ಬೆಂಗಳೂರು
ರಾಜಕೀಯವಾಗಿ ಪರ ವಿರೋಧಗಳು ಇರುವುದು ಸಹಜ. ಯಾವುದೇ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ಸದಾ ಸಿದ್ಧ ಎಂದು ಹೇಳುವ ಮೂಲಕ ಹೊಸಕೋಟೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಬಿಜೆಪಿ ಟಿಕೆಟ್ ಆಕಾಂಕ್ಷಿ ಶರತ್ ಬಚ್ಚೇಗೌಡ ವಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಹೊಸಕೋಟೆ ಮತಕ್ಷೇತ್ರದಿಂದ ಯಾರು ಕಣಕ್ಕಿಳಿಯಬೇಕು?. ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದನ್ನು ಬಿಜೆಪಿ ಹೈಕಮಾಂಡ್ ನಿರ್ಧರಿಸಲಿದೆ ಎಂದರು.ಸುಪ್ರಿಂಕೋರ್ಟ್ ನೀಡಿರುವ ಆದೇಶವನ್ನು ಸ್ವಾಗತಿಸಿದ ಎಂಟಿಬಿ ನಾಗರಾಜ್, ಚುನಾವಣಾ ಆಯೋಗ ಮತ್ತೆ ಉಪಚುನಾವಣೆಗೆ ದಿನಾಂಕ ಘೋಷಿಸಿದೆ. ಈ ಚುನಾವಣೆಯನ್ನು ತಾವು ಎದುರಿಸುತ್ತೇನೆ. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಬಿಜೆಪಿ ಸೇರ್ಪಡೆ ವಿಚಾರ ತೀರ್ಮಾನವಾಗಲಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕುರಿತು ಎಸ್ ಟಿ ಸೋಮಶೇಖರ್ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಸೋಮಶೇಖರ್ ಅಭಿಪ್ರಾಯ ವಾಸ್ತವದಿಂದ ಕೂಡಿದ್ದು, ಈ ಹೇಳಿಕೆ ಸರಿಯಾಗಿದೆ. ದಿನೇಶ್, ಸಿದ್ದರಾಮಯ್ಯಗೆ ಬಕೆಟ್ ಹಿಡಿಯುತ್ತಾರೆ. ಸಿದ್ದು ಚೇಲಾ ದಿನೇಶ್ ಎಂಬ ಹೇಳಿಕೆಗೆ ತಮ್ಮ ಸಹಮತವಿದೆ ಎಂದು ತಿಳಿಸಿದರು.
ಕೋಲಾರ ಲೋಕಸಭೆ ಚುನಾವಣೆ ಸೋಲಿನ ವಿಚಾರದಲ್ಲಿ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಂಸದ ಕೆ ಎಚ್ ಮುನಿಯಪ್ಪ ನಡುವಿನ ವಾಗ್ವಾದದ ವಿಚಾರವಾಗಿ ಪ್ರತಿಕ್ರಿಯಿಸಿದ ಎಂಟಿಬಿ, ಮುನಿಯಪ್ಪ ಅವರ ಸೋಲಿಗೆ ರಮೇಶ್ ಕುಮಾರ್ ಅವರೇ ಕಾರಣ. ಇದು ಜಗತ್ತಿಗೆ ಗೊತ್ತಿರುವ ವಿಷಯ. ಹೀಗಿದ್ದರೂ ಸಿದ್ದರಾಮಯ್ಯ, ರಮೇಶ್ ಕುಮಾರ್ ವಿರುದ್ಧ ಕ್ರಮ ಯಾಕೆ ತಗೊಂಡಿಲ್ಲ ಎಂದು ಮುನಿಯಪ್ಪ ಕೇಳಿರುವುದರಲ್ಲಿ ತಪ್ಪೇನಿಲ್ಲ. ಮುನಿಯಪ್ಪ ವಿರುದ್ಧ ರಮೇಶ್ ಕುಮಾರ್ ಚುನಾವಣೆಯಲ್ಲಿ ಪಕ್ಷವಿರೋಧಿಯಾಗಿ ಕೆಲಸ ಮಾಡಿರುವುದು ತಮಗೆಲ್ಲರಿಗೂ ಗೊತ್ತಿರುವ ವಿಚಾರ ಎಂದರು.
ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೂ ತಮಗೂ ಈಗ ಯಾವುದೇ ಸಂಬಂಧ ಇಲ್ಲ. ತಾವೀಗ ಈಗ ಕಾಂಗ್ರೆಸ್ ನಲ್ಲಿಲ್ಲ. ನಮ್ಮ ಗಮನ ಏನಿದ್ದರೂ ನ್ಯಾಯಾಲಯದ ತೀರ್ಪಿನತ್ತವೇ ಹೊರತು ಕಾಂಗ್ರೆಸ್ ಕಡೆಗೆ ಅಲ್ಲ ಎಂದು ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ