ತುರುವೇಕೆರೆ
ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.ಸುಮಾರು ತಿಂಗಳಿಂದ ಸಮರ್ಪಕ ಮಳೆ ಬೀಳದೆ ರೈತರು ಕಂಗಾಲಾಗಿದ್ದರು. ಕೆಲದಿನಗಳು ಬಿದ್ದಿದ್ದ ಅಲ್ಪ ಸ್ವಲ್ಪ ಮಳೆಗೆ ರೈತ ತನ್ನ ಹೊಲದಲ್ಲಿ ರಾಗಿ, ಅವರೆ, ಜೋಳ, ತೊಗರಿ ಬೆಳೆಗಳನ್ನು ಬಿತ್ತಿದ್ದರು. ಕೆಲದಿನಗಳಿಂದ ಮಳೆ ಬಾರದೆ ಬೆಳೆಗಳು ಒಣಗಿ ರೈತರನ್ನು ಆತಂಕಕ್ಕೀಡುಮಾಡಿತ್ತು.
ಆದರೆ ಭಾನುವಾರ ರಾತ್ರಿ ಸುರಿದ ಉತ್ತಮ ಮಳೆ ರೈತರ ಆತಂಕವನ್ನು ದೂರಮಾಡಿ ರಾಗಿ ಬಿತ್ತನೆ ಮಾಡಿರುವ ರೈತರು ಖುಷಿ ಪಡುವಂತೆ ಮಾಡಿದೆ. ಪಟ್ಟಣದ ಸುತ್ತಮುತ್ತಿನ ಹಳ್ಳ ಕೊಳ್ಳಗಳು ಸಹ ತುಂಬಿ ಹರಿಯುತ್ತಿವೆ. ತಾಲ್ಲೂಕಿನ ಮಾದಿಹಳ್ಳಿ ಹಳ್ಳ ಸಹ ಮೈತುಂಬಿ ಹರಿಯುತ್ತಿದ್ದು ಕೆಲ ಹೊತ್ತು ರಸ್ತೆ ಬಂದ್ ಆಗಿತ್ತು. ಅರಳಿಕೆರೆಯಿಂದ ಮಾದಿಹಳ್ಳಿ ಕಡೆಗೆ ತೆರಳಲು ಸಂಚಾರ ಬಂದ್ ಆಗಿದ್ದು ದ್ವಿಚಕ್ರ, ಕಾರುಗಳು ತೆರಳದಂತೆ ಗ್ರಾಮಸ್ಥರು ತಡೆದು ಕೇವಲ ಸರ್ಕಾರಿ, ಖಾಸಗಿ ಬಸ್ಗಳನ್ನು ಮಾತ್ರ ಬಿಡಲಾಯಿತು. ಬಸ್ ಸಂಚಾರ ಪಟ್ಟಣದ ಬಾಣಸಂದ್ರ ರಸ್ತೆಯ ಪಶು ಆಸ್ಪತ್ರೆ ಮುಂಭಾಗದಲ್ಲಿ ಚರಂಡಿ ಕಟ್ಟಿಕೊಂಡು ರಸ್ತೆಯಲ್ಲಿ ಕೆರೆಯಂತೆ ನೀರು ನಿಂತು ಸಂಚಾರಕ್ಕೆ ತೊಡಕಾಗಿತ್ತು.
ಮಳೆ ಪ್ರಮಾಣ :
ತುರುವೇಕೆರೆ 163.5. ದಂಡಿನಶಿವರ 40.2 ಮಾಯಸಂದ್ರ 45.6 ದಬ್ಬೇಘಟ್ಟ 10.8 ಸಂಪಿಗೆ 45.0 ಮಿ.ಮೀ. ಮಳೆ ಮಾಪನದಲ್ಲಿ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ