ತುರುವೇಕೆರೆ
ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಸೋಮವಾರ ತಡ ರಾತ್ರಿ ಸುರಿದ ಭಾರಿ ಮಳೆಗೆ ಹಳ್ಳ, ತೋಟದ ಸಾಲುಗಳಲ್ಲಿ ನೀರು ಹರಿದಿದೆ.
ಪಟ್ಟಣದ ಸಮೀಪದ ಮುನಿಯೂರು, ಅರಳೀಕೆರೆ, ಸೂಳೇಕೆರೆ, ಗೋಣಿತುಮಕೂರು, ತಾವರೇಕೆರೆ ಟಿ.ಹೊಸಹಳ್ಳಿ, ಕೊಡಗೀಹಳ್ಳಿ, ಸಂಪಿಗೆ, ಆನಂದನಪಾಳ್ಯ, ಬಸವಾಪುರ, ಮಾದಿಹಳ್ಳಿ ಮೊದಲಾದ ಕಡೆ ಉತ್ತಮ ಮಳೆಯಾಗಿದ್ದು ತೋಟ ಹಾಗೂ ಅಡಿಕೆ ಸಾಲುಗಳಲ್ಲಿ ನೀರು ನಿಂತಿದೆ. ದಂಡಿನಶಿವರ ಹೋಬಳಿಯ ಬಸವಾಪುರ ಗ್ರಾಮದ ಕಟ್ಟೆಯು ತುಂಬಿದ್ದರಿಂದ ಕಟ್ಟೆಯ ಏರಿಯು ಒಡೆದು ಹೋಗಿ ಕಟ್ಟೆ ಹಿಂಭಾಗದ ಹೊಲಗಳಿಗೆ ನೀರು ನುಗ್ಗಿದೆ.
ಹಾಗೆಯೇ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿ ವರದರಾಜು ಮನೆಗೆ ಮಳೆ ನೀರು ನುಗ್ಗಿದೆ. ಮುನಿಯೂರು ಸಮೀಪದ ಕೊಂಡಜ್ಜಿ ರಸ್ತೆಯಲ್ಲಿನ ಸೇತುವೆ ನಿರ್ಮಾಣ ಮಾಡಲು ಸರ್ಮಿಸ್ ರಸ್ತೆಗೆ ಸಣ್ಣಪೈಪ್ ಅಳವಡಿಸಲಾಗಿ ಹಳ್ಳ ತುಂಬಿ ಮಳೆ ನೀರು ಸುಮಾರು ಎಕರೆ ಗದ್ದೆಗಳಲ್ಲಿ ಆವರಿಸಿ ರಾಗಿ, ಮೆಣಸಿನ ಸಸಿ ಸೇರಿದಂತೆ ಅಪಾರ ಬೆಳೆ ನೀರಿನಲ್ಲಿ ಕೊಳೆತು ಹೋಗುವಂತಾಗಿದೆ.
ರೈತ ವೆಂಕಟೇಶ್ ಮಾತನಾಡಿ, ಸೇತುವೆ ಮಾಡುತ್ತಿರುವ ಗುತ್ತಿಗೆದಾರ ಸರ್ವಿಸ್ ರಸ್ತೆಯಲ್ಲಿ ನೀರು ಹರಿಯಲು ದೊಡ್ಡ ಪೈಪ್ ಅಳವಡಿಸದೆ ಹಳ್ಳದಲ್ಲಿ ನೀರು ತುಂಬಿ ಸುಮಾರು ಎಕರೆ ಗದ್ದೆಗಳಿಗೆ ವ್ಯಾಪಿಸಿ ರಾಗಿ, ಮೆಣಸಿನ ಗಿಡಗಳು ಕೊಳೆತು ಹೋಗುವಂತಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಗುತ್ತಿಗೆದಾರ ರೈತರಿಗೆ ಆದ ನಷ್ಟದ ಪರಿಹಾರ ನೀಡಬೇಕು. ಕೂಡಲೇ ಲೋಕೋಪಯೋಗಿ ಇಲಾಖೆಯವರು ಗದ್ದೆಗಳಲ್ಲಿ ನಿಂತಿರುವ ನೀರನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
