ಅಧಿವೇಶನವನ್ನು ಎರಡು ವಾರಗಳ ಕಾಲ ನಡೆಸಿ : ಕುಮಾರಸ್ವಾಮಿ

ಬೆಂಗಳೂರು

  ವಿಧಾನಸಭೆ ಉಪಚುನಾವಣೆಗೆ ಸುಪ್ರೀಂಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ವಿಧಾನಮಂಡಲದ ಅಧಿವೇಶನವನ್ನು ಕನಿಷ್ಠ ಎರಡು ವಾರಗಳ ಕಾಲ ನಡೆಸಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

   ಈ ಬಾರಿಯ ಅಧಿವೇಶನವನ್ನು ಬೆಳಗಾವಿಯ ಸುವರ್ಣಸೌಧದಲ್ಲೇ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸುವ ಅವರು ಉಪಚುನಾವಣೆ ಮುಂದೂಡಿಕೆಯಾಗಿರುವುದರಿಂದ ಅಧಿವೇಶನ ನಡೆಸಲು ಯಾವುದೇ ಅಡೆ-ತಡೆ ಇಲ್ಲ. ಹೀಗಾಗಿ ಎರಡು ವಾರಗಳ ಕಾಲ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಸಬೇಕೆಂದರು.

   ಅವರು, ಉಪಚುನಾವಣೆ ನೆಪವೊಡ್ಡಿ ಸರ್ಕಾರ ಅಧಿವೇಶನವನ್ನು ಮೂರು ದಿನಗಳಿಗೆ ಮೊಟಕುಗೊಳಿಸಿತ್ತು. ಈಗ ಚುನಾವಣೆ ನಡೆಯುವುದಿಲ್ಲವಾದ್ದರಿಂದ ಅಧಿವೇಶನ ನಡೆಸುವ ಅವಧಿಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

    ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆ ಹಾಗೂ ಪ್ರವಾಹದಿಂದ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಮನೆ, ಸೇತುವೆ, ರಸ್ತೆ, ಬೆಳೆ ಹಾನಿಗೀಡಾಗಿದ್ದು, ಸಮಸ್ಯೆಗಳು ಹೆಚ್ಚಾಗಿವೆ. ಹೀಗಾಗಿ ಬೆಳಗಾವಿಯಲ್ಲೇ ಅಧಿವೇಶನ ನಡೆಸಬೇಕು. ನೆರೆ ಪರಿಹಾರ ಕಾರ್ಯ ಸಮರ್ಪಕವಾಗಿ ಕೈಗೊಳ್ಳದ ಹಿನ್ನೆಲೆಯಲ್ಲಿ ಆ ಭಾಗದ ಜನರು ಪ್ರತಿಭಟನೆ ಮಾಡುತ್ತಾರೆಂದು ಹೆದರಿ ಸರ್ಕಾರ ಪಲಾಯನ ಮಾಡಬಾರದು ಎಂದರು.

   ವಾಡಿಕೆಯಂತೆ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವುದು ಸೂಕ್ತ. ಅಲ್ಲದೆ ರಾಜ್ಯ ಬಜೆಟ್‍ಗೆ ಉಭಯ ಸದನಗಳ ಒಪ್ಪಿಗೆ ಪಡೆಯಬೇಕಿದೆ. ಇಲಾಖಾವಾರು ಬೇಡಿಕೆಗಳ ಮೇಲೆ ಚರ್ಚೆಯಾಗಬೇಕಿದೆ. ಮುಖ್ಯವಾಗಿ ನೆರೆ-ಬರದ ಬಗ್ಗೆಯೂ ಸುದೀರ್ಘ ಚರ್ಚೆಯಾಗಬೇಕು. ಹೀಗಾಗಿ ಕನಿಷ್ಠ 15 ದಿನಗಳಾದರೂ ಅಧಿವೇಶನ ನಡೆಸಬೇಕೆಂದು ಅವರು ಆಗ್ರಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap