದ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡಿ, ಕೋತಿಗಳನ್ನು ಸೆರೆಹಿಡಿಯಲಾಗಿದೆ. ಸದರಿ ತಂಡದವರು ಹಣ್ಣು-ಹಂಪಲನ್ನು ಬೃಹತ್ ತಂತಿ ಬೋನಿನೊಳಗಿಟ್ಟು ಕೋತಿಗಳನ್ನು ಆಕರ್ಷಿಸುತ್ತಿದ್ದರು. ಆಹಾರವನ್ನು ಅರಸುತ್ತ ಕೋತಿಗಳು ಬೋನಿನೊಳಕ್ಕೆ ಬಂದರೆ ಅವನ್ನು ಸೆರೆಹಿಡಿಯಲಾಗುತ್ತಿತ್ತು. ಬಳಿಕ ಅವನ್ನು ಸುರಕ್ಷಿತವಾಗಿ ದೂರಕ್ಕೆ ಒಯ್ದು, ಅವುಗಳಿಗೆ ಆಹಾರ-ನೀರು ಲಭಿಸುವಂತಹ ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಬರುತ್ತಿದ್ದರು. ಪಾಲಿಕೆಯ ಈ ಕ್ರಮವು ಒಂದು ಹಂತದಲ್ಲಿ ಕೋತಿಗಳ ಹಾವಳಿಯನ್ನು ತಕ್ಕಮಟ್ಟಿಗೆ ನಿಯಂತ್ರಿಸಿದೆಯೆಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
