ಭೂಪಾಲನ್ ವರ್ಗಾವಣೆಗೆ ಹೊಸ ತಿರುವು..!

 ವರ್ಗಾವಣೆ ರದ್ದು ಕೋರಿ ಪಿ.ಎಂ.ಗೆ ಜನರಿಂದ ಪತ್ರ, ಸಿ.ಎಂ.ಗೆ ಶಾಸಕ ಪತ್ರ
ತುಮಕೂರು
    ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಪಾಲನ್ ಅವರನ್ನು ರಾಜ್ಯ ಬಿ.ಜೆ.ಪಿ. ಸರ್ಕಾರ ಹಠಾತ್ತನೆ ವರ್ಗಾವಣೆ ಮಾಡಿರುವುದು ಮಂಗಳವಾರ ಹೊಸ ತಿರುವು ಪಡೆದುಕೊಂಡಿತು. 
     ಅವರ ವರ್ಗಾವಣೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ತುಮಕೂರು ನಗರದ ಸಾರ್ವಜನಿಕರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಆಂದೋಲನ ಆರಂಭಿಸಿದ್ದರೆ, ಇತ್ತ ಜನಾಕ್ರೋಶವನ್ನು ಗ್ರಹಿಸಿದ ತುಮಕೂರು ನಗರದ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ವಾಟ್ಸಾಪ್ ಆಂದೋಲನ
      ತುಮಕೂರು ನಗರದ ಸಾರ್ವಜನಿಕರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ ಪತ್ರವನ್ನು ಸಿದ್ಧಪಡಿಸಿ ಅದನ್ನು ಸೋಷಿಯಲ್ ಮೀಡಿಯಾ ಆದ ವಾಟ್ಸಾಪ್ ಮೂಲಕ ಆಂದೋಲನದ ರೀತಿ ಪ್ರಚಾರ ಮಾಡಲಾರಂಭಿಸಿದ್ದಾರೆ. 
      ತುಮಕೂರಿನಿಂದ ದಕ್ಷ ಐ.ಎ.ಎಸ್. ಅಧಿಕಾರಿ ಟಿ.ಭೂಪಾಲನ್ ಅವರ ವರ್ಗಾವಣೆ ರದ್ದು ಮಾಡಿ, ನಗರ ಪಾಲಿಕೆ ಆಯುಕ್ತರಾಗಿ ಹಾಗೂ ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿಯೊಂದಿಗೆ ಮುಂದುವರೆಸಬೇಕು ಎಂದು ಜನಾಗ್ರಹದಲ್ಲಿ ಕೋರಲಾಗಿದೆಯಲ್ಲದೆ, ಯೋಜನೆಗಳನ್ನು ರೂಪಿಸಲು ಉತ್ತಮ ಜನಪ್ರತಿನಿಧಿಗಳು ಎಷ್ಟು ಮುಖ್ಯವೋ, ಅವುಗಳನ್ನು ಅನುಷ್ಠಾನಕ್ಕೆ ತರಲು ಉತ್ತಮ ಅಧಿಕಾರಿಗಳೂ ಅಷ್ಟೇ ಅವಶ್ಯಕ ಹಾಗೂ ಅನಿವಾರ್ಯ ಎಂದು ಟಾಂಗ್ ನೀಡಲಾಗಿದೆ.
     ಸ್ಥಳೀಯ ರಾಜಕಾರಣಿಗಳು ಅದರಲ್ಲೂ ಮಹಾನಗರಪಾಲಿಕೆ ಸದಸ್ಯರು ಹಾಗೂ ಗುತ್ತಿಗೆದಾರರು ಭೂಪಾಲನ್ ವಿರುದ್ಧ ಅಸಮಾಧಾನಗೊಂಡಿದ್ದು ವರ್ಗಾವಣೆಗೆ ಸರ್ಕಾರದ ಮೇಲೆ ಪದೇ ಪದೇ ಒತ್ತಡ ತರುತ್ತಿದ್ದಾರೆ. ಭೂಪಾಲನ್ ಅವರ ಕಾರ್ಯಕ್ಷಮತೆಯ ಅರಿವಿದ್ದರೂ ಸ್ಥಳೀಯ ಶಾಸಕರು ಹಾಗೂ ಸಂಸದರು ಅವರ ವರ್ಗಾವಣೆಯನ್ನು ವಿರೋಧಿಸದೆ ಲಾಬಿಗೆ ಮಣಿದಿದ್ದಾರೆ ಎಂದು ನೇರ ಆರೋಪ ಮಾಡಲಾಗಿದೆ.
     ಉತ್ತಮ ಯೋಜನೆಗಳ ಅನುಷ್ಠಾನ ಕಾರ್ಯದಲ್ಲಿ ಭ್ರಷ್ಟಾಚಾರ ಹತ್ತಿಕ್ಕುವ ಕೆಲಸದಲ್ಲಿ ನಿರತರಾಗಿರುವ ಈ ದಕ್ಷ ಅಧಿಕಾರಿಗೆ ಸರ್ಕಾರ ಪ್ರೋತ್ಸಾಹ ನೀಡುವ ಬದಲು, ಸ್ಥಳೀಯ ರಾಜಕಾರಣಿಗಳು ಹಾಗೂ ಗುತ್ತಿಗೆದಾರರ ಲಾಬಿಗೆ ಮಣಿದು ಅವರನ್ನು ಬೆಳಗಾವಿಗೆ ವರ್ಗಾಯಿಸಿದೆ ಎಂಬ ಆಕ್ರೋಶವನ್ನು ಈ ಪತ್ರದಲ್ಲಿ ವ್ಯಕ್ತಪಡಿಸಲಾಗಿದೆ.
    ನಗರದ ಹಿತದೃಷ್ಟಿಯಿಂದ ಸ್ಮಾರ್ಟ್‍ಸಿಟಿ ಯೋಜನೆ ಅಂತಿಮವಾಗಿ ಮುಗಿದು ಕಾರ್ಯರೂಪಕ್ಕೆ ಬರುವವರೆಗೂ ಭೂಪಾಲನ್ ಅವರನ್ನು ತುಮಕೂರು ಸ್ಮಾರ್ಟ್‍ಸಿಟಿ ಯೋಜನೆಯ ಎಂ.ಡಿ. ಮತ್ತು ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ಮುಂದುವರೆಸಬೇಕು ಎಂದು ಆಗ್ರಹಪಡಿಸಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಭಾರೀ ಜನಾಕ್ರೋಶ
    ಇದರ ನಡುವೆ ಭೂಪಾಲನ್ ಅವರ ವರ್ಗಾವಣೆ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಬೆಳಕಿಗೆ ಬರುತ್ತಿದ್ದಂತೆ ತುಮಕೂರಿನ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಅದೇ ಸೋಷಿಯಲ್ ಮೀಡಿಯಾಗಳಲ್ಲಿ ಜನಾಕ್ರೋಶ ಭುಗಿಲೆದ್ದಿತು. ಜನರು ಆವೇಶದಿಂದಲೇ ಪ್ರತಿಕ್ರಿಯಿಸತೊಡಗಿದರು. ಈ ವಿಷಯ ಒಂದು ರೀತಿ ವೈರಲ್ ಆಗಿಹೋಯಿತು.
ಸಿ.ಎಂ.ಗೆ ಶಾಸಕ ಪತ್ರ
    ಜನಾಕ್ರೋಶ ಭುಗಿಲೇಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ತುಮಕೂರು ನಗರದ ಬಿಜೆಪಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಭೂಪಾಲನ್ ಅವರ ವರ್ಗಾವಣೆ ರದ್ದುಗೊಳಿಸಿ ಹಾಲಿ ಸ್ಥಳದಲ್ಲಿಯೇ ಆಯುಕ್ತರಾಗಿ ಮುಂದುವರೆಸುವಂತೆ ಕೋರುವ ಪರಿಸ್ಥಿತಿ ಉದ್ಭವಿಸಿದೆ. ಇದೀಗ ಈ ಪತ್ರವೂ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿಬಿಟ್ಟಿದೆ.
ಭೂಪಾಲನ್ ಅವರ ವರ್ಗಾವಣೆಯಿಂದ ಮಹಾನಗರ ಪಾಲಿಕೆ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗಿದೆ.
   ಇವರು ಸಾರ್ವಜನಿಕ ಹಿತದೃಷ್ಟಿಯಿಂದ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಇವರ ಬಗ್ಗೆ ಸಾರ್ವಜನಿಕರಿಂದ ಒಳ್ಳೆಯ ಅಭಿಪ್ರಾಯ ಕೇಳಿಬರುತ್ತಿದೆ. ಆದ್ದರಿಂದ ಇವರ ಸೇವೆ ನನ್ನ ಕ್ಷೇತ್ರಕ್ಕೆ ಅವಶ್ಯಕವಾಗಿರುತ್ತದೆ. ಆದ್ದರಿಂದ ಅವರ ವರ್ಗಾವಣೆಯನ್ನು ತಕ್ಷಣ ರದ್ದುಗೊಳಿಸಿ ಪಾಲಿಕೆಯ ಆಯುಕ್ತರನ್ನಾಗಿ ಮುಂದುವರೆಸಬೇಕೆಂದು ಶಾಸಕ ಜ್ಯೋತಿಗಣೇಶ್ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದಾರೆ.
ಪಾಲಿಕೆಯಲ್ಲಿ ಅಸಮಾಧಾನ
    ಈ ಮಧ್ಯೆ ಮಂಗಳವಾರ ಸಹ ತುಮಕೂರು ಮಹಾನಗರ ಪಾಲಿಕೆ ಕಚೇರಿಯ ಅಧಿಕಾರಿಗಳು ಮತ್ತು ನೌಕರರ ವಲಯದಲ್ಲಿ ಭೂಪಾಲನ್ ಅವರ ವರ್ಗಾವಣೆಗೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ಇರುವುದು ಕಂಡುಬಂದಿತು. ನಿಯಮಾನುಸಾರ 2 ವರ್ಷಗಳು ಪೂರೈಸಿದ್ದರೆ ಅದು ಬೇರೆ ವಿಷಯ. ಆದರೆ ಅವರು ಪಾಲಿಕೆ ಆಯುಕ್ತರಾಗಿ ಬಂದು ಇನ್ನೂ ಕೇವಲ ಎಂಟು ತಿಂಗಳುಗಳಾಗಿವೆಯಷ್ಟೇ.
 
    ಅಷ್ಟರಲ್ಲೇ ಇವರನ್ನು ವರ್ಗಾಯಿಸಲಾಗಿದೆ. ಅದೂ ಒಳ್ಳೆಯ ಕೆಲಸ ಮಾಡಿದ್ದಕ್ಕೆ ಇಂತಹ ಶಿಕ್ಷೆ ಕೊಟ್ಟಂತಾಗಿದೆ ಎಂಬ ಭಾವನೆಯು ಪಾಲಿಕೆಯ ಬಹುತೇಕ ಎಲ್ಲ ಅಧಿಕಾರಿ, ನೌಕರರಲ್ಲಿ ವ್ಯಕ್ತವಾಗುತ್ತಿದೆ. ಇದಲ್ಲದೆ ಪಾಲಿಕೆ ನೌಕರರ ಸಂಘದ ವತಿಯಿಂದ ಈ ಬಗ್ಗೆ ತುಮಕೂರು ನಗರದ ಶಾಸಕರು ಮತ್ತು ಲೋಕಸಭಾ ಸದಸ್ಯರಿಗೆ ಮನವಿ ಪತ್ರ ಸಲ್ಲಿಸಲೂ ಪಾಲಿಕೆಯಲ್ಲಿ ಸಿದ್ಧತೆಗಳು ನಡೆಯುತ್ತಿರುವುದು ಕಂಡುಬಂದಿತು. ಭೂಪಾಲನ್ ಅವರ ಅಧಿಕಾರಾವಧಿಯಲ್ಲಿ ಪೌರಕಾರ್ಮಿಕರಿಗೆ ವೇತನ ಪಾವತಿ ಸಕಾಲಕ್ಕೆ ಆಗುತ್ತಿತ್ತು ಎಂಬುದನ್ನೂ ಅನೇಕ ನೌಕರರು ನೆನಪಿಸಿಕೊಳ್ಳುತ್ತಿದ್ದಾರೆ.
      ಕೆಲವು ಗುತ್ತಿಗೆದಾರರು ಭೂಪಾಲನ್ ಪರವಾಗಿಯೇ ಮಾತನಾಡುತ್ತಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ತೆರಿಗೆ ಸಂಗ್ರಹ ಅಧಿಕಗೊಂಡು ಬಿಲ್ ಪಾವತಿಯು ನಿಯಮದ ಪ್ರಕಾರ ಆಗುತ್ತಿತ್ತು. ಆದ್ದರಿಂದ ಇವರೇ ಇದ್ದರೆ ಒಳೆತೆಂದು ಅನೇಕ ಗುತ್ತಿಗೆದಾರರು ಹೇಳುತ್ತಿದ್ದಾರೆ.
     ಬಿಜೆಪಿ ವಲಯದಲ್ಲೂ ಈ ವರ್ಗಾವಣೆ ಅಸಮಾಧಾನವನ್ನು ಉಂಟುಮಾಡಿದೆ. ಕೆಲವು ಬಿಜೆಪಿ ನಾಯಕರು ಮಂಗಳವಾರ ಬೆಳಗ್ಗೆ ಸಂಸದ ಜಿ.ಎಸ್.ಬಸವರಾಜು ಮತ್ತು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರನ್ನು ಭೇಟಿ ಮಾಡಿ ನೇರಾನೇರವಾಗಿಯೇ ಈ ವರ್ಗಾವಣೆಗೆ ತಮ್ಮ ಬೇಸರ ವ್ಯಕ್ತಪಡಿಸಿದರೆಂಬುದು ಈಗ ವೈರಲ್ ಆಗಿದೆ. ಇದಲ್ಲದೆ ಅನೇಕ ವಕೀಲರೂ ಆಗಮಿಸಿ, ವರ್ಗಾವಣೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link